ವಿವಾಹ ವಿಚ್ಛೇದನದಿಂದ ಕುಟುಂಬ ವ್ಯವಸ್ಥೆಯ ಮೇಲೆ ಪೆಟ್ಟು: ಸ್ವರ್ಣವಲ್ಲೀ ಶ್ರೀ

| Published : Nov 23 2025, 03:00 AM IST

ವಿವಾಹ ವಿಚ್ಛೇದನದಿಂದ ಕುಟುಂಬ ವ್ಯವಸ್ಥೆಯ ಮೇಲೆ ಪೆಟ್ಟು: ಸ್ವರ್ಣವಲ್ಲೀ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕುಟುಂಬ ವ್ಯವಸ್ಥೆ ಹಾಳಾಗುತ್ತಿದ್ದು, ವಿಚ್ಛೇದನವಾಗದಂತೆ ದಂಪತಿಗಳು ಸಂಸಾರ ನಡೆಸಬೇಕು.

ಸರ್ವ ದಂಪತಿಗಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಕನ್ನಡಪ್ರಭ ವಾರ್ತೆ ಶಿರಸಿ

ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕುಟುಂಬ ವ್ಯವಸ್ಥೆ ಹಾಳಾಗುತ್ತಿದ್ದು, ವಿಚ್ಛೇದನವಾಗದಂತೆ ದಂಪತಿಗಳು ಸಂಸಾರ ನಡೆಸಬೇಕು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಶನಿವಾರ ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಗ್ರಾಮಾಭ್ಯುದಯ ಸಂಸ್ಥೆ, ಮಾರಿಕಾಂಬಾ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸರ್ವ ದಂಪತಿಗಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ವಿವಾಹ ವಿಚ್ಛೇದನವಾದರೆ ತಂದೆ-ತಾಯಿ ದೂರವಾಗಿ ಮಕ್ಕಳಿಗೆ ಸಂಸ್ಕಾರ ಸಿಗದಂತಾಗುತ್ತದೆ. ಧರ್ಮದ ಪ್ರಕಾರ ವಿವಾಹ ವಿಚ್ಛೇದನ ತಪ್ಪು. ಅದಕ್ಕೆ ಅವಕಾಶವೇ ಇಲ್ಲ. ಕಾರಣಾಂತರಗಳಿಂದ ಕಾನೂನಿನಲ್ಲಿ ವಿವಾಹ ವಿಚ್ಛೇದನಕ್ಕೆ ಅವಕಾಶವಿದ್ದರೂ ಮೊದಲು ಒಂದುಗೂಡಿಸಲೇ ಅವರು ಪ್ರಯತ್ನಿಸುತ್ತಾರೆ. ವಿಚ್ಛೇದನ ಆಗದಂತೆ ಅನ್ಯೋನ್ಯವಾಗಿ ಸಂಸಾರ ನಡೆಸಬೇಕು. ಪರಸ್ಪರ ಹೊಂದಾಣಿಕೆ ಮೂಲಕ ಜೀವನ ನಡೆಸಿದರೆ ವಿಚ್ಛೇದನ ಪ್ರಕರಣ ಇಳಿಮುಖವಾಗುತ್ತದೆ. ಭ್ರೂಣ ಹತ್ಯೆ ಮಹಾಪಾಪದ ಕೆಲವಾಗಿದ್ದು, ಭ್ರೂಣ ಹತ್ಯೆಯನ್ನು ತಡೆಯಬೇಕಿದೆ. ಕಾನೂನುನಲ್ಲಿಯೂ ಸಹ ಇದಕ್ಕೆ ವಿರೋಧವಿದೆ. ಪರೋಕ್ಷ ಭ್ರೂಣ ಹತ್ಯೆಸಹ ಮಾಡಬಾರದು‌ ಎಂದರು.ದಂಪತಿ ಕನಿಷ್ಠ ಮೂರು ಮಕ್ಕಳನ್ನು ಹೊಂದಿರಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಸಂಸ್ಕಾರ ನೀಡದಿದ್ದರೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ತಂದೆ-ತಾಯಿ ಮೇಲಾಗುತ್ತದೆ. ಮನೆಯಲ್ಲಾಗುವ ಭಜನೆ ಪೂಜೆಯಲ್ಲಿ ಮಕ್ಕಳು ತೊಡಗುವಂತೆ ಮಾಡಬೇಕು. ಟಿವಿ, ಮೊಬೈಲ್ ಬಳಕೆಯಿಂದ ದೂರವಿದ್ದು ಕುಟುಂಬ ಸದಸ್ಯರೊಂದಿಗೆ ಬೆರೆಯುವಂತೆ ಮಾಡಬೇಕು ಎಂದರು.ಮನೆಯಲ್ಲಿನ ಹವ್ಯಾಸಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಒಳ್ಳೆಯ ಸಂಸ್ಕಾರ ನೀಡುವುದು ತಂದೆ ತಾಯಿಗಳ‌ ಕರ್ತವ್ಯವಾಗಿದೆ. ‌ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.‌ ಆಗ ನಮ್ಮ ನಡುವಳಿಕೆ ಸಹ ಉತ್ತಮವಾಗಿರುತ್ತದೆ ಎಂದ ಶ್ರೀಗಳು, ಭ್ರೂಣ ಹತ್ಯೆ ಮಾಡಬಾರದು ಎಂಬ ನಿಟ್ಟಿನಲ್ಲಿ ಸರ್ವ ದಂಪತಿಗಳ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ರವೀಂದ್ರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.ಮುಂಜಾನೆ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ರವೀಂದ್ರ ನಾಯ್ಕ ಶಿಬಿರ ಉದ್ಘಾಟಿಸಿ, ಸಾಂದರ್ಭಿಕ ಮಾತನಾಡಿದರು. ಗ್ರಾಭ್ಯುದಯ ಅಧ್ಯಕ್ಷ ರಾಮಚಂದ್ರ ಹೆಗಡೆ ಕಂಚ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು.ಯೋಗ ಮತ್ತು ನಿಸರ್ಗ ಚಿಕಿತ್ಸೆ ‌ಕುರಿತು ಡಾ. ಕೀರ್ತಿ ಕೆ., ಸತ್ ಸಂತಾನಕ್ಕಾಗಿ ಆಯುರ್ವೇದ ಸೂತ್ರಗಳ ಕುರಿತು ಡಾ. ವಿನಾಯಕ ಹೆಬ್ಬಾರ, ಸತ್ ಸಂತಾನಕ್ಕಾಗಿ ಶಾಸ್ತ್ರ ಸೂತ್ರಗಳ ಕುರಿತು ಸೀತಾರಾಮ ಭಟ್ಟ ಮತ್ತಿಗಾರ, ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯ ಮತ್ತು ಕುಟುಂಬ ಜೀವನದ ಮಹತ್ವದ ಕುರಿತು ಕೃಷ್ಣ ಶ್ರೀನಿವಾಸ ದೇಶಪಾಂಡೆ ಗೋಷ್ಠಿ ನಡೆಸಿ ಮಾಹಿತಿ ನೀಡಿದರು.