ಗೌಡರ ಕುಟುಂಬಕ್ಕೆ ಬೆಂಗಳೂರು ಸನಿಹ 1000 ಎಕ್ರೆ ಜಮೀನು

| Published : Apr 16 2024, 02:01 AM IST / Updated: Apr 16 2024, 06:53 AM IST

DK Shivakumar

ಸಾರಾಂಶ

ಡಿ.ಕೆ.ಶಿವಕುಮಾರ್‌ ಆರೋಪ ಮಾಡುತ್ತಾ ದೇವೇಗೌಡರ ಕುಟುಂಬಕ್ಕೆ ಬೆಂಗಳೂರು ಸಮೀಪ 1000 ಎಕರೆ ಜಮೀನು ನೀಡಲಾಗಿದೆ ಎಂದಿದ್ದಾರೆ.

 ಬೆಳಗಾವಿ : ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬದ ಬಳಿ ಬೆಂಗಳೂರು ಸುತ್ತಮುತ್ತ ಒಂದು ಸಾವಿರ ಎಕರೆ ಆಸ್ತಿ ಇದೆ ಎಂದು ಆರೋಪಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಈ ಕುರಿತು ವಿಧಾನಸಭೆಯಲ್ಲೇ ಚರ್ಚೆಗೆ ಸಿದ್ಧ. ಕುಮಾರಸ್ವಾಮಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.

ಮೈಸೂರಲ್ಲಿ ಭಾನುವಾರ ನಡೆದ ಒಕ್ಕಲಿಗರ ಸಮುದಾಯದ ಸಭೆ ಹಾಗೂ ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಆಸ್ತಿ ವಿಚಾರವಾಗಿ ತೀವ್ರ ಆಕ್ರೋಶ ಹೊರಹಾಕಿದರು.

‘ಎಷ್ಟೋ ದುಡ್ಡು ಹೊಡೆದಿದ್ದಾರೆ, ತಿಂದವರು ಅನುಭವಿಸುತ್ತಾರೆ ಎಂದೆಲ್ಲ ನಾನು ಜೈಲಿಗೆ ಹೋದಾಗ ಹೇಳಿದ್ದರು. ನಾನು ಎಲ್ಲವನ್ನೂ ತಡೆದುಕೊಂಡು ಸುಮ್ಮನಿದ್ದೇನೆ. ಅವರೇನು ಕಳ್ಳೇಕಾಯಿ, ಆಲೂಗಡ್ಡೆ ಬೆಳೆದಿದ್ರಾ? ಅವರ ಕುಟುಂಬದ ಆಸ್ತಿ ಎಷ್ಟಿದೆ ಎಂದು ಲೆಕ್ಕ ಕೊಡ್ಲಾ? ಬೆಂಗಳೂರು ಸುತ್ತಮುತ್ತನೇ ಒಂದು ಸಾವಿರ ಎಕರೆ ಆಸ್ತಿ ಇದೆ. ನಾವು ಗಾಜಿನ ಮನೆಯಲ್ಲಿದ್ದು ಬೇರೆಯವರ ಬಗ್ಗೆ ಮಾತನಾಡಬಾರದು’ ಎಂದು ಹೇಳಿದರು.

ನನ್ನ ಆಸ್ತಿ ಬಗ್ಗೆ ಮಾತನಾಡ್ತೀಯಾ?:

‘ನನ್ನ ಆಸ್ತಿ ಬಗ್ಗೆ ಮಾತನಾಡುತ್ತೀಯಾ? ನಿಂದೆಷ್ಟಿತ್ತು? ನಿಮ್ಮ ಅಣ್ಣಂದು ಎಷ್ಟಿತ್ತು? ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ ಎಂಬುದರ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಬಾ. 48 ಎಕ್ರೆ ಇದೆಯೋ, ಒಂದು ಸಾವಿರ ಇದೆಯೋ ಚರ್ಚೆ ಮಾಡೋಣ ಬಾರಯ್ಯ ಎಂದು ವಿಧಾನಸಭೆಯಲ್ಲೇ ಕರೆದೆ‌. ಆದರೆ, ಬರಲಿಲ್ಲ ಹೋಗಿ ಬಿಟ್ಟ ಆಸಾಮಿ’ ಎಂದು ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ಕಿಡಿಕಾರಿದರು.

''''ಮಿಸ್ಟರ್‌ ಕುಮಾರಸ್ವಾಮಿ, ನೀನು ಹೆದರಿ ಪಕ್ಕದ ಜಿಲ್ಲೆಗೆ ಹೋದವನು. ನೀನು ಮೋಸಗಾರ, ಸುಳ್ಳುಗಾರ. ನಾನು ಕಲ್ಲು ಲೂಟಿ ಮಾಡಿದೆನೋ, ಮೋಸ ಮಾಡಿದೆನೋ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬಾ. ನೀನು ಎಂತಹ ಸುಳ್ಳುಗಾರ ಎಂಬುದು ಗೊತ್ತಾಗಲಿದೆ'''' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲೋ ಕೂತು ಎದೆಗಾರಿಕೆ ಪ್ರದರ್ಶಿಸೋದು ಬೇಡ. ಹಿಂದೆ ಹೇಳಿದಂತೆ ಈಗಲೂ ಎನ್‌ಡಿಎ ಪಾರ್ಟ್‌ನರ್‌ಗೆ ಸವಾಲು ಹಾಕುತ್ತೇನೆ. ಬೇಕಿದ್ದರೆ ನಮ್ಮಿಬ್ಬರ ನಡುವೆ ಒಂದು ಚರ್ಚೆ ನಡೆಯಲಿ. ವಿಧಾನಸಭೆಯಲ್ಲೇ ಈ ಚರ್ಚೆ ಮಾಡುವಂತೆ ಹೇಳಿದ್ದೆ. ಆದರೆ, ಅವರು ಬರಲಿಲ್ಲ. ಈಗಲೂ ಅದೇ ಸವಾಲು ನವೀಕರಿಸುತ್ತೇನೆ. ವಿಧಾನಸಭೆಯಲ್ಲಿ ಚರ್ಚೆ ನಡೆದರೆ ಉತ್ತಮ. ಇಲ್ಲವೇ ಮಾಧ್ಯಮದವರು ಆಯೋಜಿಸಿದರೂ ಸರಿ. ಈ ವಿಚಾರದಲ್ಲಿ ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಕುಟುಕಿದರು.