ಸಾರಾಂಶ
ಗಜೇಂದ್ರಗಡ: ಪಟ್ಟಣದಲ್ಲಿ ನಡೆಯುವ ೧೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ರಚಿಸಿರುವ ವಿವಿಧ ಸಮಿತಿ ಸಿದ್ಧತೆಯನ್ನು ಭಾಗಶಃ ಪೂರ್ಣಗೊಳಿಸಿದ್ದು ಸಂತಸದ ತಂದಿದೆ ಎಂದು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ರೋಣ ರಸ್ತೆಯ ಸಿಬಿಎಸ್‌ಸಿ ಶಾಲೆಯಲ್ಲಿ ಜ.೨೦ ಹಾಗೂ ೨೧ ರಂದು ನಡೆಯಲಿರುವ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಸ್ಥಳೀಯ ಜಿ.ಕೆ. ಬಂಡಿ ಗಾರ್ಡ್‌ನಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು.ಜಿಲ್ಲಾ ಸಮ್ಮೇಳನದಲ್ಲಿ ನಮ್ಮ ಪರಂಪರೆ ಹಾಗೂ ಸಂಸ್ಕೃತಿ ಪ್ರತಿಬಿಂಬವಾಗಲಿದ್ದು, ಕರ್ನಾಟಕ ಏಕೀಕರಣ ಸೇರಿದಂತೆ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ತಾಲೂಕು ನಮ್ಮದು ಎನ್ನುವ ಹೆಮ್ಮೆಯಿದೆ. ಪಟ್ಟಣದಲ್ಲಿ ನಡೆಯುತ್ತಿರುವ ಜಿಲ್ಲಾ ೧೦ನೇ ಸಾಹಿತ್ಯ ಸಮ್ಮೇಳನವು ಐತಿಹಾಸಿಕವಾಗಿದ್ದು, ಸಮ್ಮೇಳನದ ಯಶಸ್ಸಿಗೆ ರಚಿಸಿದ ಸಾಂಸ್ಕೃತಿಕ, ಸಾಹಿತ್ಯಿಕ, ವೇದಿಕೆ, ಪ್ರಸಾದ, ಪ್ರಚಾರ ಹಾಗೂ ಅನೇಕ ಸಮಿತಿ ತಮ್ಮ ಕಾರ್ಯಈಗಾಗಲೇ ಭಾಗಶಃ ಪೂರ್ಣಗೊಳಿಸಿರುವ ವರದಿ ನೀಡಿದ್ದು ಖುಷಿ ತಂದಿದೆ. ಸಾಹಿತ್ಯ ಸಮ್ಮೇಳನ ನಮ್ಮ ಹಬ್ಬವಾಗಿದ್ದು ಎಲ್ಲರೂ ಸಂಭ್ರಮದಿಂದ ಸಮ್ಮೇಳನ ಯಶಸ್ವಿಗೊಳಿಸೋಣ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ನಡೆಯುವ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಅನೇಕ ಪ್ರಥಮಗಳಿಗೆ ಕಾರಣವಾಗಿದ್ದು, ರಾಜ್ಯದ ಇತಿಹಾಸದಲ್ಲಿ ಪಟ್ಟಣದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನವು ಐತಿಹಾಸಿಕ ಹಾಗೂ ಮಾದರಿಯಾಗಲಿದೆ. ಜಿಲ್ಲಾ ಸಮ್ಮೇಳನ ವಾತಾವರಣ ಸೃಷ್ಠಿಸಲು ಈಗಾಗಲೇ ಶಾಸಕ ಜಿ.ಎಸ್. ಪಾಟೀಲ ಸೇರಿ ಜಿಲ್ಲೆಯಾದ್ಯಂತ ಪ್ರಚಾರ ಹಾಗೂ ಜಾಗೃತಿ ಸಭೆ ನಡೆಸಿದ್ದು ವ್ಯಾಪಕ ಸ್ಪಂದನೆ ಸಿಕ್ಕಿದೆ ಎಂದ ಅವರು, ಜ. ೧೯ ರಂದು ಜಕ್ಕಲಿ ಗ್ರಾಮದಿಂದ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯಲ್ಲಿ ನೆರೆಯ ಜಿಲ್ಲೆ ಹಾಗೂ ಸ್ಥಳೀಯ ತಂಡಗಳು ಭಾಗವಹಿಸಲಿದ್ದು, ಜ. ೨೦ ಸಮ್ಮೇಳನದ ಉದ್ಘಾಟನಾ ವೇದಿಕೆಗೆ ಆಗಮಿಸಲಿದೆ ಎಂದರು.ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೇರಮನ್ ಮುದಿಯಪ್ಪ ಮುಧೋಳ, ಪುರಸಭೆ ಸದಸ್ಯ ರಾಜು ಸಾಂಗ್ಲೀಕರ, ಕಸಪಾ ತಾಲೂಕಾಧ್ಯಕ್ಷ ಎ.ಪಿ. ಗಾಣಿಗೇರ, ಸಿದ್ದಣ್ಣ ಬಂಡಿ, ಶಶಿಧರ ಹೂಗಾರ, ವೀರಣ್ಣ ಶೆಟ್ಟರ್, ರಫೀಕ್ ತೋರಗಲ್, ಶ್ರೀಕಾಂತ ಅವಧೂತ, ಚಂಬಣ್ಣ ಚವಡಿ, ವಿ.ಬಿ. ಸೋಮನಕಟ್ಟಿಮಠ, ಬಿ.ಎಸ್. ಶೀಲವಂತರ, ಶರಣು ಪೂಜಾರ, ಶರಣಪ್ಪ ಚಳಗೇರಿ, ಸಿದ್ದಣ್ಣ ಚೋಳಿನ, ಶ್ರೀಧರ ಬಿದರಳ್ಳಿ, ದುರಗಪ್ಪ ಮುಧೋಳ, ಬಸವರಾಜ ಹೂಗಾರ, ಅರಿಹಂತ ಬಾಗಮಾರ, ನಿಂಗಪ್ಪ ಕಾಶಪ್ಪನವರ, ಸಿದ್ದು ಗೊಂಗಡಶೆಟ್ಟಿಮಠ ಸೇರಿದಂತೆ ಅಧಿಕಾರಿಗಳು ಇದ್ದರು.