ಕನ್ನಡಪ್ರಭ ವಾರ್ತೆ ಬೆಂಗಳೂರುಮಾಜಿ ಮುಖ್ಯಮಂತ್ರಿಗಳಿಗೆ ಖುದ್ದು ಆಹ್ವಾನ ನೀಡುವುದರಿಂದ ಎಐಸಿಸಿ ನಾಯಕರನ್ನು ವಿಮಾನನಿಲ್ದಾಣದಿಂದ ಲೋಕಭವನಕ್ಕೆ ಕರೆತರುವವರೆಗೆ...ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಉತ್ಸಾಹ, ಸಂಭ್ರಮದಿಂದ ಓಡಾಡಿದರು.ನೊಣವಿನಕೆರೆ ಅಜ್ಜಯ್ಯ ನೀಡಿದ ದಿನ, ಸಮಯದಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ರಾಜ್ಯ ರಾಜಕೀಯದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಮುಖ್ಯಮಂತ್ರಿಯಾಗಿ ತಾವು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಅವರಿಗೆ ತಾವೇ ಖುದ್ದು ಆಹ್ವಾನ ನೀಡಿದರು.ಮೊದಲಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಜತೆಗೂಡಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ತೆರಳಿ ಪ್ರಮಾನವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಿದರು. ನಂತರ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿಯ ಧವಳಗಿರಿ ನಿವಾಸಕ್ಕೆ ಹಾಗೂ ಪದ್ಮನಾಭನಗರದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಲೋಕಭವನಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು. ಈ ವೇಳೆ ಎಚ್.ಡಿ.ದೇವೇಗೌಡ ಅವರ ಕಾಲಿಗೆ ಬಿದ್ದು ಆಶೀರ್ವಾದವನ್ನೂ ಪಡೆದರು.ಸದ ಅಜ್ಜಯ್ಯನ ಧ್ಯಾನದಲ್ಲಿಡಿಕೆಶಿ: ಮನೆಯಲ್ಲಿ ಪೂಜೆ
ಬುಧವಾರ ಇಡೀ ದಿನ ಡಿ.ಕೆ.ಶಿವಕುಮಾರ್ ಅವರು ನೊಣವಿನಕೆರೆ ಅಜ್ಜಯ್ಯರ ಸ್ಮರಣೆಯಲ್ಲಿದ್ದರು. ತಾವು ನಂಬುವ ಆರಾಧ್ಯ ದೈವ ಅಜ್ಜಯ್ಯ ಅವರಿಗೆ ನಾಗರಬಾವಿಯ ಶಾಖಾ ಮಠದಲ್ಲಿ ಮಂಗಳವಾರ ತಡರಾತ್ರಿವರೆಗೆ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು. ಲೋಕಭವನ, ವಿಧಾನಸೌಧ ಮೂರನೇ ಮಹಡಿಯಲ್ಲಿನ ಮುಖ್ಯಮಂತ್ರಿ ಅವರ ಕೊಠಡಿಯಲ್ಲೂ ಅಜ್ಜಯ್ಯ ಅವರ ಫೋಟೋವನ್ನಿಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಬುಧವಾರ ಮುಂಜಾನೆಯಿಂದಲೇ ಸದಾಶಿವನಗರದ ತಮ್ಮ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮನೆಯ ಕಾರಿಡಾರ್ ಮೂಲಕ ತಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಕೈ ಮುಗಿದು ಕೆಲಹೊತ್ತು ಭಾವುಕರಾದರು. ಅದಾದ ನಂತರ ಸೀದಾ ಸಿದ್ದರಾಮಯ್ಯ ಅವರ ಭೇಟಿಗೆ ತೆರಳಿದರು.ಎಐಸಿಸಿ ನಾಯಕರನ್ನುಬರಮಾಡಿಕೊಂಡ ಸಿಎಂಡಿ.ಕೆ.ಶಿವಕುಮಾರ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬೆಂಗಳೂರಿನ ಎಚ್‌ಎಎಲ್ ವಿಮಾನನಿಲ್ದಾಣಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿ ಇನ್ನಿತರ ನಾಯಕರನ್ನು ಖುದ್ದು ಡಿ.ಕೆ. ಶಿವಕುಮಾರ್ ಬರಮಾಡಿಕೊಂಡರು. ಅದಾದ ನಂತರ ಸೀದಾ ಲೋಕಭವನಕ್ಕಾಗಮಿಸಿದರು.ಸಿಎಂಗೆ ಸೋನಿಯಾ ಶುಭ ಹಾರೈಕೆಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ದೂರವಾಣಿ ಕರೆ ಮಾಡಿ ಶುಭ ಹಾರೈಸಿದರು. ಸೋನಿಯಾ ಗಾಂಧಿ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ದೂರವಾಣಿ ಕರೆ ಮಾಡಿ ಶುಭ ಕೋರಿದರು. ಜತೆಗೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಿರಿ. ಕರ್ನಾಟಕವನ್ನು ಯಶಸ್ವಿಯಾಗಿ ಮುನ್ನಡೆಸುತ್ತೀರಿ ಎಂಬ ಅದಮ್ಯ ವಿಶ್ವಾಸ ನನಗಿದೆ. ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ. ಮತ್ತಷ್ಟು ಯಶಸ್ಸು ನಿಮ್ಮದಾಗಲಿ ಎಂದು ಹೇಳಿದರು.ಹೈಕಮಾಂಡ್ ಮೇಲಿದೆ ಭರವಸೆನೂತನ ಸಚಿವ ಸಂಪುಟಕ್ಕೆ ಒಟ್ಟು 14 ಜನಕ್ಕೆ ಮೊದಲ ಹಂತದಲ್ಲಿ ಹೈ ಕಮಾಂಡ್ ಅವಕಾಶ ಮಾಡಿಕೊಟ್ಟಿದೆ. ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನೂ ಅವಕಾಶ ಸಿಗುತ್ತೆ. ಮುಸ್ಲಿಂ ಸಮುದಾಯಕ್ಕೆ ಮಂತ್ರಿ ಸ್ಥಾನ ನೀಡುವ ಕುರಿತು ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತದೆ, ಅದಕ್ಕೆ ನಾವು ಬದ್ಧರಾಗಿದ್ದೇವೆ. ಮುಂದೆ ಇನ್ನೊಂದು ಪಟ್ಟಿ ಬರುವುದು ಬಾಕಿ ಇದ್ದು, ನನಗೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಭರವಸೆ ಇದೆ.-ಸಲೀಂ ಅಹ್ಮದ್, ಆಡಳಿತ ಪಕ್ಷದ ಮುಖ್ಯ ಸಚೇತಕ, ವಿಧಾನ ಪರಿಷತ್ತುಚಿತ್ರರಂಗಕ್ಕೆ ಡಿಕೆ ಭರವಸೆನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಚಲನಚಿತ್ರರಂಗದ ಬಗ್ಗೆ ಸಾಕಷ್ಟು ಗೊತ್ತಿದೆ. ಅವರಿಂದ ಚಿತ್ರರಂಗಕ್ಕೆ ಒಳ್ಳೆಯದು ಆಗಲಿದೆ ಎಂಬ ಭರವಸೆ ಇದೆ. ರೈತರು, ಶಿಕ್ಷಣ, ಆರೋಗ್ಯದ ಬಗ್ಗೆಯೂ ರಾಜಕಾರಣಿಗಳು ನೋಡಿಕೊಳ್ಳಬೇಕು. ಬಡಮಕ್ಕಳಿಗೆ ಶಿಕ್ಷಣ ನೀಡುವ ಕಡೆಗೆ ಸರ್ಕಾರ ಹೆಚ್ಚು ಗಮನ ಕೊಡಬೇಕು.-ಶಿವರಾಜ್‌ಕುಮಾರ್, ಹಿರಿಯ ನಟ,ರಾಜ್ಯಕ್ಕೆ ಹೆಚ್ಚು ಅನುಕೂಲನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇರುವ ಸಾಮರ್ಥ್ಯದಿಂದ ರಾಜ್ಯಕ್ಕೆ ಹೆಚ್ಚು ಅನುಕೂಲವಾಗಲಿದೆ.-ರಮ್ಯಾ, ಚಿತ್ರನಟಿ, ಮಾಜಿ ಸಂಸದೆ.ಡಿಕೆಶಿಯಿಂದ ಉತ್ತಮ ಕೆಲಸನಾನು ವಯಸ್ಸಿನಲ್ಲಿ ಅವರಿಗಿಂತ ದೊಡ್ಡವಳು. ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಒಳ್ಳೆಯ ಕೆಲಸ ಮಾಡಿದ್ದಾರೆ. ಈಗಲೂ ಒಳ್ಳೆಯದು ಮಾಡುತ್ತಾರೆ. ಚಿತ್ರರಂಗದ ಏಳಿಗೆ ಬಗ್ಗೆ ನಮಗಿಂತ ಅವರಿಗೆ ಚೆನ್ನಾಗಿ ಗೊತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗಳನ್ನು ಹಿಡಿದುಕೊಂಡು ಅವರಲ್ಲಿಗೆ ಹೋಗುತ್ತೇವೆ. ಅವರು ಉದ್ಯಮವನ್ನು ಬೆಳೆಸುತ್ತಾರೆ ಎಂಬ ನಂಬಿಕೆ ಇದೆ. ಅವರಿಗೆ ಶುಭವಾಗಲಿ.-ಜಯಮಾಲಾ, ಅಧ್ಯಕ್ಷೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಸಂಪುಟ ಸರ್ವಜನಾಂಗದಶಾಂತಿಯ ತೋಟ: ಡಿಕೆಶಿ ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿಯಾದ ನನ್ನನ್ನೂ ಒಳಗೊಂಡು ಮೊದಲ ಹಂತದ 14 ಜನರ ಸಚಿವ ಸಂಪುಟ ಕುವೆಂಪು ಅವರು ಹೇಳಿರುವ ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಸಾಕಷ್ಟು ಅನುಭವಿಗಳು, ಹಿರಿಯರೇ ಸಂಪುಟದಲ್ಲಿದ್ದಾರೆ. ಎಲ್ಲರ ಸಹಕಾರ, ಸಲಹೆ, ಅಭಿಪ್ರಾಯಗಳೊಂದಿಗೆ ಉತ್ತಮ ಆಡಳಿತ ಮತ್ತು ಬಲಿಷ್ಠ ನಾಯಕತ್ವ ನೀಡುವ ಕೆಲಸ ಮಾಡುತ್ತೇನೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಯಕ್ತಿಕವಾಗಿ ಜಾತಿ, ಧರ್ಮದ ವಿಚಾರಗಳು ಏನೇ ಇದ್ದರೂ, ಮಾನವೀಯತೆಯಲ್ಲಿ ಅಪಾರ ನಂಬಿಕೆಯುಳ್ಳವನು ನಾನು. ನಾಡಿನ ಅಭಿವೃದ್ಧಿ, ಜನರ ಕಲ್ಯಾಣಕ್ಕಾಗಿ ನನ್ನ ಎಲ್ಲ ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಅಧಿಕಾರ ನಡೆಸುತ್ತೇನೆ. ಇದಕ್ಕೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.
ತಪ್ಪು ಮಾಡಿದರೆ ಮಾಧ್ಯಮಗಳು ಎತ್ತಿ ಹಿಡಿಯಲಿ:
ನಮ್ಮ ಸರ್ಕಾರದಿಂದ ಯಾವುದೇ ತಪ್ಪುಗಳಾದರೆ ಪತ್ರಿಕೆಗಳು, ಮಾಧ್ಯಮಗಳು ಅದನ್ನು ತಮ್ಮ ಬರವಣಿಗೆ, ವರದಿ, ಸುದ್ದಿ ಪ್ರಸಾರದ ಮೂಲಕ ಎತ್ತಿ ಹಿಡಿಯಿರಿ. ನಾವು ತಪ್ಪು ತಿದ್ದಿಕೊಂಡು ಸರಿದಾರಿಯಲ್ಲಿ ನಡೆಯಲು ಅದು ಸಹಕಾರಿಯಾಗಲಿದೆ. ಆದರೆ, ತಮ್ಮ ವೃತ್ತಿಧರ್ಮ, ಆತ್ಮಸಾಕ್ಷಿಗೆ ವಿರುದ್ಧವಾಗಿ ಅನಗತ್ಯ ಟೀಕೆ, ಸುದ್ದಿಗಳನ್ನು ಮಾಡಬೇಡಿ ಎಂದು ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಧ್ಯಮದವರಿಗೆ ಮನವಿ ಮಾಡಿದರು.
ಜನರು ಪತ್ರಿಕೆ, ಮಾಧ್ಯಮಗಳನ್ನು ನಂಬುತ್ತಾರೆ. ನಿಮ್ಮ ಯಾವುದೇ ಸುದ್ದಿ, ವರದಿಗಳನ್ನು ಸರ್ಕಾರ, ಮುಖ್ಯಮಂತ್ರಿಯ ವಿಶ್ವಾಸಕ್ಕೆ ಮಾಡಬೇಡಿ. ಜನರ ವಿಶ್ವಾಸಗಳಿಸಿ, ಆತ್ಮವಿಶ್ವಾಸಕ್ಕೆ ವಿರುದ್ಧವಾಗಿ ಯಾವುದೂ ಮಾಡಬೇಡಿ ಎಂದರು.ಕೆಲಸ ಮಾಡದಿದ್ದರೆ ಸುಮ್ಮನೆ ಬಿಡುವುದಿಲ್ಲ: ಡಿಕೆಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಕ್ಷ ನನ್ನನ್ನು ಮುಖ್ಯಮಂತ್ರಿಯನ್ನಾಗಿಸಿದೆ. ಇದು ಜನರ ಸರ್ಕಾರ. ಸಚಿವರು ಕೆಲಸ ಮಾಡದಿದ್ದರೆ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಹರಿಪ್ರಸಾದ್‌ಗೆ ಅಭಿನಂದನೆಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ಕೆ.ಹರಿಪ್ರಸಾದ್ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿನಂದನೆ ಸಲ್ಲಿಸಿದರು. ಬಿ.ಕೆ.ಹರಿಪ್ರಸಾದ್ ಕೂಡ ನನ್ನಂತೆಯೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದವರು. ರಾಜ್ಯ ಸಭೆ ಸದಸ್ಯರಾಗಿ, ವಿಧಾನಪರಿಷತ್ ಸದಸ್ಯರಾಗಿದ್ದಾರೆ. 30 ವರ್ಷಕ್ಕೂ ಹೆಚ್ಚಿನ ಕಾಲ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಪಕ್ಷದ ಅಧ್ಯಕ್ಷರನ್ನಾಗಿ ಹೈಕಮಾಂಡ್ ನಾಯಕರು ಮಾಡಿದ್ದಾರೆ. ಇದು ಸಂತಸದ ವಿಚಾರ ಎಂದರು.4.15ಕ್ಕೆ ಶುಭ ಗಳಿಗೆ ಬಂತು:ನಾನು ಮೊದಲಿನಿಂದಲೂ ಹೇಳುತ್ತಿದ್ದೆ. ಶುಭಗಳಿಗೆ, ಶುಭ ಮುಹೂರ್ತ ಬರುತ್ತದೆ ಅಲ್ಲಿಯವರೆಗೆ ಕಾಯಿರಿ ಅಂತ ಹೇಳುತ್ತಿದ್ದೆ. ಆ ಶುಭಗಳಿಗೆ ಬುಧವಾರ ಸಂಜೆ 4.15 ನಿಮಿಷಕ್ಕೆ ಬಂತು. ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಇದಕ್ಕೆ ಇಡೀ ರಾಜ್ಯದ ಜನ ಸಾಕ್ಷಿಯಾಗಿದ್ದಾರೆ. ಹಿಂದಿನ ಹೆಜ್ಜೆ ಮರೆತವನು ಮುಂದಿನ ಹೆಜ್ಜೆ ಇಡಲಾರ ಎನ್ನುವುದು ನನ್ನ ನಂಬಿಕೆ. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯ ಅಭಿವೃದ್ಧಿಗೆ, ಜನರ ಕಲ್ಯಾಣಕ್ಕೆ ಹೊಸ ಕೆಲಸ, ಹೊಸ ಅವಕಾಶಗಳನ್ನು ಹುಡುಕಿ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.
