ಡಿ.28, 29ರಂದು ಜಗಳೂರಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ: ದೇವೇಂದ್ರಪ್ಪ

| Published : Oct 21 2024, 12:49 AM IST

ಸಾರಾಂಶ

ಜಗಳೂರು ಪಟ್ಟಣದಲ್ಲಿ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಡಿ.28 ಮತ್ತು 29ರಂದು ನಡೆಯಲು ತೀರ್ಮಾನಿಸಿರುವುದು ಸಂತೋಷದ ವಿಷಯವಾಗಿದೆ. ಸಮ್ಮೇಳನಕ್ಕೆ ಯಾವ ಅಡೆತಡೆಯಿಲ್ಲ. ತಾಯಿ ಭುವನೇಶ್ವರಿಯ ತೇರನ್ನು ಎಲ್ಲರೂ ಕೈ ಜೋಡಿಸಿ ಎಳೆಯಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಜಗಳೂರಲ್ಲಿ ಮನವಿ ಮಾಡಿದರು.

- ತಾಯಿ ಭುವನೇಶ್ವರಿ ತೇರು ಎಳೆಯಲು ಎಲ್ಲರೂ ಕೈ ಜೋಡಿಸಬೇಕು: ಶಾಸಕ ಮನವಿ

- - - ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದಲ್ಲಿ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಡಿ.28 ಮತ್ತು 29ರಂದು ನಡೆಯಲು ತೀರ್ಮಾನಿಸಿರುವುದು ಸಂತೋಷದ ವಿಷಯವಾಗಿದೆ. ಸಮ್ಮೇಳನಕ್ಕೆ ಯಾವ ಅಡೆತಡೆಯಿಲ್ಲ. ತಾಯಿ ಭುವನೇಶ್ವರಿಯ ತೇರನ್ನು ಎಲ್ಲರೂ ಕೈ ಜೋಡಿಸಿ ಎಳೆಯಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಮನವಿ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪಟ್ಟಣದಲ್ಲಿ ಡಿ.28 ಮತ್ತು 29ರಂದು ಹಮ್ಮಿಕೊಳ್ಳುವ ಕುರಿತು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತೀರ್ಮಾನವನ್ನು ಪ್ರಕಟಿಸಿದರು.

ಸಮ್ಮೇಳನ ಹಿನ್ನೆಲೆ ತಾಲೂಕಿನ ಪ್ರತಿ ಊರುಗಳಿಗೆ ರಥೋತ್ಸವ ಸಾಗಿಸಿ, ಶಾಲಾ ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ಕನ್ನಡ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಮುಖ್ಯಮಂತ್ರಿ ಅವರನ್ನು ಸಮ್ಮೇಳನ ಉದ್ಘಾಟನೆಗೆ ಕರೆಸುವ ವಿಚಾರಕ್ಕೆ ಸಮಯ ಬೇಕಾಗುತ್ತದೆ. ಸಮ್ಮೇಳನಕ್ಕೆ ಇನ್ನು 2 ತಿಂಗಳು ಕಾಲವಕಾಶವಿದೆ. ಹಾಗೆಂದು ಸುಮ್ಮನೇ ಕೂರದೇ ಸಮಿತಿಗಳನ್ನು ರಚಿಸಿಕೊಂಡು, ಕಾರ್ಯಾರಂಭ ಮಾಡಬೇಕು. ದೊಡ್ಡ ಕಾರ್ಯಕ್ರಮದಲ್ಲಿ ನಿಂದನೆಗಳು ಬರುತ್ತವೆ. ದೊಡ್ಡವರೇ ನಿಂದಿಸುತ್ತಾರೆ. ಸಹಿಸಲು ಸಾಧ್ಯವಾಗದೇ ಇದ್ದರೆ ಇಲ್ಲಿಗೆ ಕೈ ಬಿಡಿ. ಸರ್ಕಾರದಿಂದ ಅನುದಾನ, ಉಳಿದ ಹಣವನ್ನು ಹೇಗೆ ಸಂಗ್ರಹಿಸಬೇಕು ಎಂಬುದನ್ನು ಮತ್ತೊಮ್ಮೆ ಚರ್ಚಿಸೋಣ ಎಂದು ಶಾಸಕರು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ ಪ್ರತಿ ಹಳ್ಳಿಗಳಿಂದಲೂ ಚಿಕ್ಕ ರಥಸಂತೆ ಆಟೋಗಳನ್ನು ಶೃಂಗರಿಸಿ ಜನಜಾಗೃತಿ ಮೂಡಿಸಬೇಕು. ಸ್ಥಳೀಯ ಸಾಹಿತಿಗಳಿಗೆ, ಕಲಾವಿದರಿಗೆ ಹೆಚ್ಚು ಅವಕಾಶ ನೀಡಲಾಗುವುದು ಎಂದರು.

ಸಾಹಿತಿ ಎನ್.ಟಿ. ಎರ್ರಿಸ್ವಾಮಿ, ಸಮ್ಮೇಳನದ ಸಮಿತಿಗಳು ಮತ್ತು ಖರ್ಚು ವೆಚ್ಚ, ಅತಿಥಿಗಳ ಆಹ್ವಾನ, ಸನ್ಮಾನ ಹೀಗೆ ಸಮ್ಮೇಳನಕ್ಕೆ ಕನಿಷ್ಠ ₹18ರಿಂದ ₹20 ಲಕ್ಷ ಖರ್ಚಾಗಬಹುದು ಎಂದು ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಸ್ಥಳೀಯ ಸಾಹಿತಿಗಳೇ ಜಗಳೂರಿನಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕು ಎಂದು ಹಿರಿಯ ವಕೀಲ, ನೀರಾವರಿ ಹೋರಾಟಗಾರ ಓಬಳೇಶ್, ಪ್ರೊ.ನಾಗಲಿಂಗಪ್ಪ, ದಸಂಸ ಸಂಚಾಲಕ ಮಲೆಮಾಚಿಕೆರೆ ಸತೀಶ್, ಧನ್ಯಕುಮಾರ್ ಸೇರಿದಂತೆ ಅನೇಕರು ಸಭೆಯಲ್ಲಿ ಒತ್ತಾಯಿಸಿದ್ದು ವಿಶೇಷವಾಗಿತ್ತು.

ಸಭೆಯಲ್ಲಿ ತಾಲೂಕು ಕಸಾಪಾ ಅಧ್ಯಕ್ಷೆ ಸುಜಾತಮ್ಮ, ಕಸಾಪಾ ಜಿಲ್ಲಾ ಕಾರ್ಯದರ್ಶಿ ಬಿ.ದಿಲ್ಲೆಪ್ಪ, ರೇವಣಸಿದ್ದಪ್ಪ ಅಂಗಡಿ, ಎಲ್.ಜಿ. ಮಧುಕುಮಾರ್, ಜಿಗಳಿ ಪ್ರಕಾಶ್, ಜಗದೀಶ್, ರುದ್ರಾಕ್ಷಿ ಬಾಯಿ, ಷಡಾಕ್ಷರಪ್ಪ ಬೇತೂರು, ಬಿ.ಟಿ.ಗೀತ ಮಂಜು, ಸೇರಿದಂತೆ ಅನೇಕರು ಇದ್ದರು.

- - - (ಬಾಕ್ಸ್)

* ಜ್ಞಾನಭಂಡಾರ ಬೀಡಾಗಬೇಕು

ಬರದ ನಾಡು ಜಗಳೂರು ಬಂಗಾರದ ನಾಡಾಗಲಿ ಎಂದು ಸಿರಿಗೆರೆಯ ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಬಂಗಾರದ ನಾಡಿನ ಜತೆಗೆ ಜ್ಞಾನಭಂಡಾರದ ಬೀಡಾಗಬೇಕು ಎಂಬುದು ನಮ್ಮೆಲ್ಲರ ಇಚ್ಛೆ. ಸಮ್ಮೇಳನ ಮಾಡಲು ಗೊಂದಲಗಳು ಇರಬಾರದು. ಇದು ಯಾರ ಮನೆಯ ಕಾರ್ಯಕ್ರಮವಲ್ಲ. ನಾನು ಎಂಬುದು ಸೇರಿಕೊಂಡರೆ ಯಾವ ಕೆಲಸಗಳೂ ಆಗಲ್ಲ. ನಾವು ಎಂದಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ಈ ಕಾರ್ಯ ಹೃದಯದಿಂದ ಆಗಬೇಕು ಎಂದು ಶಾಸಕರು ಸಾಹಿತ್ಯಾಸಕ್ತರಿಗೆ ತಿಳಿಸಿದರು.

- - - -20ಜೆಎಲ್ಆರ್ಚಿತ್ರ1:

ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಲ್ಲಾ ನುಡಿಹಬ್ಬದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು.