ವಿನ್ನರ್ಸ್ ತಂಡದ ಮಾಲೀಕರಾದ ಡಾ. ಅನಂತ ಕಾರ್ಕಳ ಮಾತನಾಡಿ, ಮಾಧ್ಯಮದವರು ನಾವೆಲ್ಲಾ ಒಂದು ಎನ್ನುವ ಉದ್ದೇಶದಿಂದ ಕ್ರಿಕೆಟ್ ಆಯೋಜನೆ ಮಾಡಿದ್ದು ಐತಿಹಾಸಿಕ ಕ್ಷಣವಾಗಿದೆ ಎಂದರು.

ಗದಗ: ಕಕಾನಿಪ ಸಂಘದ ಸದಸ್ಯರಿಗಾಗಿ 2026 ಮಾಧ್ಯಮ ಕ್ರಿಕೆಟ್ ಲೀಗ್ ಆಯೋಜನೆ ಮಾಡಲಾಗಿದ್ದು, ನಗರದ ವಿಡಿಎಸ್‌ಟಿಸಿ ಮೈದಾನದಲ್ಲಿ ಆ. 19ರಿಂದ ಪಂದ್ಯಾವಳಿಗಳು ನಡೆಯಲಿವೆ. ಜಿಲ್ಲೆಯ ಒಟ್ಟು ನಾಲ್ಕು ತಂಡಗಳು ಭಾಗವಹಿಸಲಿವೆ ಎಂದು ಕಕಾನಿಪ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಟವಾಡುವವರು ಕಡ್ಡಾಯವಾಗಿ ಸಂಘದ ಸದಸ್ಯತ್ವ ಕಾರ್ಡ್ ಹೊಂದಿರಬೇಕು. ಈಗಾಗಲೇ ಒಂದು ತಂಡದಲ್ಲಿ 14 ಸದಸ್ಯರಿದ್ದು, ಹೆಚ್ಚುವರಿಯಾಗಿ ಮತ್ತೋರ್ವ ಸದಸ್ಯನನ್ನು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ವಿನ್ನರ್ಸ್ ತಂಡದ ಮಾಲೀಕರಾದ ಡಾ. ಅನಂತ ಕಾರ್ಕಳ ಮಾತನಾಡಿ, ಮಾಧ್ಯಮದವರು ನಾವೆಲ್ಲಾ ಒಂದು ಎನ್ನುವ ಉದ್ದೇಶದಿಂದ ಕ್ರಿಕೆಟ್ ಆಯೋಜನೆ ಮಾಡಿದ್ದು ಐತಿಹಾಸಿಕ ಕ್ಷಣವಾಗಿದೆ. ಆಟದಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಲು ಸಹಾಯವಾಗುತ್ತದೆ. ಎಲ್ಲ ಆಟಗಾರರು ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಬೇಕು ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ನೈಟ್ ರೈಡರ್ಸ್ ಮಾಲೀಕ ಆನಂದಯ್ಯ ವಿರಕ್ತಮಠ, ವಿನ್ನರ್ಸ್ ತಂಡದ ಮಾಲೀಕರಾದ ಟಿ.ಎನ್. ಬಾಂಡಗೆ, ಸುನೀಲ ತೆಂಬದಮನಿ, ಕ್ರೀಡಾ ಸಮಿತಿ ಸದಸ್ಯರಾದ ವೆಂಕಟೇಶ ಇಮರಾಪೂರ, ಸಂತೋಷ ಕೊಣ್ಣೂರ ಸೇರಿದಂತೆ ವರದಿಗಾರರು ಹಾಗೂ ಛಾಯಾಗ್ರಾಹಕರು ಉಪಸ್ಥಿತರಿದ್ದರು.

ಕ್ರೀಡಾ ಮನೋಭಾವ: ದೈಹಿಕವಾಗಿ ಸದೃಢರಾಗುವ ನಿಟ್ಟಿನಲ್ಲಿ ಮಾಧ್ಯಮ ಮಿತ್ರರಿಗೆ ಕ್ರಿಕೆಟ್ ಲೀಗ್ ಆಯೋಜಿಸಲಾಗಿದ್ದು, ಎಲ್ಲ ಆಟಗಾರರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ರೂರಲ್ ಕಿಂಗ್ಸ್ ತಂಡದ ಮಾಲೀಕ, ಎಸ್ಪಿ ಜಗದೀಶ್ ತಿಳಿಸಿದರು. ವಿಶೇಷ ವರದಿಗೆ ಬಹುಮಾನ: ಕಕಾನಿಪ ಸಂಘದಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಪಂದ್ಯಗಳ ವರದಿಗಾರಿಕೆಗೆ ಕೂಡಾ ಸಂಘದಿಂದ ವಿಶೇಷ ಬಹುಮಾನ ನೀಡಲಾಗುವುದು. ರಾಜ್ಯ ಹಾಗೂ ಸ್ಥಳಿಯ ಪತ್ರಿಕೆಗಳ ವರದಿಗೆ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ. ಜತೆಗೆ ದೃಶ್ಯ ಮಾಧ್ಯಮದವರದಿಗೂ ಬಹುಮಾನವಿರುತ್ತದೆ. ಉತ್ತಮ ಛಾಯಾಗ್ರಾಹಕರಿಗೆ ಬಹುಮಾನ ನೀಡಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.