ಸಾರಾಂಶ
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ನ.21ರಂದು ಬೆಳಗ್ಗೆ 10 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಾಜ್ಯಮಟ್ಟದ ಯುವಜನೋತ್ಸವ ಸ್ಪರ್ಧೆಗೆ ಜಿಲ್ಲೆಯ ತಂಡಗಳನ್ನು ಕಳುಹಿಸಿಕೊಡಬೇಕಿದೆ. ಆದ್ದರಿಂದ ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗಳ ಆಯ್ಕೆ ಕೆಳಕಂಡ ವಿಭಾಗಗಳಲ್ಲಿ ನಡೆಸಲಾಗುವುದು.ಸ್ಪರ್ಧೆಗಳಲ್ಲಿ ಭಾಗವಹಿಸುವ ಯುವಕ-ಯುವತಿಯರು 15ರಿಂದ 29 ವರ್ಷ ವಯೋಮಿತಿಗೆ ಒಳಪಟ್ಟಿರಬೇಕು. ನೋಂದಣಿ ಸಮಯದಲ್ಲಿ ವಯಸ್ಸಿನ ದೃಢಿಕರಣಕ್ಕೆ ಸಂಬಂಧಿಸಿದಂತೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ತರುವುದು ಕಡ್ಡಾಯ. ಗ್ರಾಮೀಣ ಪ್ರದೇಶದವರು, ನಗರ ಪ್ರದೇಶದವರು, ಕಾಲೇಜಿನ ಯುವಕ/ ಯುವತಿಯರು, ಯುವಕ, ಯುವತಿ ಸಂಘದ ಸದಸ್ಯರು ಭಾಗವಹಿಸಬಹುದು.
ಸ್ಪರ್ಧಾಳುಗಳು ಅವಶ್ಯಕ ವೇಷಭೂಷಣಗಳನ್ನು ಹಾಗೂ ಸಂಗೀತ ಉಪಕರಣಗಳನ್ನು ತಾವೇ ತರಬೇಕು. ಮಧ್ಯಾಹ್ನ ಲಘು ಉಪಾಹಾರ ಹಾಗೂ 7 ತಾಲೂಕುಗಳಿಂದಲೂ ಭಾಗವಹಿಸುವ ಸ್ಪರ್ಧಾಳುಗಳಿಗೆ ಬಂದು ಹೋಗುವ ಸಾಮಾನ್ಯ ಪ್ರಯಾಣ ದರ ನೀಡಲಾಗುವುದು.ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿ 10 ಜನರ ತಂಡ ಜನಪದ ನೃತ್ಯ, ಜನಪದ ಗೀತೆ ಮತ್ತು ವೈಯಕ್ತಿಕ ಒಬ್ಬರ ಜನಪದ ನೃತ್ಯ, ಜನಪದ ಗೀತೆ, ಕಥೆ ಬರೆಯುವುದು, ಪೋಸ್ಟರ್ ಮೇಕಿಂಗ್ (ಬಿತ್ತಿಪತ್ರ ತಯಾರಿಕೆ), ಸದೃಢ ಯುವಜನತೆಯಿಂದ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ ಎಂಬ ವಿಷಯದ ಕುರಿತು ಡಿಕ್ಲಮೇಷನ್ (ಘೋಷಣೆ), ಛಾಯಾಚಿತ್ರಣ ಸ್ಪರ್ಧೆಗಳು ಇರುತ್ತವೆ.
ಈ ಆಯ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ನ.21ರಂದು ಬೆಳಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ವರದಿ ಮಾಡಿಕೊಂಡು, ತಮ್ಮ ಹೆಸರುಗಳನ್ನು ನೋಂದಾಯಿಸಿ, ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು (ಮೊ: 90089- 49847) ತಿಳಿಸಿದ್ದಾರೆ.