ಅಕ್ರಮ ಮರಳುಗಾರಿಕೆ ತಡೆಗೆ ಕಂದಕ

| Published : Mar 30 2024, 12:55 AM IST

ಸಾರಾಂಶ

ಇತ್ತೀಚೆಗೆ ಮರಳು ಸಾಗಾಟಕ್ಕೆ ಪರವಾನಗಿದಾರರಿಗೆ ಅವಕಾಶ ನೀಡಲಾಗಿದ್ದರೂ ಅಕ್ರಮ ಮರಳುಗಾರಿಕೆ ತಡೆಯುವ ಪ್ರಯತ್ನ ಸ್ಥಳೀಯ ಅಧಿಕಾರಿಗಳು ಮಾಡಿರಲಿಲ್ಲ.

ಹೊನ್ನಾವರ: ತಾಲೂಕಿನ ಶರಾವತಿ ನದಿತಟದ ಎಡಬಲ ದಂಡೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು, ಮರಳು ಸಂಗ್ರಹಿಸಿ, ಸಾಗಾಟ ಮಾಡುವ ಪ್ರದೇಶಕ್ಕೆ ದಿಢೀರ್ ಭೇಟಿ ನೀಡಿದ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಅಕ್ರಮಕ್ಕೆ ಬ್ರೇಕ್ ಹಾಕಲು ಕಂದಕ ನಿರ್ಮಿಸಿದ್ದಾರೆ.

ಇತ್ತೀಚೆಗೆ ಮರಳು ಸಾಗಾಟಕ್ಕೆ ಪರವಾನಗಿದಾರರಿಗೆ ಅವಕಾಶ ನೀಡಲಾಗಿದ್ದರೂ ಅಕ್ರಮ ಮರಳುಗಾರಿಕೆ ತಡೆಯುವ ಪ್ರಯತ್ನ ಸ್ಥಳೀಯ ಅಧಿಕಾರಿಗಳು ಮಾಡಿರಲಿಲ್ಲ. ಯಥೇಚ್ಛವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಲೆ ಇದೆ. ಪರವಾನಗಿದಾರರಿಗಿಂತ, ಅಕ್ರಮ ಮರಳು ಸಾಗಾಟ ಮಾಡುವವರೇ ಕಡಿಮೆ ಮೊತ್ತಕ್ಕೆ ಮರಳು ಸಾಗಾಟ ಮಾಡುತ್ತಾರೆ. ಜನತೆಗೆ ಅಕ್ರಮವೋ, ಸಕ್ರಮವೋ ಒಟ್ಟಿನಲ್ಲಿ ಮರಳು ಸಿಕ್ಕರಾಯಿತು. ಹೀಗಿರುವಾಗ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಕ್ರಮ ಮರಳು ಸಾಗಾಟ ಮುಂದುವರಿದಿತ್ತು. ಆಗಾಗ ಕಾರವಾರದಿಂದ ಬರುವ ಭೂ ಮತ್ತು ಗಣಿ ಅಧಿಕಾರಿ ದಾಳಿ ಮಾಡಿದಾಗ ಮಾತ್ರ ಅಕ್ರಮ ಬೆಳಕಿಗೆ ಬರುತ್ತಿದೆ. ಅದರಂತೆ ಗುರುವಾರ ಕೂಡ ದಾಳಿ ನಡೆದಿದೆ. ಕೊಡಾಣಿ ಮತ್ತು ಮಾಳ್ಕೋಡ ಸೇತುವೆ ಹತ್ತಿರ ಆಶಾ ರವರು ಅಲ್ಲಿಯ ಅಕ್ರಮ ಮರಳುಗಾರಿಕೆ ತಡೆಯಲು, ಮರಳು ಸಾಗಾಟ ಮಾಡಲು ಸಾಧ್ಯವಾಗದಂತೆ ಜೆಸಿಬಿ ಯಂತ್ರ ಬಳಸಿ ರಸ್ತೆಗೆ ಕಂದಕ ನಿರ್ಮಾಣ ಮಾಡುವ ಮೂಲಕ ಅಕ್ರಮಕ್ಕೆ ಖೆಡ್ಡಾ ತೋಡಿದ್ದಾರೆ.

ನೀವು ಚಾಪೆ ಕೆಳಗೆ ತೂರಿದರೆ, ನಾವು ರಂಗೋಲಿ ಕೆಳಗೆ ತೂರುತ್ತೇವೆ ಎನ್ನುವ ರೀತಿಯಲ್ಲಿ ಅಧಿಕಾರಿಗಳು ಮರಳಿದ ನಂತರ ಮರಳು ಲೂಟಿಕೋರರು ಪುನಃ ಕಂದಕ ಮುಚ್ಚಿದರೂ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಬರಿದಾಗುತ್ತಿರುವ ಶರಾವತಿ ಒಡಲು: ತಾಲೂಕಿನ ಹಲವು ಕಡೆ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಹಬ್ಬಿಕೊಂಡಿದ್ದು, ಯಾವುದೇ ಆತಂಕವಿಲ್ಲದೆ ರಾಜಾರೋಷವಾಗಿ ನಡೆದುಕೊಂಡು ಬಂದಿತ್ತು. ತಾಲೂಕಿನ ಜನತೆಗೆ ಅಕ್ಕಪಕ್ಕದ ಜನರ ಬಳಕೆಗೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚು ಮರಳು ಸಾಗಾಣಿಕೆ ನದಿಯ ಒಡಲು ಬರಿದಾಗುವ ಮಟ್ಟಿಗೆ ಉದ್ಯಮ ಬೆಳೆದು ನಿಂತಿದೆ. ಕಳೆದ ಕೆಲವು ವರ್ಷಗಳಿಂದ ಶರಾವತಿ ನದಿ ಸಾವಿರಾರು ಜನರ ಬದುಕು ಕಟ್ಟಿಕೊಳ್ಳಲು ತನ್ನ ಒಡಲು ಬರಿದಾಗಿಸಿಕೊಂಡಿದೆ.

ಆರ್ಭಟ ಬಲುಜೋರು: ತಮ್ಮ ಬದುಕಿನ ಹಾದಿಗೆ ಉದ್ಯೋಗವಾಗಿ ಕಂಡುಕೊಂಡ ಮರಳುಗಾರಿಕೆ, ಹಂತ- ಹಂತವಾಗಿ ದೊಡ್ಡ ಉದ್ಯಮ ಅನ್ನುವುದಕ್ಕಿಂತ ಮಾಫಿಯಾ ಮಾದರಿಯಲ್ಲಿ ವಿಸ್ತರಣೆಗೊಳ್ಳುತ್ತಾ ಹೋಯಿತು. ಉಳ್ಳವರು ಕೂಡ ಇದರಲ್ಲಿ ತೊಡಕಿಕೊಂಡು ಮಾಲೀಕರಾದರು.

ಇದನ್ನೆ ಅವಲಂಬಿತ ಉದ್ಯೋಗವಾಗಿಸಿಕೊಂಡ ಮಧ್ಯಮ ವರ್ಗದವರು ಕಾರ್ಮಿಕರಾದರು. ಸರ್ಕಾರವು ಅನುಮತಿ ಕೊಟ್ಟಿತು. ಅನುಮತಿ ಪಡೆದವರ ಮರಳುಗಾರಿಕೆ ಪ್ರಾರಂಭವಾದ ಮೇಲೆ ಒಂದು ಹಂತದಲ್ಲಿ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ಮುಂದೆ ಸಾಗಿದಂತೆ ಈ ಉದ್ಯಮ ಸಕ್ರಮಕ್ಕಿಂತ ಅಕ್ರಮದ ಆರ್ಭಟವೇ ಹೆಚ್ಚಾಗುತ್ತಾ ಹೋಯಿತು. ಅದು ತಾಲೂಕು, ಜಿಲ್ಲೆ, ಹೊರ ಜಿಲ್ಲೆಗೂ ವಿಸ್ತಾರಗೊಂಡಿತು. ಈ ಉದ್ಯಮ ಒಂದು ವ್ಯವಸ್ಥೆಯನ್ನೇ ನಿಯಂತ್ರಣ ಮಾಡುವಷ್ಟರ ಮಟ್ಟಿಗೆ ಗಟ್ಟಿ ಬೇರು ಊರಿದೆ.

ಲಂಗು ಲಗಾಮಿಲ್ಲದ ದಂಧೆ: ಸರ್ಕಾರದ ಅನುಮತಿ ಪಡೆದ ಮರಳುಗಾರಿಕೆಗೆ ಸರಿಯಾಗಿ ಅವಕಾಶವನ್ನೇ ಕೊಡುವುದಿಲ್ಲ. ಅವರು ಎಷ್ಟೇ ಮನವಿ, ಪ್ರಯತ್ನ ಮಾಡಿದರೂ ಸರ್ಕಾರ ಅವಕಾಶ ಕೊಡುತ್ತಿಲ್ಲ. ಅವರು ಉದ್ಯಮ ನಡೆಸುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ. ಆದರೆ ಅಕ್ರಮ ಮರಳುಗಾರಿಕೆಗೆ ಯಾವುದೇ ನಿಯಂತ್ರಣವೇ ಇಲ್ಲದೆ ಎಗ್ಗಿಲ್ಲದೆ ಸಾಗಿತ್ತು. ಆಗಾಗ ಅಂತಹ ಅಧಿಕಾರಿ ಬಂದಾಗ ದಾಳಿ ನಡೆದು ಸ್ವಲ್ಪ ಮಟ್ಟಿಗೆ ಸುದ್ದಿ ಆಗಿದ್ದು ಬಿಟ್ಟರೆ, ಸಂಪೂರ್ಣ ತಡೆಯಲು ಸಾಧ್ಯವಾಗಿಲ್ಲ.

ಅಭಯಹಸ್ತ: ರಾತ್ರಿ ಆಯಿತು ಅಂದರೆ ಅಕ್ರಮ ಮರಳು ತುಂಬಿ ಅಧಿಕಾರಿಗಳು ದಾಳಿ ಮಾಡುತ್ತಾರೆಂಬ ಭಯದಲ್ಲೇ ವೇಗದಲ್ಲೇ ಸಂಚರಿಸುವ ಟಿಪ್ಪರ್, ಲಾರಿ, ಬೊಲೆರೋ ವಾಹನ, ಅದನ್ನು ಕಾಯಲು ಗುಪ್ತಚರರಂತೆ ನೇಮಕಗೊಂಡವರು ಕಾಣಸಿಗುತ್ತಾರೆ. ಇದೆಲ್ಲವೂ ಕೆಲ ಆರಕ್ಷಕರ ಅಭಯಹಸ್ತದಿಂದ ಆತಂಕವಿಲ್ಲದೆ ಸಾಗುತ್ತಿದೆ ಎನ್ನುವ ಮಾಹಿತಿಯು ಇದೆ. ಆಡಳಿತ ವ್ಯವಸ್ಥೆ ಅವರ ರಕ್ಷಣೆಗೆ ನಿಂತಿರುವ ಬಗ್ಗೆ ಬಹಿರಂಗವಾಗಿ ಮಾಹಿತಿ ನೀಡಲು ಜನ ಹಿಂಜರಿಯುತ್ತಾರೆ. ಅದರಲ್ಲೂ ಈ ಉದ್ಯಮಕ್ಕೆ ರಾಜಕಾರಣಿಗಳ ನೆರಳು ಮೊದಲ ಆಸರೆ ಎನ್ನುವುದು ಕಠೋರ ಸತ್ಯ.