ಸಾರಾಂಶ
ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದರಾ?. ದರ್ಶನ್‌ರನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರರು ಸಿದ್ಧತೆ ನಡೆಸಿದ್ದರಾ? ಎಂಬ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸ್ಫೋಟಕ ಹೇಳಿಕೆ ಬಾರಿ ಸದ್ದು ಮಾಡುತ್ತಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್, ಚನ್ನಪಟ್ಟಣದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿ ಹಾಕುತ್ತೇವೆ ಎಂದು ಡಿ.ಕೆ.ಸುರೇಶ್ ಹೇಳಿದ್ದರು. ಆದರೆ, ಆ ಅಚ್ಚರಿ ಅಭ್ಯರ್ಥಿ ಇದೀಗ ಜೈಲುಪಾಲಾಗಿದ್ದಾರೆ. ಚುನಾವಣೆಯಲ್ಲಿ ಚಿತ್ರನಟರೊಬ್ಬರು ಕಾಂಗ್ರೆಸ್ ಪರವಾಗಿ ಹೆಚ್ಚು ಪ್ರಚಾರ ಮಾಡಿದ್ದರು. ಅವರನ್ನ ಕಾಂಗ್ರೆಸ್‌ಗೆ ಸೇರಿಸಿಕೊಂಡು ಚುನಾವಣೆಗೆ ನಿಲ್ಲಿಸಲು ಡಿ.ಕೆ.ಸಹೋದರರು ಫ್ಲಾನ್ ಮಾಡಿದ್ದರು. ಆ ವ್ಯಕ್ತಿ ಯಾರು ಅಂತ ನೀವೇ ಊಹೆ ಮಾಡಿಕೊಳ್ಳಿ ಎಂದು ಪರೋಕ್ಷವಾಗಿ ದರ್ಶನ್‌ರನ್ನು ಕಣಕ್ಕಿಳಿಸಲು ಡಿ.ಕೆ.ಸಹೋದರರು ಚಿಂತನೆ ನಡೆಸಿದ್ದರು ಎಂದು ಬಾಂಬ್ ಸಿಡಿಸಿದರು.ಮಾಜಿ ಸಂಸದರು ಕ್ಷೇತ್ರದಿಂದ ಅಚ್ಚರಿ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕೆ ಇಳಿಸಬೇಕು ಎಂದುಕೊಂಡಿದ್ದರೋ ಅವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಹೀಗಾಗಿ ಈಗದು ಸಾಧ್ಯವಿಲ್ಲ. ಈಗ ಬೇರೆ ಅಚ್ಚರಿ ಅಭ್ಯರ್ಥಿಯನ್ನು ಹುಡುಕಬೇಕಿದೆ. ಅವರು ಅಚ್ಚರಿ ಅಭ್ಯರ್ಥಿಯನ್ನೇ ಹಾಕಲಿ ಯಾರನ್ನೇ ಅಭ್ಯರ್ಥಿ ಮಾಡಲಿ ನಮಗೆ ಚುನಾವಣೆ ನಡೆಸುವುದು ಗೊತ್ತಿದೆ ಎಂದು ಟಾಂಗ್ ನೀಡಿದರು.
ದರ್ಶನ್ ಮೇಲೆ ಕೊಲೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದೊಂದು ವಿಚಿತ್ರ ಕೇಸ್ ಅನ್ನಿಸ್ತಿದೆ. ರಾಜಕೀಯಕ್ಕೆ ಬರಬೇಕು ಅಂತ ಆಸೆ ಇತ್ತೇನೋ. ಆದರೆ ಈ ರೀತಿ ಅನಾಹುತ ಆಗೋಗಿದೆ. ನೋಡೋಣ ಎಂದರು.ವರಿಷ್ಠರು ತೀರ್ಮಾನಿಸ್ತಾರೆ:
ಚನ್ನಪಟ್ಟಣ ಉಪಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿ, ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ಬಿಜೆಪಿಗೆ ಅಸ್ತಿತ್ವ ಇದೆ. ಇಲ್ಲಿ ಬಿಜೆಪಿಗೆ ಹೆಚ್ಚು ಬಲ ಇದೆ. ಕನಕಪುರ, ರಾಮನಗರ, ಮಾಗಡಿಯಲ್ಲಿ ಜೆಡಿಎಸ್ ಗೆ ಶಕ್ತಿ ಇದೆ. ಆದರೆ ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡ್ತಾರೆ ನೋಡೋಣ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಟಿಕೆಟ್ ನೀಡುವಂತೆ ಪ್ರಸ್ತಾಪಿಸಿದರು.ವಸ್ತುಸ್ಥಿತಿ ಏನಿದೆ ಅನ್ನೋದನ್ನ ನಾನು ಹೇಳಿದ್ದೇನೆ. ಎರಡೂ ಪಕ್ಷಗಳು ಸೇರಿ ಚುನಾವಣೆ ಎದುರಿಸುತ್ತೇವೆ. ಎನ್‌ಡಿಎ ಅಭ್ಯರ್ಥಿ ಯಾರೇ ಅದರೂ ನಾವು ಕೆಲಸ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಜೊತೆಯಾಗಿ ಕೆಲಸ ಮಾಡಿ ಸಕ್ಸಸ್ ಸಿಕ್ಕಿದೆ. ಹಾಗಾಗಿ ಯಾವುದೇ ಗೊಂದಲ ಇಲ್ಲದೇ ಈ ಚುನಾವಣೆಯಲ್ಲೂ ಒಟ್ಟಾಗಿ ಕೆಲಸ ಮಾಡ್ತೇವೆ.
ಕಾಂಗ್ರೆಸ್‌ನಿಂದ ದ್ವೇಷದ ರಾಜಕಾರಣ:ಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಮೀನು ರಹಿತ ವಾರೆಂಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಅದು ಮುಗಿದುಹೋದ ಕಥೆ. ಆದರೆ, ಯಡಿಯೂರಪ್ಪ ಅವರನ್ನು ಅನವಶ್ಯಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ನೋಡೋಣ ಅವರು ಕಾನೂನು ಹೋರಾಟ ಮಾಡುತ್ತಾರೆ. ಅವರಿಗೆ ಏನು ತೊಂದರೆ ಆಗೋದಿಲ್ಲ ಎಂದುಕೊಳ್ಳುತ್ತೇನೆ ಎಂದರು.
(ಲೀಡ್ ಬಾಕ್ಸ್)ಉಪಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಲಿ: ಜಯಮುತ್ತು
ಚನ್ನಪಟ್ಟಣ: ರಾಜ್ಯದಲ್ಲಿ ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಬಯಸಿದ್ದಾರೆ. ಈ ಕುರಿತು ಪಕ್ಷದ ವರಿಷ್ಠರ ಗಮನ ಸೆಳೆಯಲಾಗುವುದು ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಚ್.ಸಿ.ಜಯಮುತ್ತು ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿರುವುದರಿಂದ ಕೇಂದ್ರದಲ್ಲಿ ಹೆಚ್ಚು ಕಾಲ ಕಳೆಯುವುದು ಅನಿವಾರ್ಯ. ರಾಜ್ಯದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ನಿಖಿಲ್ ಕುಮಾರಸ್ವಾಮಿ ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಪಕ್ಷದ ವರಿಷ್ಠರಿಗೆ ಒತ್ತಡ ಹಾಕುವುದಾಗಿ ತಿಳಿಸಿದರು.
ಎನ್‌ಡಿಎ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಎರಡೂ ಪಕ್ಷದ ವರಿಷ್ಠರು ಕುಳಿತು ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀರ್ಮಾನದಂತೆ ಕೆಲಸ ಮಾಡುತ್ತೇವೆ. ನಾವು ಪಕ್ಷದ ವರಿಷ್ಠರಿಗೆ ಈ ವಿಷಯ ಮನವರಿಕೆ ಮಾಡಿಕೊಟ್ಟು ನಿಖಿಲ್‌ಕುಮಾರಸ್ವಾಮಿ ಅವರನ್ನು ಇಲ್ಲಿಗೆ ಕರೆತರುವ ಪ್ರಯತ್ನ ಮಾಡುತ್ತೇವೆ ಎಂದರು.ಪೊಟೋ೧೪ಸಿಪಿಟಿ೧:
ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಎಂಎಲ್‌ಸಿ ಯೋಗೇಶ್ವರ್ ಮಾತನಾಡಿದರು.