ಸಾರಾಂಶ
ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಮದಲ್ಲಿ ಅಕ್ಷರನಗರದ ಅತೀ ಸೂಕ್ಷ್ಮ ಮತಗಟ್ಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಭೇಟಿ ನೀಡಿ ಪರಿಶೀಲಿಸಿದರು. ಪಿಎಸ್‌ಐ ರವೀಶ್ ಇದ್ದರು.
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಶೃಂಗೇರಿ ಕ್ಷೇತ್ರದಲ್ಲಿನ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಹೇಳಿದರು.ಬಿ.ಕಣಬೂರು ಗ್ರಾಮದ ಅಕ್ಷರನಗರ ಹಾಗೂ ಕಡ್ಲೇಮಕ್ಕಿ ಮತಗಟ್ಟೆಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೃಂಗೇರಿ ವಿಧಾನಸಭಾ ವ್ಯಾಪ್ತಿಯಲ್ಲಿ ಮೊದಲ ದಿನ ಎರಡು ಸೂಕ್ಷ್ಮಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸ್ಥಳೀಯರೊಂದಿಗೆ ಅಲ್ಲಿನ ಕುರಿತು ಮಾತುಕತೆ ಮಾಡಲಾಗಿದೆ.
ಇದರೊಂದಿಗೆ ಚುನಾವಣಾ ಕರ್ತವ್ಯಕ್ಕೆ ಆಗಮಿಸುವ ಕೇಂದ್ರೀಯ ಮೀಸಲು ಪಡೆ ಸಿಬ್ಬಂದಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಸಹ ಪರಿಶೀಲಿಸಲಾಗಿದೆ. ವಸತಿಗಾಗಿ ಬಾಲಕಿಯರ ವಿದ್ಯಾರ್ಥಿ ನಿಲಯದ ಸ್ಥಳ ವೀಕ್ಷಿಸಲಾಗಿದೆ.ಚುನಾವಣಾ ಸಿದ್ಧತೆ ಬಗ್ಗೆ ಪೊಲೀಸ್ ಇಲಾಖೆಯಿಂದ ಯಾವ ತಯಾರಿ ಮಾಡಬೇಕು ಎಂದು ಪರಿಶೀಲಿಸಲಾಗಿದೆ. ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಉತ್ತಮ ತಯಾರಿ ಮಾಡಿಕೊಂಡಿದ್ದು, ಇನ್ನು ಕೆಲವು ಅಗತ್ಯಗಳಿದ್ದು ಅವುಗಳ ಸಿದ್ಧತೆ ಮಾಡಿಕೊಳ್ಳಲಾಗುವುದು.
ಠಾಣಾ ವ್ಯಾಪ್ತಿಯಲ್ಲಿ ಇರುವ ರೌಡಿಶೀಟರ್, ಕಿಡಿಗೇಡಿಗಳ ವಿರುದ್ಧ ಮುಂಜಾಗರೂಕ ಕ್ರಮವಾಗಿ ಚುನಾವಣಾ ಸಂದರ್ಭದಲ್ಲಿ 107, 110ಸೆಕ್ಷನ್ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಅತೀ ಸೂಕ್ಷ್ಮ ಮತಗಟ್ಟೆ ವ್ಯಾಪ್ತಿಯಲ್ಲಿರುವ ಕಿಡಿಗೇಡಿಗಳಿಂದ ವಿಶೇಷ ಬಾಂಡ್ ಪಡೆಯಲಾಗುವುದು. ಪೊಲೀಸ್ ಅಧಿಕಾರಿಗಳು ಎಲ್ಲಾ ಮತಗಟ್ಟೆಗಳಿಗೆ ಭೇಟಿ ನೀಡಿ, ಅಲ್ಲಿನ ಕಾನೂನು ಸುವ್ಯವಸ್ಥೆ, ಅಗತ್ಯತೆ ಕುರಿತು ಪರಿಶೀಲನೆ ನಡೆಸಲಿದ್ದು, ಕಾನೂನು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದ ಹಾಗೆ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ರವೀಶ್, ಅಪರಾಧ ವಿಭಾಗದ ಪಿಎಸ್‌ಐ ಅಭಿಷೇಕ್ ಮತ್ತಿತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))