ದೀಪಾವಳಿ ಹಬ್ಬದ ಸಂಭ್ರಮ ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅಂಗಡಿ, ಮುಂಗಟ್ಟು, ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಲಕ್ಷ್ಮೀ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಕುಷ್ಟಗಿ: ದೀಪಾವಳಿ ಹಬ್ಬದ ಸಂಭ್ರಮ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅಂಗಡಿ, ಮುಂಗಟ್ಟು, ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಲಕ್ಷ್ಮೀ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದರೆ, ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಭಕ್ತಿ-ಭಾವದಿಂದ ಲಕ್ಷ್ಮೀ ದೇವಿಯನ್ನು ಆರಾಧಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಜಗಮಗಿಸಿದ ದೀಪಾಲಂಕಾರ: ದೀಪಾವಳಿ ಅಂಗವಾಗಿ ಮನೆ, ಅಂಗಡಿ ಮುಂಗಟ್ಟುಗಳ ಮುಂಭಾಗವನ್ನು ಸ್ವಚ್ಛಗೊಳಿಸಿ, ಬಣ್ಣಬಣ್ಣದ ರಂಗೋಲಿ ಬಿಡಿಸಿ, ತರಹೇವಾರಿ ಹೂವುಗಳಿಂದ ಅಲಂಕರಿಸಲಾಯಿತು.ಮಾವಿನ ತಳಿರುತೋರಣ, ಬಾಳೆಕಂಬ, ತೆಂಗಿನಗರಿ ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಕಟ್ಟಡಗಳು ಕಂಗೊಳಿಸಿದವು. ವಿಶೇಷವಾಗಿ ಲಕ್ಷ್ಮೀಪೂಜೆಗೆ ಸಿದ್ಧಪಡಿಸಿದ ಮಂಟಪಗಳಲ್ಲಿ ದೇವಿಯ ಮೂರ್ತಿ ಹಾಗೂ ಕಳಸ ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ವಾಹನಗಳಿಗೂ ಪೂಜೆ: ಟ್ರ್ಯಾಕ್ಟರ್, ಬೈಕ್, ಎತ್ತಿನ ಚಕ್ಕಡಿ, ಕಾರು, ಆಟೋರಿಕ್ಷಾ ಸೇರಿದಂತೆ ವಿವಿಧ ವಾಹನಗಳನ್ನು ಸ್ವಚ್ಛಗೊಳಿಸಿ, ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಕೃಷಿಕರು ಕೃಷಿ ಉಪಕರಣಗಳನ್ನು, ಕೂಲಿ ಕಾರ್ಮಿಕರು ತಮ್ಮ ಕೆಲಸಕ್ಕೆ ಬಳಸುವ ವಸ್ತುಗಳನ್ನು, ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರದ ಸಾಮಗ್ರಿ ಹಾಗೂ ಹಣ, ಚಿನ್ನಾಭರಣ, ಬೆಳ್ಳಿ ನಾಣ್ಯಗಳನ್ನು ದೇವಿಯ ಮುಂದಿಟ್ಟು ಪೂಜಿಸಿದರು. ಮನೆಯಲ್ಲಿ ಸಿದ್ಧಪಡಿಸಿದ ವಿಶೇಷ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಿದರು. ಪೂಜೆಗೆ ಆಹ್ವಾನಿಸಿದ್ದ ಮುತ್ತೈದೆಯರಿಗೆ ಅರಿಶಿಣ-ಕುಂಕುಮ ನೀಡಿ ಉಡಿತುಂಬಿ ಗೌರವಿಸಿದರು.ಪಾಂಡವರ ಆರಾಧನೆ: ದೀಪಾವಳಿ ಪಾಡ್ಯದಂದು ಆಕಳ ಸಗಣಿಯಿಂದ ಪಾಂಡವರ ಮೂರ್ತಿಗಳನ್ನು ತಯಾರಿಸಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವೂ ತಾಲೂಕಿನಾದ್ಯಂತ ಕಂಡುಬಂತು. ಪಾಂಡವರ ಮೂರ್ತಿಗಳಿಗೆ ಉತ್ರಾಣಿ ಕಡ್ಡಿ, ಹೊನ್ನಂಬರಗಿ ಹೂ, ಅಣ್ಣಿ ಹೂ ಸೇರಿದಂತೆ ವಿವಿಧ ಹೂವುಗಳಿಂದ ಅಲಂಕರಿಸಿ ಶ್ರದ್ಧಾಭಕ್ತಿಯಿಂದ ಆರಾಧಿಸಲಾಯಿತು.
ತಾಲೂಕಿನಾದ್ಯಂತ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಮಹಿಳೆಯರು ಹಾಗೂ ಮಕ್ಕಳು ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು. ಮನೆಗಳು, ಅಂಗಡಿಗಳು, ಶೋರೂಂಗಳು ಹಾಗೂ ಕಚೇರಿಗಳಲ್ಲಿ ವಿಶೇಷ ಮಂಟಪಗಳನ್ನು ನಿರ್ಮಿಸಿ ಲಕ್ಷ್ಮೀ ಮೂರ್ತಿ ಮತ್ತು ಕಳಸ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ಮೆರುಗು ತಂದರು.ರಾರಾಜಿಸಿದ ಹಣತೆಗಳು; ಪಟಾಕಿಗಳ ಸದ್ದು!: ಅಂಧಕಾರವನ್ನು ಕಳೆದು ಬೆಳಕಿನ ಹಾದಿ ತೋರಿಸುವ ದೀಪಾವಳಿ ಹಬ್ಬದಂದು ಪ್ರತಿ ಮನೆ-ಮನಗಳಲ್ಲಿ ಜ್ಞಾನದ ಜ್ಯೋತಿ ಪ್ರಜ್ವಲಿಸಲಿ, ಹೊಸ ಆಶಯಗಳು ಹಾಗೂ ಕನಸುಗಳು ಸಾಕಾರಗೊಳ್ಳಲಿ ಎಂದು ಜನರು ದೇವರಲ್ಲಿ ಪ್ರಾರ್ಥಿಸಿದರು. ಮನೆ, ಅಂಗಡಿ ಮುಂಗಟ್ಟುಗಳ ಮುಂದೆ ಪಿಂಗಾಣಿ ಮತ್ತು ಮಣ್ಣಿನ ಹಣತೆಗಳನ್ನು ಸಾಲಾಗಿ ಜೋಡಿಸಿ ದೀಪ ಬೆಳಗಿಸಿದರು. ಬಣ್ಣ ಬಣ್ಣದ ಆಕಾಶಬುಟ್ಟಿಗಳು ಹಾಗೂ ವಿದ್ಯುತ್ ದೀಪಾಲಂಕಾರಗಳು ಪಟ್ಟಣದ ಸೌಂದರ್ಯ ಹೆಚ್ಚಿಸಿದವು. ಯುವಕರು ಹಾಗೂ ಮಕ್ಕಳು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವ ಮೂಲಕ ಬೆಳಕಿನ ಹಬ್ಬಕ್ಕೆ ಮತ್ತಷ್ಟು ಕಳೆ ತಂದರು.