ಸಾರಾಂಶ
ಬೆಂಗಳೂರು : ಪ್ರವಾಸಿಗರ ಆಕರ್ಷಣೆಗಾಗಿ ಬೆಂಗಳೂರಿನಲ್ಲಿ ಸ್ಕೈ ಡೆಕ್ ನಿರ್ಮಾಣ ಮಾಡಲು ಉದ್ದೇಶಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಮೆರಿಕ ಪ್ರವಾಸದ ವೇಳೆ ನ್ಯೂಯಾರ್ಕ್ ನಗರದ ಹಡ್ಸನ್ ಯಾರ್ಡ್ಸ್ ನ ‘ಎಡ್ಜ್’ ಸ್ಕೈ ಡೆಕ್‌ಗೆ ಭೇಟಿ ಮಾಡಿ ವೀಕ್ಷಣೆ ಮಾಡಿದರು.
ಪತ್ನಿ ಉಷಾ ಅವರ ಜತೆ ಸ್ಕೈ ಡೆಕ್ ವೀಕ್ಷಿಸಿದ ಶಿವಕುಮಾರ್ ಅವರು, ಅದರ ವಾಸ್ತುಶಿಲ್ಪ, ವಿನ್ಯಾಸ ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ಪಡೆದರು ಎಂದು ತಿಳಿದುಬಂದಿದೆ.
ಇದೇ ವೇಳೆ ಬೆಂಗಳೂರಿನ ಸ್ಕೈ ಡೆಕ್ ನಿರ್ಮಾಣ ವಿಚಾರವಾಗಿ ಶಿವಕುಮಾರ್ ಅವರು ಖ್ಯಾತ ವಾಸ್ತುಶಿಲ್ಪ ವಿನ್ಯಾಸಗಾರ ಡಾ. ಬಾಬು ಕೀಲಾರ ಅವರೊಂದಿಗೆ ಚರ್ಚಿಸಿದರು. ಈ ಪ್ರವಾಸದಲ್ಲಿ ಶಿವಕುಮಾರ್ ಅವರು ಕೀಲಾರ ಅವರ ಜತೆಗೂಡಿ ಹಡ್ಸನ್ ಯಾರ್ಡ್ ಸೇರಿದಂತೆ ಹಲವು ಸ್ಕೈ ಡೆಕ್ ಗಗನಚುಂಬಿ ಕಟ್ಟಡಗಳ ವೀಕ್ಷಣೆ ನಡೆಸಿದರು.
ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಕಟ್ಟಡ, ಚೀನಾದ ಶಾಂಘೈ ಟವರ್, ದುಬೈನ ಬುರ್ಜ್ ಖಲೀಫಾದ ವಿನ್ಯಾಸ ಮಾಡಿರುವ ಎಚ್ಓಕೆಯ ವಾಸ್ತುಶಿಲ್ಪ ವಿನ್ಯಾಸಗಾರ ಕೆನ್ನೆತ್ ಡ್ರಕರ್ ಅವರ ಜತೆಗೂ ಚರ್ಚೆ ನಡೆಸಿದರು ಎಂದು ಉಪಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.