20ಕ್ಕೆ ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತು ಸಮಾವೇಶ

| Published : Feb 18 2024, 01:37 AM IST

ಸಾರಾಂಶ

20ಕ್ಕೆ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ಅಕ್ರಮಗಳ ಕುರಿತು ಸಭೆ ಆಯೋಜನೆ

ಕನ್ನಡಪ್ರಭ ವಾರ್ತೆ ಹಾಸನ

ದೇವಸ್ಥಾನಗಳ ಮೇಲೆ ನಡೆಯುತ್ತಿರುವ ವಿವಿಧ ರೀತಿಯ ಆಕ್ರಮಣಗಳನ್ನು ವಿರೋಧಿಸಿ ಹಾಗೂ ವಸ್ತ್ರ ಸಂಹಿತೆ ಅಳವಡಿಸಲು ಆಗ್ರಹಿಸಿ ಫೆ. ೨೦ರಂದು ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು ಸಭೆಯನ್ನು ಆಯೋಜಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಚಂದ್ರ ಮೊಗವೀರ ಹೇಳಿದರು. ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳ ಮೇಲೆ ಅನಧಿಕೃತ ಆಕ್ರಮಗಳು ನಡೆಯುತ್ತಿದ್ದು, ಉದಾಹರಣೆಗೆ ದೇವಸ್ಥಾನಗಳ ಸರ್ಕಾರಿಕರಣ, ದೇವಸ್ಥಾನಗಳನ್ನು ಅಪವಿತ್ರಗೊಳಿಸುವುದು, ಮೂರ್ತಿಭಂಜನ, ಅನಧಿಕೃತವೆಂದು ದೇವಸ್ಥಾನಗಳನ್ನು ಧ್ವಂಸಗೊಳಿಸುವುದು, ದೇವಸ್ಥಾನಗಳ ಜಮೀನುಗಳ ಲೂಟಿ, ದೇವನಿಧಿ ಅಪವ್ಯಯ. ಹೀಗೆ ಮುಂತಾದ ಸಮಸ್ಯೆಗಳು ಮುಗಿಲು ಮುಟ್ಟಿದೆ. ಅದಕ್ಕಾಗಿ ದೇವಸ್ಥಾನಗಳಲ್ಲಿನ ದೇವತಾತತ್ತ್ವವನ್ನು ಕಾಪಾಡಲು, ದೇವಸ್ಥಾನಗಳಲ್ಲಿ ಧರ್ಮಪ್ರಸಾರ ಮಾಡಲು. ದೇವಸ್ಥಾನಗಳಲ್ಲಿ ಭಕ್ತಾಧಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು, ಸಂಘಟನೆ ಮಾಡಲು, ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಅಳವಡಿಸಲು ಹಿಂದೂ ಜನಜಾಗೃತಿ ಸಮಿತಿ ಮತ್ತು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯುಕ್ತ ಆಶ್ರಯದಲ್ಲಿ ಇದೇ ಫೆಬ್ರುವರಿ ೨೦ರಂದು ನಗರದ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು ಸಭೆ ಆಯೋಜಿಸಲಾಗಿದೆ ಎಂದರು. ದೇವಸ್ಥಾನದ ಮಹಾಸಂಘದ ವತಿಯಿಂದ ಕಳೆದ ಡಿಸೆಂಬರ್ ೧೬ ಮತ್ತು ೧೭ರಂದು ರಾಜ್ಯಮಟ್ಟದ ಉಪನಿಷತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಕರ್ನಾಟಕದ ಎಲ್ಲಾ ಅರ್ಚಕರು ಪುರೋಹಿತರು ಟ್ರಸ್ಟಿಗಳು ಮತ್ತು ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುವ ಎಲ್ಲರನ್ನೂ ಸಂಘಟಿಸುವ ದೃಷ್ಟಿಯಿಂದ ಆ ಕಾರ್ಯಕ್ರಮವನ್ನು ಮಾಡಿದ್ದೆವು. ಕಾರ್ಯಕ್ರಮದಲ್ಲಿ ಸುಮಾರು ೮೫೦ ಟ್ರಸ್ಟಿಗಳು ಉಪಸ್ಥಿತರಿದ್ದರು. ಸಂಘಟನೆ ಕೇವಲ ರಾಜ್ಯಮಟ್ಟದಲ್ಲಿ ಆದರೆ ಸಾಲುವುದಿಲ್ಲ. ಎಲ್ಲಾ ಜಿಲ್ಲಾ ಮಟ್ಟದಲ್ಲಿಯೂ ಇಂತಹ ಸಂಘಟನೆ ಆಗಬೇಕು ಎಂದು ವ್ಯಕ್ತಪಡಿಸಿ ರಾಜ್ಯದ ಸುಮಾರು ೧೬ ಜಿಲ್ಲೆಗಳಲ್ಲಿ ಈ ಅಧಿವೇಶನ ನಡೆಸಬೇಕು ಎಂದು ನಿರ್ಣಯಕ್ಕೆ ಬಂದರು. ಆದ್ದರಿಂದ ೧೬ ಜಿಲ್ಲೆಗಳಲ್ಲಿ ಈ ಅಧಿವೇಶನದ ಆಯೋಜನೆ ಮಾಡಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ, ಹುಬ್ಬಳ್ಳಿ, ಕೊಡಗು ಜಿಲ್ಲೆ, ಮತ್ತು ಹಾಸನ ಜಿಲ್ಲೆ ಸೇರಿದಂತೆ ೧೬ ಕಡೆ ಈ ಅಧಿವೇಶನದ ಆಯೋಜನೆ ಮಾಡಲಾಗಿದ್ದು, ಹಾಸನದಲ್ಲಿ ಇದೇ ತಿಂಗಳ ೨೦ನೇ ತಾರೀಕು ಜಿಲ್ಲಾ ಮಟ್ಟದ ಅಧಿವೇಶನವನ್ನು ಶ್ರೀ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ೯:೦೦ ರಿಂದ ಸಂಜೆ ೪ ಗಂಟೆಯವರೆಗೆ ಒಂದು ದಿನದ ಅಧಿವೇಶನವನ್ನು ಹಮ್ಮಿಕೊಂಡಿದ್ದೇವೆ ಎಂದರು. ಅದರಲ್ಲಿ ಮುಖ್ಯವಾಗಿ ದೇವಸ್ಥಾನದ ನಿರ್ವಹಣೆಯನ್ನು ಯಾವ ರೀತಿ ಮಾಡಬೇಕು, ದೇವಸ್ಥಾನಗಳನ್ನು ನಡೆಸುವಾಗ ಅದಕ್ಕೆ ಆಗುವ ಅಡಚಣೆಗಳು ಮತ್ತು ಅದಕ್ಕೆ ಪರಿಹಾರಗಳನ್ನು ಯಾವ ರೀತಿ ಕಂಡುಕೊಳ್ಳಬೇಕು, ಅದೇ ರೀತಿ ದೇವಸ್ಥಾನ ನಡೆಸುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ ಉದಾಹರಣೆಗೆ ದೇವಸ್ಥಾನ ಸರ್ಕಾರಿಕರಣ, ಸರ್ಕಾರ ಏಕಾಏಕಿ ಬಂದು ದೇವಸ್ಥಾನವನ್ನು ಮುಟ್ಟುಗೊಲು ಹಾಕಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿಗಳೆಲ್ಲ ಸಂಘಟಿತರಾಗಿ ಹೇಗೆ ಹೋರಾಡಬೇಕು ಎಂಬುವುದರ ಬಗ್ಗೆ ಚಿಂತನೆಯನ್ನು ನಡೆಸಲಾಗುವುದು.

ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಅನಧಿಕೃತ ದೇವಸ್ಥಾನ ಎಂದು ಬಿಂಬಿಸಿ ಹಲವು ದೇವಸ್ಥಾನಗಳನ್ನು ನಾಶ ಮಾಡಲಾಗುತ್ತಿದೆ. ಇದರ ವಿರುದ್ಧ ನಾವು ಸಂಘಟಿತರಾಗಿ ಹೇಗೆ ಹೋರಾಡಬೇಕು. ಜೊತೆಗೆ ಆ ಅಧಿವೇಶನದಲ್ಲಿ ದೇವಸ್ಥಾನದ ಕುರಿತಾಗಿ ಕಾನೂನಾತ್ಮಕ ಮಾರ್ಗದರ್ಶನವನ್ನು ಕೂಡ ನೀಡಲಿದ್ದೇವೆ. ಈ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಟ್ರಸ್ಟಿಗಳು ಪುರೋಹಿತರು ಅರ್ಚಕರು ಸೇರಿದಂತೆ ಸುಮಾರು ೨೦೦ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದರು. ಈ ವೇಳೆ ಗಣಪತಿ ದೇವಸ್ಥಾನ ಅಧ್ಯಕ್ಷ ರಾಘವೇಂದ್ರ ಆಚಾರ್, ನಗರದ ಸುಬ್ರಮಣ್ಯಸ್ವಾಮಿ ದೇವಾಲಯದ ಧರ್ಮದರ್ಶಿ ಗೋವಿಂದರಾಜು, ಕಾಳಿಕಾಂಬ ದೇವಸ್ಥಾನ ಟ್ರಸ್ಟಿ ನಾಗೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.