ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ನಾಡಿನಾದ್ಯಂತ ಗಣೇಶ ಚತುರ್ಥಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ದು, ಇದೀಗ ಐದು ದಿನಗಳ ಬಳಿಕ ಗಣೇಶ ಮೂರ್ತಿಗಳನ್ನು ಅದ್ಧೂರಿಯಾಗಿ ವಿಸರ್ಜನೆ ಮಾಡಲಾಗುತ್ತಿದೆ. 5ನೇ ದಿನ, 7ನೇ ದಿನ, 9ನೇ ದಿನ ಹಾಗೂ 11ನೇ ದಿನದ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಹಿನ್ನೆಲೆ ಅಹಿತಕರ ಘಟನೆಗಳು ಜರುಗದಂತೆ ನಗರದಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಜೊತೆಗೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ನಾಡಿನಾದ್ಯಂತ ಗಣೇಶ ಚತುರ್ಥಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ದು, ಇದೀಗ ಐದು ದಿನಗಳ ಬಳಿಕ ಗಣೇಶ ಮೂರ್ತಿಗಳನ್ನು ಅದ್ಧೂರಿಯಾಗಿ ವಿಸರ್ಜನೆ ಮಾಡಲಾಗುತ್ತಿದೆ. 5ನೇ ದಿನ, 7ನೇ ದಿನ, 9ನೇ ದಿನ ಹಾಗೂ 11ನೇ ದಿನದ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಹಿನ್ನೆಲೆ ಅಹಿತಕರ ಘಟನೆಗಳು ಜರುಗದಂತೆ ನಗರದಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಜೊತೆಗೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.ಬಿಗಿ ಪೊಲೀಸ್ ಭದ್ರತೆ:
ವಿಸರ್ಜನೆಯಾಗುವ ಸಾರ್ವಜನಿಕ ಗಣೇಶಗಳು ಹಾಗೂ ಮನೆಯಲ್ಲಿನ ಗಣಪತಿಗಳನ್ನು ವಿಸರ್ಜಿಸಲು ವ್ಯವಸ್ಥಿತ ಅನುಕೂಲ ಕಲ್ಪಿಸಲಾಗಿದೆ. ಇದಕ್ಕಾಗಿ ನಗರ ಹಾಗೂ ಕೆಲವು ಸೂಕ್ಷ್ಮ ಪ್ರದೇಶಗಳು ಸೇರಿ ಜಿಲ್ಲಾದ್ಯಂತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ ಒಟ್ಟು 5 ಕೆಎಸ್‌ಆರ್‌ಪಿ ತುಕಡಿಗಳು, 8 ಡಿಎಆರ್ ಪೊಲೀಸ್ ತಂಡಗಳು ಸೇರಿದಂತೆ ಹೆಚ್ಚುವರಿ ಇಬ್ಬರು ಎಸ್‌ಪಿಗಳು, ಐವರು ಡಿವೈಎಸ್‌ಪಿಗಳು ಸೇರಿಂತೆ ಸಿಪಿಐ, ಪಿಎಸ್‌ಐಗಳು ಮತ್ತು ಸಿಬ್ಬಂದಿಯನ್ನು ನೇಮಿಸಲಾಗಿದೆ.ಕಟ್ಟುನಿಟ್ಟಿನ ಎಚ್ಚರಿಕೆ:
ಗಣೇಶ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆವರೆಗೂ ಸಾಕಷ್ಟು ನಿಯಮಗಳಿದ್ದು, ಅವುಗಳನ್ನು ಉಲ್ಲಂಘಿಸದಂತೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಸಂಜೆಯಿಂದಲೇ ಶುರುವಾಗುವ ಗಣೇಶ ವಿಸರ್ಜನೆಯ ಕಾರ್ಯ ರಾತ್ರಿ 10ಗಂಟೆಯೊಳಗೆ ಮುಗಿಸುವಂತೆ ಆಯೋಜಕರು ವ್ಯವಸ್ಥೆ ಮಾಡಿಕೊಳ್ಳಬೇಕು. ನಗರದಲ್ಲಿ ಸಂಚರಿಸುವ ವಾಹನ ಸವಾರರಿಗೆ, ಪಾದಚಾರಿಗಳಿಗೆ ಅನಾನುಕೂಲ ಆಗದಂತೆ ಸ್ವಯಂಸೇವಕರು ಕರ್ತವ್ಯ ನಿರ್ವಹಿಸಬೇಕು. ಎಲ್ಲಿಯೂ ಪರಿಸರ ಮಾಲಿನ್ಯ ಹಾಗೂ ಶಬ್ದಮಾಲಿನ್ಯ ಸೇರಿ ಯಾರಿಗೂ ತೊಂದರೆ ಮಾಡದೆ ಗಣೇಶ ವಿಸರ್ಜನೆ ಮಾಡಬೇಕು ಎಂದು ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.ಜಿಲ್ಲಾಡಳಿತ, ಪಾಲಿಕೆಯಿಂದ ವ್ಯವಸ್ಥೆ:
ಮನೆಯ ಚಿಕ್ಕ ಚಿಕ್ಕ ಮೂರ್ತಿಗಳು ಸೇರಿದಂತೆ ದೊಡ್ಡ ದೊಡ್ಡ ಗಣಪತಿಗಳ ವಿಸರ್ಜನೆಗೆ ನಗರ ಸೇರಿ ಜಿಲ್ಲೆಯಾದ್ಯಂತ ವ್ಯವಸ್ಥೆ ಕಲ್ಪಿಸಲಾಗಿದೆ. ಸಣ್ಣ ಸಣ್ಣ ಗಣಪತಿಗಳ ವಿಸರ್ಜನೆಗೆ ಹಲವು ಬಡಾವಣೆಗಳಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಲಾಗಿದೆ. ಆ ಸ್ಥಳಗಳಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇರಲಿದ್ದಾರೆ. ಸಾರ್ವಜನಿಕರು ಮನೆಯ ಗಣಪತಿಗಳನ್ನು ತಂದು ಪಾಲಿಕೆ ನಿರ್ಮಿಸಿದ ಕೃತಕ ಹೊಂಡಗಳಲ್ಲಿ ವಿಸರ್ಜಿಸಬೇಕು. ಇನ್ನು ದೊಡ್ಡ ಗಣಪತಿಗಳೆಲ್ಲವೂ ನಗರದ ತಾಜ್‌ಬಾವಡಿ ಆವರಣದಲ್ಲಿ ನಿರ್ಮಿಸಲಾಗಿರುವ ಕೃತಕ ಹೊಂಡಲ್ಲಿ ವಿಸರ್ಜನೆಯಾಗಲಿವೆ.ಬೇರೆಲ್ಲೂ ಎಸೆಯಬೇಡಿ:
ದೇಶಾದ್ಯಂತ ಭಾವೈಕ್ಯತೆಯಿಂದ ಆಚರಿಸಲಾಗುವ ಗಣೇಶ ಚತುರ್ಥಿಯಲ್ಲಿ ಗಣೇಶ ವಿಸರ್ಜನೆ ವೇಳೆ ಮೂರ್ತಿಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಯಾವುದೋ ಬಾವಿ, ಕೆರೆ, ನೀರಿನ ಮೂಲಗಳಲ್ಲಿ ವಿಸರ್ಜಿಸದೆ ಗಣೇಶ ವಿಸರ್ಜನೆಗಾಗಿಯೇ ನಿಗದಿಪಡಿಸಿದ ಸ್ಥಳಗಳಲ್ಲಿ ವಿಸರ್ಜನೆ ಮಾಡಬೇಕಿದೆ. ಇದರಿಂದಾಗಿ ಪರಿಸರದ ಹಾಗೂ ಜಲಮೂಲಗಳ ಸಂರಕ್ಷಣೆ ಮಾಡಿದಂತಾಗಲಿದೆ.---------ಕೋಟ್.......
ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ಪ್ರಾರಂಭವಾಗಿದ್ದು, ಮೆರವಣಿಗೆ ಮೂಲಕ ತೆರಳಿ ವಿಸರ್ಜಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಇಡಿ ರಸ್ತೆಯನ್ನು ಆವರಿಸಬೇಡಿ, ಒಂದು ಬದಿಯಿಂದ ಮಾತ್ರ ತೆರಳಿ ನಿಗದಿತ ಅವಧಿಯಲ್ಲಿ ಗಣೆಶ ವಿಸರ್ಜನೆ ಮುಗಿಸಬೇಕು. ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾದ ಗಣೇಶಗಳ ವಿಸರ್ಜನೆಗೆ ಸೂಚಿಸಿರುವ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಉಲ್ಲಂಘಿಸಿದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.ಋಷಿಕೇಶ ಸೋನಾವಣೆ, ವಿಜಯಪುರ ಎಸ್‌ಪಿಕೋಟ್....
ನಗರದಲ್ಲಿ ಬೇರೆಯವರಿಗೆ ತೊಂದರೆ ಆಗದಂತೆ ಅಲ್ಲಲ್ಲಿ ಕೃತಕ ಹೊಂಡಗಳನ್ನು ಮಾಡಿ, ಗಣೇಶನ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸಹಕಾರ ಮನೋಭಾವನೆಯಿಂದ ತೆರಳಿ ಗಣೇಶನ ವಿಸರ್ಜನೆ ಮಾಡಬೇಕು. ಎಲ್ಲರೂ ಶಾಂತಿ, ಸರಳತೆಯಿಂದ ಹಬ್ಬವನ್ನು ಆಚರಿಸಬೇಕಿದೆ.ವಿಜಯಕುಮಾರ ಮೆಕ್ಕಳಕಿ, ಪಾಲಿಕೆ ಆಯುಕ್ತ