ಇಂದಿನಿಂದ ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ

| Published : Mar 25 2024, 12:48 AM IST

ಸಾರಾಂಶ

ಶಾಲಾ ವಿದ್ಯಾರ್ಥಿಗಳು ೧೯೮೯೨ ಮಂದಿ, ಖಾಸಗಿ ಅಭ್ಯರ್ಥಿಗಳು ೧೦೦, ಪುನರಾವರ್ತಿತ ಅಭ್ಯರ್ಥಿಗಳು ೩೪೯, ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ೧೨೭, ಹೊಸ ಸ್ಕೀಂ ಪುನರಾವರ್ತಿತ ಅಭ್ಯರ್ಥಿಗಳು ೧೦, ನ್ಯೂ ಸ್ಕೀಂ ಖಾಸಗಿ ಅಭ್ಯರ್ಥಿ ಒಬ್ಬರು ಪರೀಕ್ಷೆ ಬರೆಯಲಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲಾದ್ಯಂತ ಮಾ.೨೫ ರಿಂದ ಏ.೬ರವರೆಗೂ ೬೫ ಕೇಂದ್ರಗಳಲ್ಲಿ ಆರಂಭವಾಗುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ೧೦೫೮೯ ಮಂದಿ ಬಾಲಕರು,೯೮೯೦ ಮಂದಿ ಬಾಲಕಿಯರು ಸೇರಿದಂತೆ ಒಟ್ಟು ೨೦೪೭೯ ವಿದ್ಯಾರ್ಥಿಗಳು ಕುಳಿತಿದ್ದು, ಸುಗಮ ಪರೀಕ್ಷೆಗೆ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನಲೆಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಶನಿವಾರವೇ ಜಿಲ್ಲೆಯ ಎಲ್ಲಾ ೬೫ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷರ ಅಧ್ಯಕ್ಷತೆಯಲ್ಲಿ ಆಯಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಕೊಠಡಿ ಮೇಲ್ವಿಚಾರಕರು ಮತ್ತು ಸಿಬ್ಬಂದಿಯ ಸಭೆಯನ್ನು ನಡೆಸಿ ಸುಗಮ ಪರೀಕ್ಷೆಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದರು.

ಹೊಸದಾಗಿ ಪರೀಕ್ಷೆ ತೆಗೆದುಕೊಂಡಿರುವ ಶಾಲಾ ವಿದ್ಯಾರ್ಥಿಗಳು ೧೯೮೯೨ ಮಂದಿ, ಹೊಸ ಖಾಸಗಿ ಅಭ್ಯರ್ಥಿಗಳು ೧೦೦, ಸಿಸಿಇ ಪುನರಾವರ್ತಿತ ಅಭ್ಯರ್ಥಿಗಳು ೩೪೯, ಸಿಸಿಇ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ೧೨೭, ಹೊಸ ಸ್ಕೀಂ ಪುನರಾವರ್ತಿತ ಅಭ್ಯರ್ಥಿಗಳು ೧೦ ಹಾಗೂ ನ್ಯೂಸ್ಕೀಂ ಖಾಸಗಿ ಅಭ್ಯರ್ಥಿ ಒಬ್ಬರು ಮಾತ್ರ ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

ಗುರುತಿನ ಚೀಟಿ ಕಡ್ಡಾಯಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವಾಟರ್‌ಬಾಯ್‌ಯಿಂದ ಮುಖ್ಯ ಅಧೀಕ್ಷಕರವರೆಗೂ ಎಲ್ಲರಿಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ಗುರುತಿನ ಚೀಟಿ ಮುದ್ರಿಸಿ ಕಳುಹಿಸಿದೆ, ಗುರುತಿನ ಚೀಟಿ ಎಲ್ಲದೇ ಯಾರಿಗೂ ಒಳಗೆ ಪ್ರವೇಶ ನೀಡಬಾರದು ಎಂದು ತಿಳಿಸಲಾಗಿದೆ ಎಂದರು.

ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀ.ವ್ಯಾಪ್ತಿಯಲ್ಲಿ ೧೪೪ ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಲಾಗಿದೆ. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ ೨೦೦ ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ ಎಂದು ವಿವರ ನೀಡಿದರು. ಸ್ವಾಧೀನಾಧಿಕಾರಿ ನೇಮಕಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಉಳಿದೆಲ್ಲಾ ಸಿಬ್ಬಂದಿ ಮೊಬೈಲ್ ಬಳಸದಿರುವಂತೆ ಕಟ್ಟಪ್ಪಣೆ ವಿಧಿಸಲಾಗಿದೆ. ಮುಖ್ಯ ಅಧೀಕ್ಷಕರು ಕೊಠಡಿ ಮೇಲ್ವಿಚಾರಕರು ಮೊಬೈಲ್ ತಂದಿದ್ದರೆ ಸ್ವಿಚ್ ಆಫ್ ಮಾಡಿಸಿ ವಶಕ್ಕೆ ಪಡೆಯಲು ಸೂಚಿಸಿದ್ದು, ಪ್ರತಿಕೇಂದ್ರಕ್ಕೂ ಮೊಬೈಲ್ ಸ್ವಾಧೀನಾಧಿಕಾರಿ ನೇಮಿಸಲಾಗಿದೆ ಎಂದರು.

ವಿದ್ಯಾರ್ಥಿಗಳೂ ಸಹಾ ಮೊಬೈಲ್, ಎಲೆಕ್ಟ್ರಾನಿಕ್ ಗಡಿಯಾರ, ಉಪಕರಣಗಳನ್ನು ಕೇಂದ್ರದೊಳಕ್ಕೆ ತರಬಾರದು, ಕೇಂದ್ರದ ಮುಖ್ಯ ದ್ವಾರದಲ್ಲೇ ಈ ಸಂಬಂಧ ಪರಿಶೀಲಿಸಿ ಒಳ ಬಿಡುವಂತೆ ಪರೀಕ್ಷಾ ಮಂಡಳಿ ಸೂಚಿಸಿದೆ ಎಂದು ತಿಳಿಸಿದ್ದಾರೆ.