ಪ್ರಸಿದ್ಧ ಧಾರ್ಮಿಕ ಪುಣ್ಯ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶ್ರೀ ಕ್ಷೇತ್ರ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನ್ನಿಧ್ಯದಲ್ಲಿ ಸರದಿ ಬೇಡಗಂಪಣ ಅರ್ಚಕರಿಂದ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದಿಂದ ನಡೆದವು.

ಕನ್ನಡಪ್ರಭ ವಾರ್ತೆ ಹನೂರು

ಪ್ರಸಿದ್ಧ ಧಾರ್ಮಿಕ ಪುಣ್ಯ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶ್ರೀ ಕ್ಷೇತ್ರ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನ್ನಿಧ್ಯದಲ್ಲಿ ಸರದಿ ಬೇಡಗಂಪಣ ಅರ್ಚಕರಿಂದ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದಿಂದ ನಡೆದವು.

ವಿಶೇಷ ಹೂವಿನ ಅಲಂಕಾರದಿಂದ ಕಂಗೊಳಿಸಿದ ದೇವಾಲಯ:

ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ದೇವಾಲಯದ ಗರ್ಭಗುಡಿ ಸೇರಿದಂತೆ ಪ್ರಾರಂಭದಲ್ಲಿ ವಿವಿಧ ಬಗೆಯ ಫಲ ಪುಷ್ಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಅಲಂಕಾರವನ್ನು ಕಣ್ತುಂಬಿಕೊಂಡರು.

ವಿಶೇಷ ಉತ್ಸವಗಳು:

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಚಿನ್ನದ ತೇರು, ಬೆಳ್ಳಿ ರಥೋತ್ಸವ ಹಾಗೂ ಹುಲಿ ವಾಹನ ಉತ್ಸವ, ಮಾದೇಶ್ವರ ಉತ್ಸವಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆದವು. ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನಿಗೆ ನಿವೇದನೆ ಮಾಡಿಕೊಂಡು ಉರುಳು ಸೇವೆ, ಧೂಪದ ಸೇವೆ ಹಾಗೂ ಪಂಜಿನ ಸೇವೆ ಸಲ್ಲಿಸುವ ಮೂಲಕ ತಮ್ಮ ಹರಕೆ ಕಾಣಿಕೆಗಳನ್ನು ಮಾದೇಶ್ವರನಿಗೆ ಅರ್ಪಿಸಿದರು.

ವಿಶೇಷ ವಿದ್ಯುತ್ ದೀಪ ಅಲಂಕಾರ:

ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಹೊತ್ತ ಭಕ್ತಾದಿಗಳಿಂದ ರಾಜಗೋಪುರ, ದೇವಾಲಯದ ಸುತ್ತಲೂ, ಆಲಂಬಾಡಿ ಬಸವ ಹಾಗೂ ವಿವಿಧೆಡೆ ವಿಶೇಷ ವಿದ್ಯುತ್ ದೀಪ ಅಲಂಕಾರ ಮಾಡಲಾಗಿತ್ತು.

ಆಲಂಬಾಡಿ ಬಸವನಿಗೆ ಪೂಜೆ:

ಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ಹಾಗೂ ರೈತರು ವಿಶೇಷವಾಗಿ ದೇವಾಲಯದ ಹಿಂಭಾಗದ ಮೇಲಂತಸ್ತಿನಲ್ಲಿ ಬರುವ ಆಲಂಬಾಡಿ ಬಸವನಿಗೆ ಎಣ್ಣೆ ಹಾಗೂ ಹಾಲಿನಲ್ಲಿ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು. ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ತಂದು ಬಸವನಿಗೆ ಎರಚುವ ಮೂಲಕ ಇಷ್ಟಾರ್ಥ ಸಿದ್ಧಿಸುವಂತೆ ನಿವೇದನೆ ಮಾಡಿಕೊಂಡರು.

ಪ್ರಯುಕ್ತ ಮಾದಪ್ಪನ ಸನ್ನಿಧಿಗೆ ಬರುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಿರುವ ದಾಸೋಹ ಭವನದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗವನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ್ ಪರಿಶೀಲಿಸಿದರು . .

ಭಕ್ತರ ದಂಡು:

ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆ ಸೇರಿದಂತೆ ತಾಲೂಕಿನಿಂದಲೂ ಮತ್ತು ತಮಿಳುನಾಡಿನಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು. ಭಕ್ತಾದಿಗಳು ಎಲ್ಲಿ ನೋಡಿದರೂ ಭಕ್ತ ಸಮೂಹವೇ ಕಂಡುಬಂದಿತ್ತು. ದೇವಾಲಯದ ಮುಂಭಾಗ ಇಷ್ಟಾರ್ಥ ಸಿದ್ಧಿಸುವಂತೆ ಧೂಪಹಾಕಿ ಜೈಕಾರಗಳನ್ನು ಕೂಗಿ ಉಘೇ ಮಾದಪ್ಪ ಎಂದು ಕೂಗು ಮುಗಿಲು ಮುಟ್ಟುವಂತಿತ್ತು.