ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ನಡೆದಿದ್ದ 22 ಕಳ್ಳತನ ಪ್ರಕರಣಗಳನ್ನು ವಿಜಯಪುರ ಜಿಲ್ಲಾ ಪೊಲೀಸರು ಬೇಧಿಸಿದ್ದು, ಒಟ್ಟು 36 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ನಗರದ ಚಿಂತನಾ ಹಾಲ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಬಸವನ ಬಾಗೇವಾಡಿ ಉಪ-ವಿಭಾಗದ ಮುದ್ದೇಬಿಹಾಳ, ನಿಡಗುಂದಿ, ತಾಳಿಕೋಟಿ, ಬಸವನ ಬಾಗೇವಾಡಿ ಹಾಗೂ ಕೂಡಗಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ತೋಟದ ಮನೆ, ದೇವಸ್ಥಾನದ ಬಾಗಿಲು, ಮನೆ ಬಾಗಿಲು ಮುರಿದು ಚಿನ್ನಾಭರಣಗಳು ಹಾಗೂ ನಗದು ಕಳ್ಳತನ, ಬಂಗಾರದ ತಾಳಿಸರ ಸುಲಿಗೆ ಪ್ರಕರಣ, ಮೋಸ ಮಾಡಿ ಕಳವು ಪ್ರಕರಣ, ಮೋಟಾರ್ ಬೈಕ್‌ ಹಾಗೂ ರೈತರ ಜಮೀನಿನಲ್ಲಿರುವ ಬೋರವೆಲ್ ಪಂಪ್‌ಸೆಟ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನ, ಬ.ಬಾಗೇವಾಡಿ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ನೇತೃತ್ವದಲ್ಲಿ ಆಯಾ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿಯ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತಂಡಗಳು ಒಟ್ಟು 22 ವಿವಿಧ ಸ್ವತ್ತಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 36 ಆರೋಪಿಗಳನ್ನು ಬಂಧಿಸಿ, ಆರೋಪಿತರಿಂದ ₹1,27,38,800 ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು, 02 ಕಾರುಗಳು, 17 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ, ಸಿಪಿಐಗಳಾದ ಗುರುಶಾಂತ ದಾಶ್ಯಾಳ, ಮಲ್ಲಯ್ಯ ಮಠಪತಿ, ಶರಣಗೌಡ ಗೌಡರ ಸೇರಿದಂತೆ ವಿವಿಧ ಠಾಣೆಗಳ ಪಿಎಸ್‌ಐಗಳು ಹಾಗೂ ಸಿಬ್ಬಂದಿ ಇದ್ದರು.ಏನೇನು ಪ್ರಕರಣಗಳು?

1. ಮುದ್ದೇಬಿಹಾಳ ಪೊಲೀಸ್ ಠಾಣೆ:

2026 ಜ. 21ರಂದು ಜಮಖಂಡಿ ಎಆರ್‌ಟಿಓ ಅಧಿಕಾರಿ ಜಯರಾಮ ನಾಯಕ ಅವರಿಗೆ ಸೇರಿದ ಮುದ್ದೇಬಿಹಾಳ ತಾಲೂಕಿನ ನೇಬಗೆರಿ ತಾಂಡಾದ ತೋಟದ ಮನೆಯ ಬಾಗಿಲು ಮುರಿದು ಕಳ್ಳತನ ಎಸಗಿದ್ದ, ಗುರುರಾಜ, ಗುರುಕುಮಾರ, ಸೈಯದ ಎಂಬ ಮೂವರು ಆರೋಪಿಗಳನ್ನು ಬಂಧಿಸಿ, ಕಳ್ಳತನವಾಗಿದ್ದ 26 ತೊಲೆ ಬಂಗಾರ, 3.5 ಕೆ.ಜಿ ಬೆಳ್ಳಿ, ಹಾಗೂ ₹4,30,000 ನಗದು ಮತ್ತು ಕೃತ್ಯಕ್ಕೆ ಬಳಸಿದ ಇನೋವಾ ಕಾರು ಸೇರಿ ಒಟ್ಟು ₹51,35,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.2. ಮುದ್ದೇಬಿಹಾಳ ಪೊಲೀಸ್ ಠಾಣೆ:


2025 ಜು.14 ರಂದು ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಮನೆಗಳ್ಳತನ ಮಾಡಿದ್ದ ಬಸವರಾಜ ಹೊಕ್ರಾಣಿ ಎಂಬ ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ 89 ಗ್ರಾಂ ಬಂಗಾರದ ಆಭರಣಗಳು, 110 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ₹37,932 ಸೇರಿದಂತೆ ಒಟ್ಟು ₹7,55,432 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2025 ಜೂನ್ 27ರಂದು ಮುದ್ದೇಬಿಹಾಳ ಬಸ್ತಿ ಓಣಿಯಲ್ಲಿನ ಮನೆಕಳ್ಳತನ ಮಾಡಿದ್ದ 04 ಜನ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಪತ್ತೆ ಮಾಡಿ, ಅವರಿಂದ 9.5 ತೊಲಿ ಬಂಗಾರದ ಆಭರಣಗಳು ಮತ್ತು ರೂ. 1,75,000 ಸೇರಿ ಒಟ್ಟು 12,75,000 ರೂ ಗಳ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.3. ನಿಡಗುಂದಿ ಪೊಲೀಸ್ ಠಾಣೆ:

2025 ಆಗಸ್ಟ್ 22ರಂದು ತಾಲೂಕಿನ ಕಿರಶ್ಯಾಳ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುವಾಗ ನಿರ್ಮಲಾ ಎಂಬುವವರ 37 ಗ್ರಾಂ ತೂಕದ ಬಂಗಾರದ ಸರ ಕಿತ್ತುಕೊಂಡಿದ್ದ ಆರೋಪಿ ರಮೇಶ ಚಿತ್ತರಗಿ ಬಂಧಿಸಿದ್ದು, ₹1,95,000 ಮೌಲ್ಯದ ಸರ ವಶಪಡಿಸಿಕೊಳ್ಳಲಾಗಿದೆ.4. ತಾಳಿಕೋಟಿ ಠಾಣೆ:

2023 ಜು.01ರಂದು ತಾಳಿಕೋಟಿಯ ಗಂಗಾ ದಾಬಾದ ಮುಂದೆ ನಿಲ್ಲಸಿದ್ದ ಬಜಾಜ್ ಪಲ್ಸರ್ ಎನ್‌ಎಸ್-200 ಸಿಸಿ ಬೈಕ್ ಕದ್ದಿದ್ದ ಪ್ರಕಾಶ ತಳವಾರನನ್ನು ಬಂಧಿಸಿ, ಆತನಿಂದ 5 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

5. ಬಸವನ ಬಾಗೇವಾಡಿ ಠಾಣೆ: 2024 ಡಿ. 24ರಂದು ಕಳ್ಳತನ ಮಾಡಿದ್ದ ಅನೀಲ ಹಾಗೂ ಕಾರ್ತಿಕ ಬಂಧಿಸಿದ್ದು, ₹70,000 ಮೌಲ್ಯದ 1 ತೊಲೆ ಬಂಗಾರದ ಬೋರಮಾಳ, ₹70,000 1 ತೊಲೆ ಬಂಗಾರದ ಮೆಲಗುಂಡ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.6. ಕೂಡಗಿ ಪೊಲೀಸ್ ಠಾಣೆ:

2025 ಸೆ.18ರಂದು ಮಸೂತಿಯಲ್ಲಿ ಮನೆಗಳ್ಳತನ ಮಾಡಿದ್ದ ಅಬ್ದುಲ ಚೀನಿ, ಹೀರಾ ಹುಣಸಿಮರದ ಬಂಧಿಸಿದ್ದು, ಎರಡು ಬೈಕ್ ಹಾಗೂ 4,50,000 ರೂ ಮೌಲ್ಯದ ಸುಮಾರು 40 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 7. ನಿಡಗುಂದಿ ಪೊಲೀಸ್ ಠಾಣೆ:

ತಾಲೂಕಿನ 2023ರಲ್ಲಿ ವಂದಾಲ ಗ್ರಾಮದ ಬನಶಂಕರಿ ಗುಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳಾದ ಸೋಮನಾಥ ಕೂಚಿ, ಪ್ರಕಾಶ ಬಗಲಿ ಬಂಧಿಸಿದ್ದು, ಬಂಧಿತರಿಂದ ಒಟ್ಟು 02 ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ಒಂದು ಬೈಕ್, 35,000 ಮೌಲ್ಯದ 5ಗ್ರಾಂ ಬಂಗಾರದ ಬೋರಮಳಾ, 35,000 ಮೌಲ್ಯದ 5ಗ್ರಾಂ ಬಂಗಾರದ ಮೇಲಗುಂಡ, 25,000 ಮೌಲ್ಯದ ಬಂಗಾರದ ತಾಳಿ ಸರ ವಶಪಡಿಸಿಕೊಳ್ಳಲಾಗಿದೆ.