ಸಾರಾಂಶ
ಸ.ಗಿರಿಜಾಶಂಕರ್ ಚೊಚ್ಚಲ ಕೃತಿ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜ್ಞಾನದ ಬಾಗಿಲು ತೆಗೆದು ಬೆಳಕು ಚೆಲ್ಲುವ ’ಸಹಸ್ಪಂದನ’ ವೈವಿಧ್ಯಮಯ ಚಿತ್ರಶಾಲೆ ಎಂದು ಮೈಸೂರು ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಡಾ. ಎನ್.ಎಸ್. ತಾರಾನಾಥ್ ಹೇಳಿದರು.ಸುಗಮ ಸಂಗೀತ ಗಂಗಾ ಮತ್ತು ವೈಲ್ಡ್ ಕ್ಯಾಟ್ - ಸಿ ನೇತೃತ್ವದಲ್ಲಿ ಉದ್ಭವ ಪ್ರಕಾಶನ, ಕಲ್ಕಟ್ಟೆ ಪುಸ್ತಕದ ಮನೆ, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಮತ್ತು ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್ ಅವರ ಸಮಗ್ರ ಲೇಖನ ಹಾಗೂ ವಿಮರ್ಶೆಗಳ ಸಂಗ್ರಹ ಕೃತಿ ’ಸಹಸ್ಪಂದನ’ ಲೋಕಾರ್ಪಣೆಗೊಳಿಸಿ ಮಾತನಾಡಿದರು.ವೈವಿಧ್ಯಮಯ ಬರಹಗಳಿರುವ ಸಂಕಿರಣ ಕೃತಿ ಇದು. ಸ್ವಯಂ ಕಾಳಜಿಯಿಂದ ಬರೆದ 72 ಲೇಖನಗಳಿವೆ. ಕೃತಿಕಾರರ ಪರಿಸರ ಆಸೆ, ಕಾಳಜಿ, ಯೋಜನಾ ಧಾಟಿ ಪ್ರತಿಫಲನವಾಗಿದೆ. ಪತ್ರಿಕೋದ್ಯಮ ಮತ್ತು ಬರವಣಿಗೆ ಗಿರಿಜಾಶಂಕರ್ ಅವರ ಶ್ವಾಸ ಕೋಶ. ಪ್ರಕೃತಿ ಪ್ರೇಮ ಉಚ್ಚ್ವಾಸವಾದರೆ ಪುಸ್ತಕ ಪ್ರೀತಿ ನಿಶ್ವಾಸವಾಗಿ ಕೃತಿಯಲ್ಲಿ ಹೆಪ್ಪುಗಟ್ಟಿದೆ ಎಂದರು. ಪರಿಸರ ಕಾಳಜಿ ನಮ್ಮ ಜೀವನದ ಜೊತೆ ಬೆರೆತಿದೆ. ರಾಮಾಯಣ ಮಹಾಭಾರತದ ಕಾಲದಿಂದ ಪರಿಸರ ಪ್ರಜ್ಞೆ ಸಮಾಜ ದಲ್ಲಿ ರೂಪಿತಗೊಂಡಿದೆ. ಮಾವು ಮಲ್ಲಿಗೆಯ ಮದುವೆ, ಅರಳಿಮರಕ್ಕೆ ಮುಂಜಿ, ಸಸ್ಯಗಳನ್ನು ಶಕ್ತಿಕೇಂದ್ರವಾಗಿ ಆರಾಧಿಸುವ ಪದ್ಧತಿ ಹಿಂದಿನಿಂದಲೂ ಇದೆ. ಶಾಕುಂತಲೆ ನಾಟಕದಲ್ಲಿ ಗಿಡ, ಮರ ಪ್ರಕೃತಿಗೆ ದೈವತ್ವದ ಸ್ಥಾನ ನೀಡಿರುವುದನ್ನು ಉಲ್ಲೇಖಿ ಸಿದ ತಾರಾನಾಥ್ , ಮಣ್ಣು ಮೆತ್ತಿದರೆ ಶ್ರೀಗಂಧ, ಮಳೆ ನೀರು ಪವಿತ್ರ ತೀರ್ಥ, ಕಾಲು ಎಡವಿದರೆ ಶಕ್ತಿಶಿಲೆ ಎಂದು ಪರಿಭಾವಿಸಲಾಗುತ್ತಿದೆ ಎಂದು ಸ್ಮರಿಸಿದರು.
ಪರಿಸರ ಜೀವನದ ಉಸಿರು ಮತ್ತು ಪೈರು ಆಗಿರುವುದನ್ನು ಸಹಸ್ಪಂದನದಲ್ಲಿ ಗಮನಿಸಬಹುದು. ಪರಿಸರದ ಕೆಲಸಕ್ಕೆ ತಾತ್ವಿಕತೆ ಮತ್ತು ವೈಜ್ಞಾನಿಕತೆ ತೋರಿಸಲಾಗಿದೆ. ಕಾರಂತ, ತೇಜಸ್ವಿ, ಗಿರೀಶ್, ಉಲ್ಲಾಸ್ ಮತ್ತಿತರರ ಒಡನಾಟ ಪರಿಸಕ್ಕೆ ಸಂಬಂಧಿಸಿದ ಅವರ ಪ್ರಯತ್ನ ಬಿಂಬಿಸುತ್ತದೆ. ಪುಸ್ತಕ ಸಂಸ್ಕೃತಿ ಕುಸಿಯುತ್ತಿರುವ ಕಾಲದಲ್ಲಿ ಒಳ್ಳೆಯ ಪುಸ್ತಕ ಪರಿಚಯಿಸಿ ಓದಿನ ವಿಸ್ತಾರಕ್ಕೆ ಕಾರಣರಾಗಿದ್ದಾರೆ. ವ್ಯಾಸಂಗದ ಆಸಕ್ತಿ, ವಿಸ್ತಾರ ಇಲ್ಲಿ ಬಿಂಬಿತವಾಗಿದೆ ಎಂದು ಹೇಳಿದರು.ಸುಗಮ ಸಂಗೀತ ಗಂಗಾ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಅಜಾತ ಶತ್ರುವಾಗಿ ಎಲ್ಲರಿಂದಲೂ ಒಳಿತನ್ನು ಕಲಿತು ಇತರರಿಗೂ ಕಲಿಸಿದ ಗಿರಿಜಾಶಂಕರ್, ಪತ್ರಿಕೆ ಮೂಲಕ ಜಿಲ್ಲೆಯ ಜನರ ಮಿತ್ರರಾಗಿಯೂ ಪ್ರೀತಿಗಳಿಸಿದ್ದಾರೆಂದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಅನೇಕ ಯುವಕರನ್ನು ಬೆಳೆಸಿ ತಾವೂ ಬೆಳೆದು ಸಮಾಜಕ್ಕೆ ಉತ್ತಮ ಕಾಣಿಕೆ ನೀಡಿರುವ ಗಿರಿಜಾಶಂಕರ್, ಜಾತಿ, ವರ್ಗ, ಪಕ್ಷ, ಲಿಂಗಬೇಧವಿಲ್ಲದೆ ಜನರ ಪ್ರೀತಿ ಗಳಿಸಿರುವುದಕ್ಕೆ ಈ ಸಮಾರಂಭವೇ ಸಾಕ್ಷಿ ಎಂದರು. ’ಮೊದಲ ಓದುಗ’ರಾಗಿ ಕೃತಿಯಲ್ಲಿ ರೈತರ ಆತ್ಮವಿಶ್ವಾಸ ಮೂಡಿಸುವ ಬರಹದ ಕೆಲವು ಸಾಲುಗಳನ್ನು ವಾಚಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಪರಿಶುದ್ಧ ಪತ್ರಕರ್ತರಾಗಿ ಮೂಡಿ ಬಂದಿರುವ ಗಿರಿಜಾಶಂಕರ್ ಗುಣಗ್ರಾಹಿ ಎಂದು ಹೇಳಿದರು. ವೈಲ್ಡ್ ಕ್ಯಾಟ್- ಸಿ ಸ್ಥಾಪಕ ಡಿ.ವಿ.ಗಿರೀಶ್ ಮಾತನಾಡಿ, ಸ್ನೇಹಿತ ಮತ್ತು ಮಾರ್ಗದರ್ಶಿಯಾದ ಗಿರಿಜಾಶಂಕರ್ ನಮ್ಮೆಲ್ಲ ಪರಿಸರದ ಹೋರಾಟಕ್ಕೆ ಪತ್ರಕರ್ತರಾಗಿ ಹೆಗಲುಕೊಟ್ಟು ಬೆಂಬಲಿಸಿದವರೆಂದರು. ಕೃತಿಕಾರ ಸ.ಗಿರಿಜಾಶಂಕರ್ ಮಾತನಾಡಿ, ತಾವೊಬ್ಬ ಸಾಹಿತಿ ಅಥವಾ ವಿಮರ್ಶಕನಲ್ಲ.ಅವಸರದ ಬರವಣಿಗೆಯ ಪತ್ರಕರ್ತ. ಪುಸ್ತಕದ ಗೀಳನ್ನು ಹಚ್ಚಿಕೊಂಡವನು. ಸಂಘದ ಹಿರಿಯರಾದ ನ.ಕೃಷ್ಣಪ್ಪ, ವಿದ್ಯಾಗುರು ಶ್ರೀಶೈಲಾರಾಧ್ಯ ಮತ್ತಿತರರ ಪ್ರೋತ್ಸಾಹದಿಂದ ಓದು ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು ಇಂದು ’ಸಹಸ್ಪಂದನ’ ಆಗಿದೆ. ಭೈರಪ್ಪ, ಕಾರಂತ, ತೇಜಸ್ವಿ ಮತ್ತಿತರರು ಓದಿನ ಹುಚ್ಚನ್ನು ಹೆಚ್ಚಿಸಿದವರು. ವೈಯಕ್ತಿಕ ಶ್ರಮಕ್ಕಿಂತ ಬೆನ್ನಹಿಂದಿನ ಸ್ಫೂರ್ತಿಯೆ ಕೃತಿಗೆ ಕಾರಣ ಎಂದರು.ಡಾ.ಎಚ್.ಎಸ್.ಸತ್ಯನಾರಾಯಣ , ಡಾ.ಬೆಳವಾಡಿ ಮಂಜುನಾಥ್ ಅತಿಥಿಗಳನ್ನು ಪರಿಚಯಿಸಿದರು. ಎಂ.ಎ.ನಾಗೇಂದ್ರ , ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ , ಅಮೇರಿಕಾದ ಕನ್ನಡತಿ ಸೌಮ್ಯಕೃಷ್ಣ , ವಿಶ್ವಾಸ ಜಿ.ಸರಗೂರ, ಮಲ್ಲಿಗೆ ಸುಧೀರ್ ಮತ್ತು ಎಂ.ಎಸ್.ಸುಧೀರ್ ಬಳಗದಿಂದ ಗೀತ ಗಾಯನ ಗಮನ ಸೆಳೆಯಿತು.28 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಮೈಸೂರು ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಡಾ. ಎನ್.ಎಸ್. ತಾರಾನಾಥ್ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಅವರ ಸಮಗ್ರ ಲೇಖನ ಹಾಗೂ ವಿಮರ್ಶೆಗಳ ಸಂಗ್ರಹ ಕೃತಿ ’ಸಹಸ್ಪಂದನ’ ಲೋಕಾರ್ಪಣೆಗೊಳಿಸಿದರು.