ಹಿಂದೂ ಸಮಾಜಕ್ಕೆ ಶಕ್ತಿ ಕೊಟ್ಟ ದೈವಜ್ಞ ಸಮಾಜ: ಚನ್ನಬಸಪ್ಪ

| Published : Nov 07 2023, 01:31 AM IST

ಸಾರಾಂಶ

ವಾಜಪೇಯಿ ಬಡಾವಣೆಯಲ್ಲಿ ಕನ್ನಡ ದೈವಜ್ಞ ಬ್ರಾಹ್ಮಣ ಸಂಘ ಕಾರ್ಯಾಲಯ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸ್ವಾಭಿಮಾನಿ ಸಮಾಜವಾದ ದೈವಜ್ಞ ಸಮಾಜದವರು, ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೇ, ಹಿಂದೂ ಸಮಾಜಕ್ಕೆ ಶಕ್ತಿ ಕೊಟ್ಟ ಸಮಾಜವಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ನಗರದ ಮಲ್ಲಿಗೆನಹಳ್ಳಿಯ ವಾಜಪೇಯಿ ಬಡಾವಣೆಯಲ್ಲಿ ರಾಜ್ಯ ಕನ್ನಡ ದೈವಜ್ಞ ಬ್ರಾಹ್ಮಣ ಸಂಘದ ಕಾರ್ಯಾಲಯ ಉದ್ಘಾಟನೆ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಶ್ರೀ ಹಯಗ್ರೀವ ಪೂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜನಾರ್ಧನ ರಥೋತ್ಸವಕ್ಕೆ ಲಕ್ಷಾಂತರ ಜನ ಸೇರುತ್ತಾರೆ. ರಥೋತ್ಸವವನ್ನು ಕೈಯಿಂದ ಎಳೆದಾಗ ಮಾತ್ರ ಪುಣ್ಯ ಬರುತ್ತದೆ. ಹಾಗೆಯೇ ಸಮಾಜದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಕೈಜೋಡಿಸಿದರೆ ಮಾತ್ರ ಸಮಾಜದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ನಗರದಲ್ಲಿ ನಿರ್ಮಾಣವಾಗುವ ದೈವಜ್ಞ ಭವನ ಕಟ್ಟಡಕ್ಕೆ ಸರ್ಕಾರದ ವತಿಯಿಂದ ಅನುದಾನ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಕರ್ಕಿ ಶ್ರೀ ಜ್ಞಾನೇಶ್ವರಿ ಪೀಠದ ದೈವಜ್ಞ ಬ್ರಾಹ್ಮಣ ಮಠಾಧೀಶ್ವರ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿ, ದಿವ್ಯ ಸಾನ್ನಿಧ್ಯ ಆಶೀರ್ವಚನ ನೀಡಿ, ದೇವರನ್ನು ಅರಿತವರು ದೈವಜ್ಞ ಬ್ರಾಹ್ಮಣರು. ಭಾಷೆ ಯಾವುದೇ ಇರಲಿ, ಭಾವನೆ ಎಲ್ಲರಲ್ಲೂ ಒಂದೇ ಇರಬೇಕು. ಭಾವನೆಗಳಿಗೆ ಸ್ಪಂದಿಸುವ ಭಾಷೆ ಬೇಕು. ಯಾವಾಗ ಭಾವನೆ ಪ್ರಾಮುಖ್ಯತೆ ಪಡೆಯುತ್ತದೆಯೋ, ಆಗ ಮಾತ್ರ ಉನ್ನತಮಟ್ಟಕ್ಕೆ ಹೋಗಲು ಸಾಧ್ಯ ಎಂದರು.

ದೈವಜ್ಞರಲ್ಲಿ ಮರಾಠಿ, ಕೊಂಕಣಿ, ಕನ್ನಡ ಭಾಷೆ ಮಾತನಾಡುವವರು ಇದ್ದಾರೆ. ಪ್ರತಿಯೊಬ್ಬರಲ್ಲೂ ಹರಿಯುತ್ತಿರುವುದು ರಕ್ತ ಒಂದೇ. ಎಲ್ಲರೂ ಸೇರಿದರೆ ಸಂಘಟನೆ ಮಾಡಲು ಸಾಧ್ಯ. ಯಾವುದೇ ಕೆಲಸ ಒಬ್ಬರಿಂದ ಸಾಧ್ಯವಿಲ್ಲ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರಲ್ಲದೆ, ಸಮಾಜದ ಅಭಿವೃದ್ಧಿಯ ಮೆಟ್ಟಿಲುಗಳನ್ನು ಎಲ್ಲರೂ ಸೇರಿ ಹತ್ತೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕನ್ನಡ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಎನ್. ಕೃಷ್ಣಮೂರ್ತಿ ಮಾತನಾಡಿ, ಸುಮಾರು ₹6 ಕೋಟಿ ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಸಂಘದ ನಿರಂತರ ಕಾರ್ಯ ಚಟುವಟಿಕೆಗೆ ಗುರುಗಳ ಆಶೀರ್ವಾದ, ಸಮಾಜ ಬಾಂಧವರ ಸಹಕಾರ ಅಗತ್ಯ ಎಂದು ಹೇಳಿದರು.

ಕಾರ್ಯದರ್ಶಿ ನಾಗರಾಜ್ ಕೆ. ಮಾತನಾಡಿ, 2006ರಲ್ಲಿ ಸಮಾಜದ ಹಿರಿಯರಾದ ಮಹಾದೇವಪ್ಪ ಅವರ ಮುಂದಾಳತ್ವದಲ್ಲಿ ಸಂಘ ಪ್ರಾರಂಭಗೊಂಡಿತು. ಸಂಘ ತನ್ನದೇ ಆದ ಕಾರ್ಯ ಚಟುವಟಿಕೆ ಸಮಾಜದಲ್ಲಿ ಮಾಡುತ್ತಿದೆ ಎಂದರು.

ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಜ್ಞಾನೇಶ್ವರ, ಸಂಘದ ಗೌರವಾಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ರಾಮಚಂದ್ರ, ಸಹ ಕಾರ್ಯದರ್ಶಿ ಮಂಜುನಾಥ್, ಲೋಕೇಶ್, ಸಂಘದ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕು. ದಿವ್ಯ ಪ್ರಾರ್ಥಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾನ್ವಿತ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಗೂ ಕಟ್ಟಡದ ದಾನಿಗಳನ್ನು ಅಭಿನಂದಿಸಲಾಯಿತು. ಮಲೆನಾಡು ವಾಯ್ಸ್ ಪತ್ರಿಕೆ ಸಂಪಾದಕ ನಗರ ರಾಘವೇಂದ್ರ, ದೈವಜ್ಞ ಕಿರಣ ಪಾಕ್ಷಿಕ ಸಂಪಾದಕ ಗಣೇಶ್ ಅವರನ್ನು ಶ್ರೀಗಳು ಗೌರವಿಸಿದರು.

ಶಿವಮೊಗ್ಗ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ದೈವಜ್ಞ ಬಂಧುಗಳು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- - - -ಪೋಟೋ: ಕಾರ್ಯಕ್ರಮವನ್ನು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಶ್ರೀ ಉದ್ಘಾಟಿಸಿದರು.