ಭಟ್ಕಳದಲ್ಲಿ ಸಡಗರದ ದೀಪಾವಳಿ ಆಚರಣೆ

| Published : Nov 01 2024, 12:02 AM IST / Updated: Nov 01 2024, 12:03 AM IST

ಸಾರಾಂಶ

ದೀಪವಾಳಿಯ ಅಂಗವಾಗಿ ಗುರುವಾರ ಬೆಳಗ್ಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಲಾಯಿತು. ನರಕ ಚತುರ್ದಶಿಯ ಪ್ರಯುಕ್ತ ಮನೆ ಮನೆಗಳಲ್ಲಿ ಬಲಿ ಚಕ್ರವರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಭಟ್ಕಳ: ತಾಲೂಕಿನಾದ್ಯಂತ ಸಂಭ್ರಮ, ಸಡಗರದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.

ದೀಪವಾಳಿಯ ಅಂಗವಾಗಿ ಗುರುವಾರ ಬೆಳಗ್ಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಲಾಯಿತು. ನರಕ ಚತುರ್ದಶಿಯ ಪ್ರಯುಕ್ತ ಮನೆ ಮನೆಗಳಲ್ಲಿ ಬಲಿ ಚಕ್ರವರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ದೀಪಾವಳಿ ಹಬ್ಬದ ಪ್ರಯುಕ್ತ ಮನೆಗಳನ್ನು ಸಿಂಗರಿಸಿದ್ದರೆ, ಅಂಗಡಿ, ಕಚೇರಿ ಮುಂತಾದವುಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಗುರುವಾರ ಮಧ್ಯಾಹ್ನದಿಂದಲೇ ಅಮಾವಾಸ್ಯೆ ಆರಂಭಗೊಂಡ ಹಿನ್ನೆಲೆ ಶ್ರದ್ಧಾಭಕ್ತಿಯ ಪೂರ್ವಕವಾಗಿ ಎಲ್ಲೆಡೆ ಲಕ್ಷ್ಮೀಪೂಜೆ ನೆರವೇರಿಸಲಾಯಿತು. ವಾಹನಗಳ ಪೂಜೆಯೂ ಸಹ ನೆರವೇರಿತು. ಕೆಲವರು ಶುಕ್ರವಾರವೂ ಲಕ್ಷ್ಮೀ ಪೂಜೆ ನೆರವೇರಿಸಲಿದ್ದಾರೆ. ತರಕಾರಿ, ಹೂವು, ಹಣ್ಣು, ಬೇಳೆಕಾಳು ಸೇರಿದಂತೆ ಎಲ್ಲ ಸಾಮಗ್ರಿಗಳ ಬೆಲೆ ಹೆಚ್ಚಾಗಿದ್ದರೂ ಲೆಕ್ಕಿಸದ ಜನತೆ ದೀಪಾವಳ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ದೀಪಾವಳಿ ಹಬ್ಬಕ್ಕೆಂದು ತರತರದ ಹಣತೆ ಮತ್ತಿತರ ಸಾಮಗ್ರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ತಮಗಿಷ್ಟವಾದ ಸಾಮಗ್ರಿಗಳನ್ನು ಜನರು ಖರೀದಿಸಿದರು. ದೀಪಾವಳಿಗೆ ಸೌತೆ ಕಾಯಿ ಅಗತ್ಯವಾಗಿ ಬೇಕಾಗಿರುವುದರಿಂದ ಈ ಸಲ ಯಥೇಚ್ಛವಾಗಿ ಸೌತೆಕಾಯಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ಜನರು ಮುಗಿಬಿದ್ದು ಖರೀಧಿಸಿದ್ದು ಕಂಡುಬಂತು.

ಹೊರಗಿನ ಹೂವು ಮಾರಾಟಗಾರರೂ ಗೂಡ್ಸ್ ವಾಹನದಲ್ಲಿ ಸೇವಂತಿ, ಗೊಂಡೆ ಸೇರಿದಂತೆ ವಿವಿಧ ಜಾತಿ ಹೂವುಗಳನ್ನು ತಂದು ಭರ್ಜರಿ ವ್ಯಾಪಾರ ಮಾಡಿದರು. ಸಂಭ್ರಮದ ಶಿವ- ಗಂಗಾ ವಿವಾಹ ಮಹೋತ್ಸವ

ಗೋಕರ್ಣ: ಪರಂಪರೆಯಂತೆ ಮಹಾಬಲೇಶ್ವರ ದೇವಾಲಯದ ಕ್ರೋಧಿ ಸಂವತ್ಸರದ ಶಿವಗಂಗಾ ಮಹೋತ್ಸವ ಅದ್ಧೂರಿಯಾಗಿ ಗುರುವಾರ ಸಂಜೆ ನೆರವೇರಿತು.ಮುಖ್ಯ ಕಡಲತೀರದಿಂದ ೫ ಕಿಮೀ ಗಂಗಾವಳಿ ಕಡಲತೀರದವರೆಗೆ ತಳಿರು ತೋರಣ, ವಿಶಿಷ್ಟ ಮಂಟಪದ ಜತೆ ಹಾಲಕ್ಕಿ ಒಕ್ಕಕಲಿಗ ಸಮುದಾಯದ ಜಾನಪದ ಹಾಡು ಗುಮಟೆ ಪಾಂಗ್, ಎಲ್ಲೆಲ್ಲೂ ಸಂಭ್ರಮದಲ್ಲಿ ಶಿವಗಂಗಾ ವಿವಾಹ ಮಹೋತ್ಸವ ಗುರುವಾರ ಸಾಯಂಕಾಲ ವೈಭವದಿಂದ ನಡೆಯಿತು.ಗಂಗಾಷ್ಟಮಿಯ ಮುಂಜಾವಿನಲ್ಲಿ ವಿವಾಹ ನಿಶ್ಚಯವಾದಂತೆ ಇಲ್ಲಿನ ಗೋಕರ್ಣ- ಗಂಗಾವಳಿ ನಡುವಿನ ಕಡಲ ತೀರದಲ್ಲಿ ಸೂರ್ಯ ಪಶ್ಚಿಮಮುಖವಾಗಿ ತೆರಳುವ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಿಶ್ಚಿತಮಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವಿವಾಹವಾದಳು.

ಕಡಲಿನ ಅಬ್ಬರ, ವಾದ್ಯಘೋಷ, ವೇದಘೋಷ ವಿಶಿಷ್ಟ ತೋರಣ, ಜಾನಪದ ಹಾಡು ಉತ್ಸವದ ಮೆರುಗನ್ನು ನೀಡಿದವು. ವಿವಾಹದ ನಂತರ ಉತ್ಸವವು ಭಕ್ತರು ಆರತಿ ನೀಡಿ ದೇವ ದಂಪತಿಗಳನ್ನು ಬರಮಾಡಿಕೊಂಡರು.ಇಲ್ಲಿನ ದೈವರಾತ ಆಶ್ರಮ ಹಾಗೂ ಅಮೃತಾನ್ನ ಭೋಜನ ಶಾಲೆಗೆ ಚಿತ್ತೈಸಿ ಉತ್ಸವ ಸುಂದರವಾಗಿ ಶೃಂಗಾರಗೊಂಡ ಮಂಟಪದಲ್ಲಿ ರಾಜೋಪಚಾರ ಪೂಜೆ ಸ್ವೀಕರಿಸಿ ದೇವಾಲಯಕ್ಕೆ ಆಗಮಿಸಿತು. ಅಮೃತಾನ್ನ ವಿಭಾಗದಲ್ಲಿ ಪ್ರಸಾದ ವಿತರಣೆ ನಡೆಯಿತು. ಊರ ನಾಗರಿಕರು, ಎಲ್ಲ ಸಮಾಜದ ಭಕ್ತರು ಪಾಲ್ಗೊಂಡಿದ್ದರು.

ವೇ. ಗಣಪತಿ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು. ಪಿಐ ವಸಂತ್ ಆಚಾರ ಮಾರ್ಗದರ್ಶನದಲ್ಲಿ ಪಿಎಸ್‌ಐ ಖಾದರ್ ಬಾಷಾ, ಶಶಿಧರ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ್‌ ಒದಗಿಸಿದ್ದರು. ಮೇಲುಸ್ತುವಾರಿ ಸಮಿತಿ ಮಾರ್ಗದರ್ಶನದಲ್ಲಿ ನಡೆದ ದೈವಿಕ ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರು, ಮಂದಿರದ ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.