ಸಾರಾಂಶ
ಜನತೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಜಿಲ್ಲಾ ಮಟ್ಟದ ಜನತಾ ದರ್ಶನ ಪಟ್ಟಣದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಲು ಚಿಂತಿಸಲಾಗಿತ್ತು, ಆದರೆ ವಿಧಾನಸಭಾ ಅಧಿವೇನಶದ ಕಾರಣ ಶಾಸಕರು ಜನತಾ ದರ್ಶನಕ್ಕೆ ಬರಲು ಸಾಧ್ಯವಾಗಲಿಲ್ಲ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಜನರ ಸಮಸ್ಯೆಗಳನ್ನು ಆಲಿಸುವ ಜನತಾ ದರ್ಶನ ಎಲ್ಲ ಕಡೆ ಹೆಚ್ಚು ಪರಿಣಾಮಕಾರಿಯಾಗಿದ್ದರೆ ತಾಲೂಕು ಕೇಂದ್ರದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನದಕ್ಕೆ ಜನರೇ ಬಾರದೆ ಕುರ್ಚಿಗಳು ಖಾಲಿ ಖಾಲಿಯಾಗಿದ್ದವು. ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ಪ್ರಚಾರದ ಕೊರತೆ ಒಂದೆಡೆಯಾದರೆ ಮತ್ತೊಂದೆಡೆ ಜಿಲ್ಲಾ ಮಟ್ಟದ ಯಾವ ಇಲಾಖೆ ಅಧಿಕಾರಿಗಳೂ ಸಹ ಸಭೆಗೆ ಬಾರದೆ ಗೈರಾಗಿದ್ದು ಕಂಡು ಬಂದಿದತು.ನೂರಾರು ಕುರ್ಚಿಗಳು ಖಾಲಿ ಖಾಲಿ
ಸಾರ್ವಜನಿಕರಿಗಾಗಿ ಹಾಕಿದ್ದ ನೂರಾರು ಕುರ್ಚಿಗಳು ಖಾಲಿಯಾಗಿದ್ದವು.ಬೆಳಗ್ಗೆ ೧೦ಗಂಟೆಗೆ ಜನತಾ ದರ್ಶನಕ್ಕೆ ಸಮಯ ನಿಗದಿಯಾಗಿತ್ತು.ಆದರೆ ೧೨ಗಂಟೆಯಾದರೂ ಬೆರಳೆಣಿಕೆಷ್ಟು ಜನರು ಮಾತ್ರ ಹಾಜರಿದ್ದರು. ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ಜಿಲ್ಲಾಧಿಕಾರಿ,ಜಿಪಂ ಸಿಇಒ, ಎಡಿಸಿ, ಉಪ ವಿಭಾಗಾಧಿಕಾರಿ ಸೇರಿದಂತೆ ಯಾವುದೇ ಇಲಾಖೆ ಅಧಿಕಾರಿಗಳೂ ಸಹ ಬಂದಿರಲಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳು ಮಾತ್ರ ಹಾಜರಿದ್ದರು.ಹಿಂದೆ ಸಲ್ಲಿಸಿದ್ದ ಅರ್ಜಿ ಏನಾದವು?
ಕಳೆದ ಎರಡು ತಿಂಗಳ ಹಿಂದೆ ಶಾಸಕರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನದಲ್ಲಿ ೧೮೬ಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಅದರ ಬಗ್ಗೆ ಕ್ರಮ ಕೈಗೊಂಡ ಮಾಹಿತಿಯೇ ಇಲ್ಲ. ಈಗ ಮತ್ತೆ ಅರ್ಜಿ ಕೊಟ್ಟರೆ ಏನೂ ಆಗುವುದಿಲ್ಲ. ಸುಮ್ಮನೆ ಸಮಯ ವ್ಯರ್ಥ ಎಂಬುದು ಸಾರ್ವಜನಿಕರ ಅಭಿಪ್ರಾಯ.ಜನರಿಗೆ ಸಮಸ್ಯೆಗಳಿಲ್ಲವೇ?
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ತಹಸಿಲ್ದಾರ್ ರಶ್ಮಿ ಜಿಲ್ಲಾ ಮಟ್ಟದ ಜನತಾ ದರ್ಶನ ಪಟ್ಟಣದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಲು ಚಿಂತಿಸಲಾಗಿತ್ತು, ಆದರೆ ಇಂದಿನ ಸಭೆಗೆ ಸ್ಥಳಿಯ ಶಾಸಕರು ವಿಧಾನಸಭೆ ಅಧಿವೇಶನ ಇರುವುದರಿಂದ ಬಂದಿಲ್ಲ. ಆದರೆ ಜನರೂ ಸಹ ನಾವು ನಿರೀಕ್ಷೆ ಮಾಡಿದಷ್ಟು ಬರಲಿಲ್ಲ. ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಜನತಾ ದರ್ಶನ ಉಪಯುಕ್ತ, ಆದರೆ ಜನರೇ ಬಾರದಿರುವುದನ್ನು ನೋಡಿದರೆ ಜನರಿಗೆ ಯಾವುದೇ ಸಮಸ್ಯೆಗಳಿಲ್ಲವೆ ಎಂಬುದನ್ನು ಪರಿಶೀಲಿಸುವಂತಾಗಿದೆ ಎಂದರು.ಸಭೆಯಲ್ಲಿ ಬಿಇಒ ಸುಕನ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಾರೆಡ್ಡಿ, ಇಒ ರವಿಕುಮಾರ್, ಸಿಡಿಪಿಒ ಮುನಿರಾಜು ಮತ್ತಿತರರು ಇದ್ದರು.