ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಉತ್ಸವ ಯಶಸ್ವಿ: ಬೆಟ್ಟದ ಕಾರ್ಯದರ್ಶಿಗೆ ಭಕ್ತರ ಪ್ರಶಂಸೆ

| Published : Nov 11 2024, 01:09 AM IST

ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಉತ್ಸವ ಯಶಸ್ವಿ: ಬೆಟ್ಟದ ಕಾರ್ಯದರ್ಶಿಗೆ ಭಕ್ತರ ಪ್ರಶಂಸೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ದೀಪಾವಳಿ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಮಹದೇಶ್ವರರ ಭಕ್ತರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘುಗೆ ಅಭಿನಂದನೆ । ಜಾಲತಾಣದಲ್ಲೂ ಮೆಚ್ಚುಗೆ

ಕನ್ನಡಪ್ರಭ ವಾರ್ತೆ ಹನೂರು

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ದೀಪಾವಳಿ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಮಹದೇಶ್ವರರ ಭಕ್ತರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿಗಳಾಗಿ ಫೆಬ್ರವರಿ 9 ರಂದು ಅಧಿಕಾರ ವಹಿಸಿಕೊಂಡ ಇವರು ಪ್ರಮುಖ 3 ಜಾತ್ರೆಗಳು, ಮಹಾಲಯ ಅಮಾವಾಸ್ಯೆ, ಶ್ರಾವಣ ಮಾಸ ಕುಂಭಾಭಿಷೇಕ, ಮಹಾನವಮಿ ಆಯುಧ ಪೂಜೆ ವಿಜಯದಶಮಿ ಜಾತ್ರಾ ಮಹೋತ್ಸವಗಳನ್ನು ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಶ್ರೀ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ರಂಗಮಂದಿರದಲ್ಲಿ ವಾಸ್ತವ್ಯ ಮಾಡುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೂಲಿಂಗ್ ಬಣ್ಣವನ್ನು ಬಳಿಸಿ ಅನುಕೂಲ ಕಲ್ಪಿಸಿದ್ದಾರೆ. ಶ್ರೀ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಂಡಿದ್ದು ಬೇಸಿಗೆಯ ಸಂದರ್ಭದಲ್ಲಿ ಮಡಿಕೆಯಲ್ಲಿ ತಣ್ಣನೆಯ ಕುಡಿಯುವ ನೀರು ನೀಡಿದ್ದರೂ ಇದೀಗ ಟ್ಯಾಂಕ್ ಗಳ ಮೂಲಕ ಸಮರ್ಪಕ ಕುಡಿಯುವ ನೀರು ಪೂರೈಸುತ್ತಿದ್ದಾರೆ ಎಂದು ಸಾರ್ವಜನಿಕರು ಕಾರ್ಯದರ್ಶಿಗೆ ಅಭಿನಂದಿಸಿದ್ದಾರೆ.

ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವಂತಹ ಬಾಣಂತಿಯರು ಚಿಕ್ಕ ಮಕ್ಕಳಿಗೆ ಹಾಲುಣಿಸಲು ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆ ದೇವಸ್ಥಾನದ ರಾಜಗೋಪುರದ ಸಮೀಪ ಹಾಲುಣಿಸುವ ಕೇಂದ್ರ ತೆರೆದು ಬಾಣಂತಿಯರಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದುವರೆಗೂ ಆಡಳಿತ ನಡೆಸಿದ ಅಧಿಕಾರಿಗಳು ಮಾಡದ ಕೆಲಸವನ್ನು ಇವರು ಮಾಡಿದ್ದಾರೆ. ಭಕ್ತರು ಹಾಗೂ ಪ್ರಜ್ಞಾವಂತ ನಾಗರಿಕರು ಹಾಲುಣಿಸುವ ಕೇಂದ್ರದ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೀಪಾವಳಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ರಾಜಗೋಪುರ ಮುಂಭಾಗ ಪ್ಲಾಸ್ಟಿಕ್ ತ್ಯಾಜ್ಯಗಳು ಹಾಗೂ ಇನ್ನಿತರ ಕಸ ಕಡ್ಡಿಗಳು ಬಿದ್ದಿದ್ದ ಇದನ್ನು ನೋಡಿದ ಕಾರ್ಯದರ್ಶಿಗಳು ಪೌರಕಾರ್ಮಿಕರನ್ನು ಕಾಯದೆ ತಾವೇ ರಾತ್ರಿ 11ರಿಂದ ಮೂರು ಗಂಟೆಯವರೆಗೆ ಕಸ ಗುಡಿಸಿ ಸ್ವಚ್ಛ ಮಾಡಿದ್ದಾರೆ. ಪ್ರತಿಯೊಂದು ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲು ಸಚಿವರು, ಶಾಸಕರ ಜೊತೆ ಪ್ರತಿ ಸಭೆಯಲ್ಲಿ ಚರ್ಚೆ ನಡೆಸಿ ಗಮನ ಸೆಳೆಯುತ್ತಿದ್ದಾರೆ ಎಂದು ಮಹದೇಶ್ವರ ಬೆಟ್ಟದ ಭಕ್ತರು ಹೇಳಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯ ಶರವಣ ಪತ್ರಿಕೆಯೊಂದಿಗೆ ಮಾತನಾಡಿ, ಪ್ರಾಧಿಕಾರದ ಕಾರ್ಯದರ್ಶಿಗಳಾಗಿ ರಘು ರವರು ಶಿಸ್ತು, ದಕ್ಷ, ಸ್ವಚ್ಛತೆಗೆ ಹೆಚ್ಚು ಹೊತ್ತು ನೀಡಿ ಉತ್ತಮ ರೀತಿಯಲ್ಲಿ ಆಡಳಿತ ನಡೆಸಿ ಪ್ರಾಧಿಕಾರದ ಹೆಸರು ಹಾಗೂ ಮಲೆ ಮಹದೇಶ್ವರ ಮಹಿಮೆಯನ್ನು ಉತ್ತುಂಗಕ್ಕೆ ಏರಿಸಲು ಸತತ ಪರಿಶ್ರಮ ಪಡುತ್ತಿದ್ದಾರೆ. ಇವರ ಸೇವಾ ಕಾರ್ಯ ಹೀಗೆ ಮುಂದುವರಿಯಲಿ ಎಂದಿದ್ದಾರೆ.