ಗಿರಿಯಾಪುರ ಶಾಲೆಯಲ್ಲಿ ಜಿಲ್ಲಾಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ: ಸೂರಿ ಶ್ರೀನಿವಾಸ್ ಮಾಹಿತಿ

| Published : Nov 24 2025, 01:45 AM IST

ಗಿರಿಯಾಪುರ ಶಾಲೆಯಲ್ಲಿ ಜಿಲ್ಲಾಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ: ಸೂರಿ ಶ್ರೀನಿವಾಸ್ ಮಾಹಿತಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಕಡೂರು ತಾಲೂಕಿನ ಗಿರಿಯಾಪುರ ಗುರು ಕೃಪ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಜನವರಿ ಯಲ್ಲಿ ಹಾಗೂ ರಾಜ್ಯ ಮಟ್ಟದ ಚುಟುಕು ಸಮ್ಮೇಳನವನ್ನು ಶೃಂಗೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕ.ಸಾ.ಪ ಕಾರ್ಯಕಾರಿಣಿ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಡೂರು ತಾಲೂಕಿನ ಗಿರಿಯಾಪುರ ಗುರು ಕೃಪ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಜನವರಿ ಯಲ್ಲಿ ಹಾಗೂ ರಾಜ್ಯ ಮಟ್ಟದ ಚುಟುಕು ಸಮ್ಮೇಳನವನ್ನು ಶೃಂಗೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಭಾನುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಿರಿಯಾಪುರ ಶಾಲೆಯಲ್ಲಿ 500 ಮಕ್ಕಳಿದ್ದು ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ 1 ಸಾವಿರ ಮಕ್ಕಳು ಸೇರುವ ನಿರೀಕ್ಷೆ ಇದೆ. ಮಕ್ಕಳ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಮಕ್ಕಳನ್ನೇ ಆಯ್ಕೆ ಮಾಡಲಿದ್ದೇವೆ. ಮುಂದಿನ ಫೆಬ್ರವರಿ ಅಥವಾ ಮಾರ್ಚ ತಿಂಗಳಲ್ಲಿ ಕಡೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ರಾಜ್ಯ ಮಟ್ಟದ ಚುಟುಕು ಸಮ್ಮೇಳನವನ್ನು ಶೃಂಗೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಮ್ಮೇಳನ ಅಧ್ಯಕ್ಷರ ಆಯ್ಕೆ ಆಗಬೇಕಾಗಿದೆ. ಶೃಂಗೇರಿ ಶ್ರೀ ಮಠದಲ್ಲಿ ಸಮ್ಮೇಳನದ ಬಗ್ಗೆ ಪ್ರಸ್ತಾವನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದರು.

ಜಿಲ್ಲಾ ಗಮಕ ಸಾಹಿತ್ಯ ಸಮ್ಮೇಳನ ಮಾಡಲು ಚಿಂತನೆ ನಡೆಸಲಾಗಿದೆ. ಇದುವರೆಗೂ ಗಮಕ ಸಾಹಿತ್ಯ ಸಮ್ಮೇಳನ ನಡೆಸಿಲ್ಲ. ಕಡೂರು ತಾಲೂಕಿನ ದೇವನೂರು ಅಥವಾ ಚಿಕ್ಕಮಗಳೂರಿನಲ್ಲಿ ಗಮಕ ಸಾಹಿತ್ಯ ಸಮ್ಮೇಳನ ನಡೆಸುತ್ತೇವೆ. ದೇವನೂರಿನಲ್ಲಿ ನಡೆಸಿದರೆ ಗಮಕ ಸಮ್ಮೇಳನಕ್ಕೆ ಹೆಚ್ಚು ಮೆರಗು ಬರಲಿದೆ ಎಂದರು.

ಜಿಲ್ಲೆಯಲ್ಲಿ ಗ್ರಾಮ ಸಮ್ಮೇಳನ, ಹೋಬಳಿ ಸಮ್ಮೇಳನ ನಡೆಸಲು ಚರ್ಚೆ ನಡೆಸಲಾಗುತ್ತಿದೆ. ಈ ಹಿಂದೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಕಸಾಪ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗುತ್ತಿತ್ತು. ಈ ವರ್ಷದಿಂದ ತಾಲೂಕು ಕೇಂದ್ರದಲ್ಲೂ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತಿದ್ದೇವೆ. ಕಸಾಪ ಮುಖ್ಯ ಕಾರ್ಯಕ್ರಮವಾದ ನುಡಿ ನಿತ್ಯೋತ್ಸವ, ಶ್ರಾವಣ ಸಂಜೆ ಕಾರ್ಯಕ್ರಮ ಈಗಾಗಲೇ ನಡೆಸಲಾಗಿದೆ. ಶ್ರಾವಣ ಮಾಸದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ಎಲ್ಲಾ ತಾಲೂಕುಗಳಲ್ಲೂ ಉತ್ತಮವಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ ಮಂಚೇಗೌಡ, ಎನ್‌.ಆರ್.ಪುರ ತಾ.ಕಸಾಪ ಅಧ್ಯಕ್ಷ ಪೂರ್ಣೇಶ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಪ್ರಕಾಶ್, ಜಿಲ್ಲಾ ಸಂಚಾಲಕರಾದ ಕಣಿವೆ ವಿನಯ್, ಎಸ್‌.ಎಸ್.ಸಂತೋಷಕುಮಾರ್, ಚಂದ್ರಕಲಾ, ಪಾಂಡುರಂಗ, ತರೀಕೆರೆ ಭಗವಾನ್, ಎನ್‌.ಆರ್.ಪುರ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡ ಸ್ವಾಮಿ, ಎನ್.ಆರ್.ಪುರ ಕಸಾಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ಎನ್‌.ಆರ್.ಪುರ ಹೋಬಳಿ ಅಧ್ಯಕ್ಷ ಉದಯಗಿಲ್ಲಿ, ತಾ.ಕಸಾಪ ನಿಕಟಪೂರ್ವ ಅಧ್ಯಕ್ಷ ಎನ್‌.ಎಂ.ಕಾಂತರಾಜ್‌, ಕ.ಸಾ.ಪ ಶೃಂಗೇರಿ ತಾ.ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ, ಕೊಪ್ಪ ತಾ. ಅಧ್ಯಕ್ಷ ಹರ್ಷ,ಕಳಸ ತಾ. ಅಧ್ಯಕ್ಷ ಸತೀಶ್ಚಂದ್ರ, ಕಡೂರು ತಾ.ಅಧ್ಯಕ್ಷ ಪರಮೇಶ್ವರ, ಚಿಕ್ಕಮಗಳೂರು ತಾ. ಅಧ್ಯಕ್ಷ ದಯಾನಂದ ಮತ್ತಿತರರು ಇದ್ದರು.

-- ಬಾಕ್ಸ್ --

ದತ್ತಿ ಉಪನ್ಯಾಸ ಮುಂದುವರಿಸುವ ಚಿಂತನೆ

ಜಿಲ್ಲೆಯಲ್ಲಿ 188 ದತ್ತಿಗಳಿದ್ದು ಎಲ್ಲಾ ದತ್ತಿ ಉಪನ್ಯಾಸ ಮುಕ್ತಾಯವಾಗಿದೆ. ದತ್ತಿ ದಾನ ನೀಡಿದ ಹಣವನ್ನು ಬ್ಯಾಂಕಿನಲ್ಲಿಟ್ಟು ಬಡ್ಡಿಯಿಂದ ದತ್ತಿ ಉಪನ್ಯಾಸ ಮಾಡಲಾಗುತ್ತಿತ್ತು. ಬಡ್ಡಿ ಕಡಿಮೆ ಬರುತ್ತಿರುವುದರಿಂದ 3-4 ದತ್ತಿ ಸೇರಿಸಿ ಉಪನ್ಯಾಸ ಹಮ್ಮಿಕೊಳ್ಳುತ್ತಿದ್ದೇವೆ. 24 ವರ್ಷಗಳ ಹಿಂದೆ ಅಜ್ಜಂಪುರ ಸೂರಿ ಕಸಾಪ ಜಿಲ್ಲಾಧ್ಯಕ್ಷರಾಗಿದ್ದಾಗ ಸಾಹಿತಿಗಳ ಮಾಹಿತಿ ಕೋಶ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈಗ ಈ ಮಾಹಿತಿ ಕೋಶಕ್ಕೆ ಹೊಸ ಲೇಖಕರ ಮಾಹಿತಿ ನೀಡಿ ಹೊಸದಾಗಿ ಮಾಹಿತಿ ಕೋಶ ಹೊರತರಲಾಗುವುದು. ಜಿಲ್ಲೆಯ ದಾನಿಗಳನ್ನು ಹಿಡಿದು ಈ ಕಾರ್ಯಕ್ರಮ ಮುಂದುವರಿಸುವ ಚಿಂತನೆ ನಡೆಸಿದ್ದೇವೆ ಎಂದು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

-- ಬಾಕ್ಸ್ --

ಚಿಕ್ಕಮಗಳೂರು ಕನ್ನಡ ಭವನ ನವೀಕರಣ

ಜಿಲ್ಲೆಯ ಚಿಕ್ಕಮಗಳೂರು, ಕೊಪ್ಪ, ಕಡೂರು,ಶೃಂಗೇರಿಯಲ್ಲಿ ಕನ್ನಡ ಭವನ ನಿರ್ಮಾಣವಾಗಿದೆ. ಕಳಸದಲ್ಲಿ ಶಾಲಾ ಸಮೀಪದಲ್ಲೇ ಕನ್ನಡ ಭವನಕ್ಕೆ ನಿವೇಶನ ನೀಡಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಮೂಡಿಗೆರೆ, ತರೀಕೆರೆಯಲ್ಲಿ ಕನ್ನಡ ಭವನಕ್ಕೆ ಜಾಗ ಗುರುತು ಮಾಡಲಾಗಿದೆ. ಕಡೂರು ಕನ್ನಡ ಭವನಕ್ಕೆ ನಿರ್ವಹಣಾ ಸಮಿತಿ ರಚಿಸ ಲಾಗಿದೆ. ಪ್ರತಿ ತಿಂಗಳು ಬಾಡಿಗೆಯಿಂದ ಆದಾಯ ಬರುತ್ತಿದೆ. ಅಲ್ಲದೆ ಸಂಸದರ ನಿಧಿಯಿಂದ ಕಡೂರು ಕನ್ನಡ ಭವನವನ್ನು ನವೀಕರಿಸಲಾಗಿದೆ. ಚಿಕ್ಕಮಗಳೂರು ಕನ್ನಡ ಭವನವನ್ನು ₹20 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗುವುದು. ಅದರಲ್ಲಿ ವಾಚನಾಲಯ, ಬೋಜನ ಕೊಠಡಿ ನಿರ್ಮಿಸಲಾಗುವುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.