ದೀಪಾವಳಿ ಹಬ್ಬದ ಖರೀದಿ ಭರಾಟೆ ಜೋರು

| Published : Oct 21 2025, 01:00 AM IST

ಸಾರಾಂಶ

ಚೆಂಡು ಹೂ,‌ ಕನಕಾಂಬರ, ಮಲ್ಲಿಗೆ, ಟೇಬಲ್ ರಾಜಾ, ಸೇವಂತಿಗೆ ಸೇರಿದಂತೆ ನಾನಾ ಬಗೆಯ ಹೂವುಗಳ ಮಾರಾಟ ಭರದಿಂದ ಸಾಗಿತ್ತು

ಯಲಬುರ್ಗಾ:ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಮನೆ,‌ಮನದಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ. ಸೋಮವಾರ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಕಾಯಿ, ತೋರಣ ಹಾಗೂ ಇನ್ನಿತರ ಪೂಜಾ ಸಾಮಗ್ರಿ ಖರೀದಿಗೆ ಜನರು ಮುಗಿ ಬಿದ್ದಿರುವುದು ಕಂಡು ಬಂದಿತು.

ಪಟ್ಟಣದ ಕನಕದಾನ ವೃತ್ತದಿಂದ ಕನ್ನಡ ಕ್ರಿಯಾ ಸಮಿತಿ (ಪುನೀತ್ ಸರ್ಕಲ್), ಕಿತ್ತೂರು ರಾಣಿ ಚೆನ್ನಮ್ಮ ವೃತ್ತಗಳಲ್ಲಿ ಬೆಳಗ್ಗೆಯಿಂದಲೇ ನಡೆದ ಹಬ್ಬದ ಖರೀದಿ ಭರಾಟೆಯಿಂದ ಮಾರುಕಟ್ಟೆ ರಸ್ತೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಚೆಂಡು ಹೂ,‌ ಕನಕಾಂಬರ, ಮಲ್ಲಿಗೆ, ಟೇಬಲ್ ರಾಜಾ, ಸೇವಂತಿಗೆ ಸೇರಿದಂತೆ ನಾನಾ ಬಗೆಯ ಹೂವುಗಳ ಮಾರಾಟ ಭರದಿಂದ ಸಾಗಿತ್ತು. ಹೂವಿನ ಇಳುವರಿ ಜಾಸ್ತಿ ಇದ್ದರೂ ದರ ಕಡಿಮೆ ಇರುವುದು ಕಂಡು ಬಂದಿತು.ಆಕಾಶ ಬುಟ್ಟಿ ಒಂದಕ್ಕೆ ₹೧೦೦ರಿಂದ ೬೦೦ರ ವರೆಗೆ, ಡಜನ್ ಮಣ್ಣಿನ ಹಣತೆಗೆ ₹೫೦ರಿಂದ ೮೦ ವರೆಗೆ ಖರೀದಿಯಾದವು.

ಹಣ್ಣಿನ ದರ:ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಒಂದು ಕೆಜಿ ಸೇಬು ಹಣ್ಣಿಗೆ ₹೧೫೦, ಬಾಳೆಹಣ್ಣು ₹೪೦, ಸಪೋಟಾ ₹೬೦, ಆರೆಂಜ್ ₹೨೦೦, ಪೇರಲ ₹೬೦, ಮೋಸಂಬಿ ₹ ೧೨೦, ಚಿಕ್ಕು ₹೮೯, ಸೀತಾಫಲ ₹೧೨೯, ದಾಳಿಂಬೆ ₹೨೨೦, ಕಪ್ಪುದ್ರಾಕ್ಷಿ ₹೨೦೦, ಡಜನ್ ಬಾಳೆಹಣ್ಣು ₹೪೦ ಇದೆ. ಚಂಡು ಹೂವಿಗೆ ಕೆಜಿಗೆ ₹೩೦ರಿಂದ ೪೦, ಕುಂಬಳಕಾಯಿ ಒಂದಕ್ಕೆ ₹೫೦, ಕಬ್ಬು ೫ಕ್ಕೆ ₹೫೦, ಬಾಳೆದಂಡು ೨ಕ್ಕೆ ₹ ೫೦ಗೆ ಮಾರಾಟವಾದವು. ಹಬ್ಬದ ಸಡಗರ ಎಲ್ಲರಲ್ಲೂ ಮನೆ ಮಾಡಿದ್ದು, ಕೆಲ ಸಾಮಗ್ರಿಗಳ ದರ ಏರಿಳಿತಗಳು ಗ್ರಾಹಕರ ಮತ್ತು ವ್ಯಾಪಾರಸ್ಥರಿಗೆ ಲಾಭ ನಷ್ಟಗಳು ಸಮನಾಗಿ ಸ್ವೀಕರಿಸುವಂತೆ ಮಾಡಿದವು.

ದೀಪಾವಳಿ ಹಬ್ಬದ ಅಂಗವಾಗಿ ನಾನಾ ಬಗೆಯ ಹಣ್ಣುಗಳ ವ್ಯಾಪಾರ ಉತ್ತಮವಾಗಿದೆ. ಗ್ರಾಹಕರು ಹೆಚ್ವಿನ ಸಂಖ್ಯೆಯಲ್ಲಿ ಆಗಮಿಸಿ ಖರೀದಿಸುತ್ತಿದ್ದಾರೆ ಎಂದು ಹಣ್ಣಿನ ವ್ಯಾಪಾರಿ ಹನುಮಂತ ಬಣಕಾರ ತಿಳಿಸಿದ್ದಾರೆ.

ಸಂಭ್ರಮ,‌ಸಡಗರದಿಂದ ಆಚರಿಸಲಾಗುವ ದೀಪಾವಳಿ ಹಬ್ಬಕ್ಕೆ ಹೂವು, ಹಣ್ಣು, ಕಾಯಿ ಸೇರಿದಂತೆ ವಿವಿಧ ಸಾಮಗ್ರಿ ಖರೀದಿಗೆ ಮಾರುಕಟ್ಟೆಗೆ ಆಗಮಿಸಿದ್ದೇವೆ. ಉತ್ತಮ ದರದಲ್ಲಿ ಸಾಮಗ್ರಿ ಖರೀದಿಸಲಾಗಿದೆ ಎಂದು ಗ್ರಾಹಕರಾದ ಪಾರ್ವತಿ, ಅಂಬಿಕಾ, ಮಂಜುಳಾ, ಜ್ಯೋತಿ ತಿಳಿಸಿದ್ದಾರೆ.

ಸಾರ್ವಜನಿಕರು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪರಿಸರ ಸ್ನೇಹಿ ಪಟಾಕಿ ಸುಡಬೇಕು. ಪರಿಸರಕ್ಕೆ ಹಾನಿಯಾಗದಂತೆ ಹಬ್ಬ ಆಚರಿಸಬೇಕು ಎಂದು ಯಲಬುರ್ಗಾ ಪಪಂ ಮುಖ್ಯಾಧಿಕಾರಿ ನಾಗೇಶ ತಿಳಿಸಿದ್ದಾರೆ.