ಸಾರಾಂಶ
ಹಳಿಯಾಳ: ರಾಷ್ಟ್ರೀಯ ಜೀವನೋಪಾಯ ಮಿಷನ್ ಯೋಜನೆಯು ಗ್ರಾಮೀಣ ಮಟ್ಟದ ಮಹಿಳಾ ಸಬಲೀಕರಣಕ್ಕಾಗಿ ಅನುಷ್ಠಾನಗೊಂಡಿದ್ದು, ಗ್ರಾಮೀಣ ಭಾಗದ ಪ್ರತಿ ಕುಟುಂಬ ಮಹಿಳೆಯರಿಗಾಗಿ ಸಾಕಷ್ಟು ಅನುದಾನ ಬಿಡುಗಡೆಯಾಗುತಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅನುದಾನದ ಸೂಕ್ತ ಬಳಕೆಯ ಮೇಲ್ವಿಚಾರಣೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕರೀಂ ಅಸದಿ ತಿಳಿಸಿದರು.
ಬುಧವಾರ ತಾಲೂಕಿಗೆ ಭೇಟಿ ನೀಡಿದ ಅವರು ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಿದ್ದ ನರೇಗಾ ಹಾಗೂ ರಾಷ್ಟ್ರೀಯ ಜೀವನೋಪಾಯ ಮಿಷನ್ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳನ್ನು ಸೃಜನೆ ಮಾಡಿ ಗ್ರಾಮೀಣ ಜನರಿಗೆ ನಿರಂತರವಾಗಿ ಕೆಲಸ ನೀಡುವ ಮೂಲಕ ಗ್ರಾಮ ಪಂಚಾಯಿತಿಗೆ ನೀಡಿದ ಗುರಿಯನ್ನು ನಿಗದಿತ ಸಮಯದಲ್ಲಿ ಸಾಧಿಸಬೇಕೆಂದರು.
ಗ್ರಾಮೀಣ ಭಾಗಗಳಿಗೆ ಭೇಟಿ: ಸಭೆಯ ನಂತರ ಅವರು ಯಡೋಗಾ ಗ್ರಾಪಂ ವ್ಯಾಪಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾದ ಕಲ್ಯಾಣಿ ಹಾಗೂ ಮೊದಲಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಕ್ಷಣ ಇಲಾಖೆ ಹಾಗೂ ನರೇಗಾ ಒಗ್ಗೂಡಿಸುವಿಕೆಯಲ್ಲಿ ನಿರ್ಮಾಣವಾದ ಶೌಚಾಲಯವನ್ನು ಪರಿಶೀಲಿಸಿದರು. ತಾಪಂ ಪ್ರಭಾರ ಇಒ ಆರ್. ಸತೀಶ್, ಜಿಪಂ ನರೇಗಾ ಯೋಜನೆಯ ಜಿಲ್ಲಾ ಸಹಾಯಕ ಸಮನ್ವಯಾಧಿಕಾರಿ ನಾಗರಾಜ್ ನಾಯ್ಕ, ತಾಂತ್ರಿಕ ಸಂಯೋಜಕ ಮಹೇಶ ಪಟಗಾರ, ಪಿಡಿಒಗಳು ಹಾಗೂ ತಾಪಂ ನರೇಗಾ ಹಾಗೂ ರಾಷ್ಟ್ರೀಯ ಜೀವನೋಪಾಯ ಮಿಷನ್ ಯೋಜನೆಯ ಸಿಬ್ಬಂದಿ ಇದ್ದರು.ಜಿಲ್ಲೆಯ ಕೆಲವೆಡೆ ವರುಣನ ಆರ್ಭಟ
ಕಾರವಾರ: ಜಿಲ್ಲೆಯ ಕೆಲವು ತಾಲೂಕಿನಲ್ಲಿ ಗುರುವಾರ ಸಂಜೆ ವೇಳೆಗೆ ಏಕಾಏಕಿ ಗುಡುಗಿನೊಂದಿಗೆ ಕೂಡಿದ ಮಳೆಯಾಗಿದೆ. ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆದವರು ಚಿಂತೆಗೀಡಾಗಿದ್ದಾರೆ.ಶಿರಸಿ ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ಕಡೆ ಮುಂಗಾರು ಪ್ರಾರಂಭದಲ್ಲಿ ಆಗುವಂತೆ ಗುಡುಗು ಸಹಿತ ಅರ್ಧ ತಾಸಿಗೂ ಅಧಿಕ ಕಾಲ ಮಳೆ ಸುರಿದಿದೆ. ಕಳೆದ ಎರಡು- ಮೂರು ದಿನಗಳಿಂದ ರಾತ್ರಿ ವೇಳೆ ಅಲ್ಲಲ್ಲಿ ಮಳೆಯಾಗಿದ್ದು, ಶಿರಸಿ, ಸಿದ್ದಾಪುರ ಒಳಗೊಂಡು ಹಲವು ಕಡೆ ಭತ್ತ ಕೊಯ್ಲಿಗೆ ಬಂದಿದೆ. ಕೆಲವು ಕಡೆ ಕೊಯ್ಲು ಮುಗಿಸಿ ರಾಶಿ ಹಾಕಲಾಗಿದೆ. ಇಂತಹ ಸಮಯದಲ್ಲಿ ಮಳೆಯಾಗುತ್ತಿರುವುದರಿಂದ ಫಸಲು ಒದ್ದೆಯಾಗಿ ಹುಲ್ಲು, ಭತ್ತ ಎರಡೂ ಪ್ರಯೋಜನಕ್ಕೆ ಬಾರದಂತಾಗುತ್ತಿದೆ. ಹುಲ್ಲು ಮಳೆಯಲ್ಲಿ ಒದ್ದೆಯಾದರೆ ಕಹಿಯಾಗುತ್ತದೆ. ಜಾನುವಾರುಗಳು ಅದನ್ನು ತಿನ್ನುವುದಿಲ್ಲ. ಭತ್ತದ ಹುಲ್ಲು ಇದ್ದರೂ ಜಾನುವಾರುಗಳ ಮೇವಿಗೆ ಪುನಃ ಬೇರೆಡೆಯಿಂದ ಹಣ ಕೊಟ್ಟು ಖರೀದಿಸುವ ಅನಿವಾರ್ಯ ಉಂಟಾಗುತ್ತದೆ. ಬೆಳೆನಷ್ಟದ ಜತೆಗೆ ಮತ್ತೆ ಮೇವಿಗೆ ಹಣ ಕೂಡಾ ಕೊಡುವುದು ಬೆಳೆಗಾರರಿಗೆ ಆರ್ಥಿಕವಾಗಿ ನಷ್ಟವಾಗಲಿದೆ.ಮಳೆಗಾಲದ ಮುಗಿದ ಕಾರಣ ಗ್ರಾಮೀಣ ಭಾಗದಲ್ಲಿ ಮಣ್ಣು ರಸ್ತೆ ಇರುವ ಊರುಗಳಲ್ಲಿ ಮಳೆಗಾಲದಲ್ಲಿ ಆದ ಗುಂಡಿ ತುಂಬಿ ಹೊಸದಾಗಿ ರಸ್ತೆ ನಿರ್ಮಾಣ ಮಾಡಿಕೊಳ್ಳಲಾಗಿದೆ. ಆದರೆ ಮಳೆಯ ನೀರು ಹರಿಯುವ ರಭಸಕ್ಕೆ ಪುನಃ ಮತ್ತೆ ರಸ್ತೆಗಳಲ್ಲಿ ಕೊರಕಲು ಬಿದ್ದಿದೆ. ಅಕಾಲಿಕ ಮಳೆಯಿಂದ ಶ್ರಮವಹಿಸಿ ದುರಸ್ತಿ ಮಾಡಿಕೊಂಡಿರುವುದು ವ್ಯರ್ಥವಾದಂತಾಗಿದೆ.ಅತಿವೃಷ್ಠಿಯಿಂದ ಈಗಾಗಲೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಾರರಿಗೆ ಸಾಕಷ್ಟು ನಷ್ಟವಾಗಿದೆ. ಈಗ ಪುನಃ ಮಳೆಯಿಂದಾಗಿ ಕೈಗೆ ಬಂದ ಬೆಳೆಯನ್ನು ಕಳೆದುಕೊಳ್ಳುವಂತಾಗಿದೆ.