ಲಘು ಪೋಷಕಾಂಶಗಳ ಬಗ್ಗೆ ರೈತರು ಅರಿತುಕೊಳ್ಳಬೇಕು. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಬರಡಾಗಲಿದೆ ಎಂದು ಗೊಬ್ಬರ ಕಂಡುಹಿಡಿದ ವಿಜ್ಞಾನಿಗಳೇ ಹೇಳಿದ್ದಾರೆ. ಆದರೆ, ರೈತರಿಗೆ ಇನ್ನೂ ತಿಳಿದಿಲ್ಲ.
ಶಿರಹಟ್ಟಿ: ರೈತರು ರಾಸಾಯನಿಕ ಗೊಬ್ಬರ ಬದಲು ಸಾವಯವ ಗೊಬ್ಬರ ಬಳಕೆ ಮಾಡಬೇಕು. ನೈಸರ್ಗಿಕ ಗೊಬ್ಬರ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಸಮತೋಲಿತವಾಗಿ ರೈತರು ಗೊಬ್ಬರ ಬಳಸಲು ಜಿಲ್ಲಾ ಜಂಟಿ ಕೃಷಿ ನಿರ್ದೇಶರಾದ ಚೇತನಾ ಪಾಟೀಲ ತಿಳಿಸಿದರು.ತಾಲೂಕಿನ ರಣತೂರ ಗ್ರಾಮ ಪಂಚಾಯಿತಿಯಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಭೂಮಿತಾಯಿ ರಕ್ಷಣೆ ಕಣ್ಗಾವಲು ಸಮಿತಿ ಸಭೆಯಲ್ಲಿ ಮಾತನಾಡಿ, ಕೇವಲ ಡಿಎಪಿ ಮತ್ತು ಯೂರಿಯಾ ಗೊಬ್ಬರಗಳಿಗೆ ಸೀಮಿತಗೊಳಿಸದೇ ಕಾಂಪ್ಲೆಕ್ಸ್ ಗೊಬ್ಬರ ಉಪಯೋಗಿಸಿಕೊಳ್ಳಬೇಕು. ಸಾವಯವ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕು ಎಂದರು.
ಲಘು ಪೋಷಕಾಂಶಗಳ ಬಗ್ಗೆ ರೈತರು ಅರಿತುಕೊಳ್ಳಬೇಕು. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಬರಡಾಗಲಿದೆ ಎಂದು ಗೊಬ್ಬರ ಕಂಡುಹಿಡಿದ ವಿಜ್ಞಾನಿಗಳೇ ಹೇಳಿದ್ದಾರೆ. ಆದರೆ, ರೈತರಿಗೆ ಇನ್ನೂ ತಿಳಿದಿಲ್ಲ. ರಾಸಾಯನಿಕಕ್ಕೆ ಪರ್ಯಾಯವಾಗಿ ನೈಸರ್ಗಿಕ ಗೊಬ್ಬರ ಬಳಕೆ ಮಾಡಬೇಕು. ರಾಸಾಯನಿಕ ಗೊಬ್ಬರ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ರೈತರು ರಾಸಾಯನಿಕ ಗೊಬ್ಬರ ಕೈಬಿಟ್ಟು ಸಾವಯವ ಗೊಬ್ಬರ ಬಳಕೆಗೆ ಮುಂದಾಗಬೇಕು ಎಂದರು.ಸಾವಯವ ಕೃಷಿ ಮಹತ್ವ ಸಾರುತ್ತಿರುವ ರೈತರು ಆಧುನಿಕ ಕೃಷಿ ಪದ್ಧತಿಗೆ ಶರಣಾಗಿ ಸಾಲಸೋಲ ಮಾಡಿ ಬೆಳೆ ಬೆಳೆದು ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದಿದ್ದಾಗ ಹತಾಶರಾಗಿ ಹೆಚ್ಚು ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿರುವುದು ಹೊಸತಲ್ಲ. ಇದಕ್ಕೆಲ್ಲ ಕಾರಣ ರಾಸಾಯನಿಕ ಪದಾರ್ಥಗಳ ಬಳಕೆ. ಪ್ರಸ್ತುತ ದಿನದಲ್ಲಿ ಅನ್ನ ಕೊಡುವ ಭೂಮಿತಾಯಿಗೆ ವಿಷ ಕೊಡುವ ಕೆಲಸ ಮಾಡುತ್ತಿದ್ದು, ಇದನ್ನು ಬಿಟ್ಟು ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದರು.ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ರೈತ ಬಸವರಾಜ ನಾವಿ ಮಾತನಾಡಿ, ಎರೆಹುಳು ಗೊಬ್ಬರ ಬಳಕೆಗೆ ಹೆಚ್ಚು ಒತ್ತು ನೀಡುವುದರಿಂದ ಉತ್ತಮ ಇಳುವರಿ ಬರುವುದಲ್ಲದೇ ಭೂ ಫಲವತ್ತತೆ ಯಥಾಸ್ಥಿತಿಯಾಗಿರುತ್ತದೆ. ರಾಸಾಯನಿಕ ಗೊಬ್ಬರಗಳಿಗೆ ಹೆಚ್ಚು ಹಣ ನೀಡುವುದರ ಬದಲಿಗೆ ಅದರ ಅರ್ಧದಷ್ಟು ಹಣವನ್ನು ಸಾವಯವ ಗೊಬ್ಬರಗಳಿಗೆ ಖರ್ಚ ಮಾಡಿದರೆ ಉತ್ತಮ ಫಸಲು ಪಡೆಯಬಹುದು ಎಂದರು.
ಜಿಲ್ಲಾ ಉಪ ಕೃಷಿ ನಿರ್ದೇಶಕರಾದ ಸ್ಫೂರ್ತಿ ಅವರು ಪ್ರಾತ್ಯಕ್ಷಿಕೆ ಮೂಲಕ ಬೀಜೋಪಚಾರ ಮಾಡುವ ವಿಧಾನ ಮತ್ತು ಬೀಜೋಪಚಾರ ಮಾಡುವುದರಿಂದ ಹೆಸರು, ಕಡಲೆ, ತೊಗರಿ ಬೆಳೆಗಳಲ್ಲಿ ಬೇರು ಕೊಳೆಯುವ ರೋಗವನ್ನು ತಡೆಗಟ್ಟಬಹುದು ಎನ್ನುವ ಕುರಿತು ರೈತರಿಗೆ ತಿಳಿಸಿದರು.ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಭೂಮಿತಾಯಿ ರಕ್ಷಣೆ ಕಣ್ಗಾವಲು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಅಧಿಕಾರಿ ಆರ್.ಸಿ. ಚಾಕಲಬ್ಬಿ ಹಾಗೂ ಸಿಬ್ಬಂದಿ ವರ್ಗ ಮತ್ತು ಗ್ರಾಮದ ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು.