ಸಾರಾಂಶ
ಮಹೇಂದ್ರ ದೇವನೂರು
ಕನ್ನಡಪ್ರಭ ವಾರ್ತೆ ಮೈಸೂರುಬೆಲೆ ಏರಿಕೆಯ ನಡುವೆಯು ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಪಟಾಕಿ ಖರೀದಿ ಜೋರಾಗಿದೆ.
ಪಟಾಕಿ ಖರೀದಿಯಲ್ಲಿ ಹಿರಿಯರು, ಕಿರಿಯರ ಬೇಧವಿಲ್ಲದೆ ಎಲ್ಲರೂ ಪಟಾಕಿ ಖರೀದಿಗೆ ಮುಗಿ ಬಿದ್ದರು.ಮಕ್ಕಳು ತಮ್ಮ ಪೋಷಕರಿಗೆ ದುಂಬಾಲು ಬಿದ್ದು ಪಟಾಕಿ ಖರೀದಿಸಿದರು. ಹೊಸದಾಗಿ ಮದುವೆಯಾದ ಅನೇಕರು ಕುಟುಂಬ ಸಮೇತರಾಗಿ ಆಗಮಿಸಿ ಸಾವಿರಾರು ಮೌಲ್ಯದ ಪಟಾಕಿ ಖರೀದಿಸಿ ಸಂಭ್ರಮಿಸಿದರು.
ನಗರದ ಜೆಕೆ ಮೈದಾನ, ನಂಜುಮಳಿಗೆ, ಇಟ್ಟಿಗೆಗೂಡು, ಸರಸ್ವತಿಪುರಂ, ಪಡುವಾರಹಳ್ಳಿ, ಬಾರಕೊಪ್ಪಲು, ಚಾಮುಂಡಿಪುರಂ, ರಾಮಕೃಷ್ಣನಗರ, ಕುವೆಂಪುನಗರ, ಅಕ್ಷಯಭಂಡಾರ ಸೇರಿದಂತೆ ನಗರದ ವಿವಿಧೆಡೆ ತೆರೆದಿರುವ ಮಳಿಗೆಗಳಲ್ಲಿ ಪಟಾಕಿ ವ್ಯಾಪಾರ ಭರ್ಜರಿಯಾಗಿತ್ತು. ಅಲ್ಲದೆ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ ಬೃಹತ್ಪಟಾಕಿ ಮಳಿಗೆಗಳಿಗೆ ಭೇಟಿ ನೀಡಿದ ಅನೇಕರು ಲಕ್ಷಾಂತರ ರೂ. ಮೌಲ್ಯದ ಪಟಾಕಿ ಖರೀದಿಸಿದರು.ಹೆಚ್ಚು ಶಬ್ದವಾಗದ ಮತ್ತು ಕಡಿಮೆ ವಾಲಿನ್ಯಕರವಾದ ಹಸಿರು ಪಟಾಕಿಗಳೇ ಹೆಚ್ಚು ಪೂರೈಕೆಯಾಗಿದೆ. ಅವುಗಳನ್ನು ಖರೀದಿಸಲು ನಾ ಮುಂದು ತಾ ಮುಂದು ಎಂಬಂತೆ ಗ್ರಾಹಕರು ವ್ಯಾಪಾರ ನಡೆಸಿದರು. ಹಸಿರು ಪಟಾಕಿಗಳು, ಹೂ ಕೂಂದ, ನೆಲ ಚಕ್ರ, ಹತ್ತಾರು ಬಗೆಯ ಪಟಾಕಿಯನ್ನು ಖರೀದಿಸಿದರು.
ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಕಾರ್ಖಾನೆಗಳನ್ನು ಮುಚ್ಚಿಸಿರುವ ಕಾರಣ ಈ ಬಾರಿ ಶೇ. 30ರಷ್ಟು ಮಾತ್ರ ಪಟಾಕಿ ಪೂರೈಕೆಯಾಗಿದೆ. ಜೊತೆಗೆ ಜಿ.ಎಸ್.ಟಿ ಪರಿಣಾಮದಿಂದ ಕಳೆದ ಬಾರಿಗಿಂತ ಈ ಬಾರಿ ಪಟಾಕಿ ಬೆಲೆ ಶೇ. 40ರಷ್ಟು ಹೆಚ್ಚಾಗಿತ್ತು.ಆದರೆ ವರ್ಷದಿಂದ ವರ್ಷಕ್ಕೆ ಪಟಾಕಿ ಹೊಡೆಯುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಕಳೆದ ಎರಡು ದಿನಗಳಿಂದ ವ್ಯಾಪಾರ ಕಡಿಮೆಯಾಗಿದೆ. ಈ ಬಾರಿ ವ್ಯಾಪಾರ ಚೆನ್ನಾಗಿ ಆಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಸೋಮವಾರದಿಂದಲೇ ಪಟಾಕಿ ವ್ಯಾಪಾರ ಆರಂಭವಾದರೂ ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆಯಾಗಿದೆ.
ಪರಿಸರ ಮಾಲಿನ್ಯದ ದೃಷ್ಟಿಯಿಂದ ಹೆಚ್ಚು ಶಬ್ದವಾಗದ ಹಾಗೂ ಹೊಗೆ ರಹಿತವಾದ ಹೊಸ ಬಗೆಯ ಅನೇಕ ಪಟಾಕಿಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಬಿಯರ್ ಚಿಯರ್ ಮಾಡುವ ಮಾದರಿಯ ಪಟಾಕಿ ಮಾರುಕಟ್ಟೆಯಲ್ಲಿ ವಿಶೇಷವಾಗಿ ಕಂಡು ಬಂದಿದೆ. ಟಿನ್ ಬಿಯರ್ ಮಾದರಿಯ ಪಟಾಕಿಯು ಹಚ್ಚಿದ ನಂತರ ಹೂ ಕೂಂದದ ರೀತಿ ಉರಿದು ಚಿಯರ್ ಮಾಡಲಿದೆ ಎಂದು ಮಾಲೀಕರು ತಿಳಿಸಿದರು.ಆಕಾಶದಲ್ಲಿ ದೀಪ ಬೆಳಗುತ್ತಾ ಸ್ವಚ್ಛಂದವಾಗಿ ಹಾರಾಡುವ ವೈವಿಧ್ಯಮಯ ಆಕಾಶಬುಟ್ಟಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಪಟಾಕಿ ಜತೆಗೆ ಬಣ್ಣ ಬಣ್ಣದ ಆಕಾಶ ಬುಟ್ಟಿಗಳ ಖರೀದಿಗೂ ಜನರು ಮುಗಿಬೀಳುತ್ತಿದ್ದಾರೆ. ನಕ್ಷತ್ರ ಮಾದರಿ, ಕಂದೀಲು ಆಕಾರದ ಆಕಾಶ ಬುಟ್ಟಿಗಳು, ಕೋಮಲ್ ಡಿಸೈನ್, ಗುಲಾಬ್ ರಂಗೀಲಾ, ಚಂದ್ರನ ಆಕಾರದ ಆಕಾಶ ಬುಟ್ಟಿಗಳು ಗ್ರಾಹಕರ ಮನಸೆಳೆಯುತ್ತಿದ್ದು, 100 ರೂ. ನಿಂದ 2000 ರೂ. ವರೆಗಿನ ಆಕಾಶ ಬುಟ್ಟಿಗಳು ಮಾರಾಟವಾದವು.
ಹಣತೆ ಖರೀದಿ ಜೋರು:ಹಬ್ಬದ ವೇಳೆ ಮನೆಯ ಆವರಣದಲ್ಲಿ ಹಣತೆಗಳಿಗೆ ಎಳ್ಳೆಣ್ಣೆ ಹಾಕಿ ಸಾಲು ಸಾಲಾಗಿ ಜೋಡಿಸಿ ದೀಪ ಬೆಳಗುವುದು ಸಂಪ್ರದಾಯ. ಸದ್ಯ ಮಾರುಕಟ್ಟೆಯಲ್ಲಿರುವ ಪರಿಸರ ಸ್ನೇಹಿ ಮಣ್ಣಿನ ಹಣತೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಹೆಚ್ಚಿನ ವ್ಯಾಪಾರ ವಹಿವಾಟು ನಡೆಯಿತು. ಅಂತೆಯೇ ಹಣ್ಣು, ಹೂ ಸೇರಿದಂತೆ ಅನೇಕ ಬಗೆಯ ವಸ್ತುಗಳ ಬೆಲೆ ಗಗನಕ್ಕೇರಿತ್ತು.