ಡಬಲ್‌ ಡೆಕ್ಕರ್‌ ಪ್ರಾಯೋಗಿಕ ಸಂಚಾರಕ್ಕೆ ಡಿಕೆಶಿ ಚಾಲನೆ

| Published : Jul 18 2024, 01:34 AM IST

ಸಾರಾಂಶ

‘ರಾಗಿಗುಡ್ಡ ಮೆಟ್ರೋ ನಿಲ್ದಾಣ - ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಡಬಲ್‌ ಡೆಕ್ಕರ್‌ ಪ್ರಾಯೋಗಿಕ ವಾಹನ ಸಂಚಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದಕ್ಷಿಣ ಭಾರತದ ಪ್ರಥಮ ಮೆಟ್ರೋ ಕಂ ಎಲಿವೆಟೆಡ್‌ ರಸ್ತೆಯಾದ ‘ರಾಗಿಗುಡ್ಡ ಮೆಟ್ರೋ ನಿಲ್ದಾಣ - ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಡಬಲ್‌ ಡೆಕ್ಕರ್‌ ಪ್ರಾಯೋಗಿಕ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ವಾಹನ ಸಂಚಾರಕ್ಕೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌,‘ ಮುಂದಿನ ದಿನಗಳಲ್ಲಿ ಹೊಸ ಮೆಟ್ರೊ ಮಾರ್ಗಗಳನ್ನು ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದು’ ಎಂದು ಘೋಷಿಸಿದರು.

ಚಾಲನೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಮುಂಬರುವ ಎಲ್ಲ ಮೆಟ್ರೋ ಮಾರ್ಗದಲ್ಲಿ ಡಬಲ್‌ ಡೆಕ್ಕರ್‌ ಮಾದರಿ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. ಈ ಯೋಜನೆ ಹೆಚ್ಚು ವೆಚ್ಚದಾಯಕ ಆಗಿದ್ದರೂ ಭವಿಷ್ಯದಲ್ಲಿ ಸಂಚಾರ ನಿಯಂತ್ರಣ ದೃಷ್ಟಿಯಿಂದ ಹೆಚ್ಚು ಅನುಕೂಲಕರ ಆಗಲಿದೆ. ಪ್ರತ್ಯೇಕ ಭೂಸ್ವಾಧೀನ, ಪರಿಹಾರ ನೀಡುವುದು ತಪ್ಪಲಿದೆ. ಹೀಗಾಗಿ ನಾಗಪುರಕ್ಕೆ ಹೋಗಿ ಡಬಲ್‌ ಡೆಕ್ಕರ್‌ ಯೋಜನೆ ಅಧ್ಯಯನ ಮಾಡಿಸಿ ವರದಿ ಪಡೆಯಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮಗಳ ಆರ್ಥಿಕ ಪಾಲುದಾರಿಕೆಯಲ್ಲಿ ಮುಂದಿನ ಡಬಲ್‌ ಡೆಕ್ಕರ್‌ಗಳು ನಿರ್ಮಾಣ ಆಗಲಿದೆ ಎಂದು ಹೇಳಿದರು.

ಡಬಲ್‌ ಡೆಕ್ಕರ್‌ ರಸ್ತೆಯಲ್ಲಿ ಪ್ರಾಯೋಗಿಕ ಜನಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದೇವೆ. ಇದು ಬೆಂಗಳೂರಿನ ಐತಿಹಾಸಿಕ ದಿನ. ₹ 450ಕೋಟಿ ವೆಚ್ಚದಲ್ಲಿ ವಿಶ್ವ ದರ್ಜೆಯ ಡಬಲ್ ಡೆಕ್ಕರ್‌ ನಿರ್ಮಾಣವಾಗಿದೆ. ಜನರಿಂದ ಫ್ಲೈಓವರ್‌ನಲ್ಲಿ ಆಗಬೇಕಾದ ಬದಲಾವಣೆ ಹಾಗೂ ಲೋಪ ದೋಷಗಳನ್ನು ತಿಳಿದುಕೊಂಡು ಸರಿಪಡಿಸಲಾಗುವುದು ಎಂದರು.

ಎಲ್ಲ ಬಗೆಯ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಎಲಿವೆಟೆಡ್‌ ಮೆಟ್ರೋ ರಸ್ತೆಯಲ್ಲಿ ಸಿಗ್ನಲ್‌ ಫ್ರೀ ಸಂಚಾರ ಇರಲಿದ್ದು, ಹೆಚ್ಚಿನ ಪ್ರಯಾಣ ಸಮಯ ಉಳಿತಾಯ ಆಗಲಿದೆ. ರ್ಯಾಂಪ್‌ ಸೇರಿ ಇನ್ನಿತರ ಬಾಕಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಆರ್‌.ವಿ.ರಸ್ತೆ- ಬೊಮ್ಮಸಂದ್ರದ 19.15ಕಿಮೀ ಕಿಮೀ ರಸ್ತೆಯಲ್ಲಿ 3.36ಕಿಮೀ ಎಲಿವೆಟೆಡ್‌ ಮೆಟ್ರೋ ರಸ್ತೆ ರೂಪಿಸಲಾಗಿದೆ. ಮೆಟ್ರೋ 2ನೇ ಹಂತದ ಈ ಯೋಜನೆಗೆ ಸುಮಾರು 5745 ಕೋಟಿ ರು. ವೆಚ್ಚವಾಗಿದೆ. ಸಿವಿಲ್‌ ಮತ್ತು ಸಿಸ್ಟಮ್‌ ಕಾಮಗಾರಿ ಮುಗಿದಿದ್ದು, ಆರಂಭದಲ್ಲಿ 15 ನಿಮಿಷಗಳ ಅಂತರದಲ್ಲಿ ಕನಿಷ್ಠ 8 ರೈಲುಗಳ ಮೂಲಕ ವರ್ಷಾಂತ್ಯಕ್ಕೆ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದೇ ಮಾರ್ಗದ ಜಯದೇವ ಮೆಟ್ರೋ ನಿಲ್ದಾಣ ಐಕಾನಿಕ್‌ ಇಂಟರ್‌ಚೇಂಜ್‌ ನಿಲ್ದಾಣವಾಗಿದ್ದು, ರೋಡ್‌ ಅಂಡರ್‌ಪಾಸ್‌, ರಸ್ತೆ, ರೋಡ್‌ ಫ್ಲೈಓವರ್‌, ಹಳದಿ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌, ಕಾನ್‌ಕಾರ್ಸ್‌ ಮತ್ತು ಗುಲಾಬಿ ಮಾರ್ಗದ ಪ್ಲಾಟ್‌ಫಾರ್ಮ್‌ ಹೊಂದಿರಲಿದೆ ಎಂದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್‌ ರಾವ್, ಬಿಬಿಎಂಪಿ ಆಡಳಿತಧಿಕಾರಿ ಉಮಾಶಂಕರ್, ಬಿಎಂಆರ್‌ಡಿಎ ಆಯುಕ್ತ, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಇದ್ದರು.

ನೂರು ಕಿಮೀ ಸಿಗ್ನಲ್‌ ಫ್ರೀ ಕಾರಿಡಾರ್:

ನಗರದಲ್ಲಿ ನೂರು ಕಿಮೀ ಹೊಸ ಸಿಗ್ನಲ್‌ ಫ್ರೀ ಕಾರಿಡಾರ್‌ ಮಾಡಬೇಕು ಎಂದು ಯೋಜಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು, ಸಾರಿಗೆ ಸಚಿವರ ಜೊತೆಗೆ ಚರ್ಚಿಸಿದ್ದೇವೆ. ಈ ಬಗ್ಗೆ ಯೋಚಿಸಲಾಗುವುದು ಎಂದರು.

ಮೆಟ್ರೋ ಕಂ ಎಲಿವೆಟೆಡ್‌ ರಸ್ತೆ

ಆರ್‌.ವಿ.ರಸ್ತೆ- ಬೊಮ್ಮಸಂದ್ರದ 19.15ಕಿಮೀ ಕಿಮೀ ರಸ್ತೆಯಲ್ಲಿ 3.36ಕಿಮೀ ಮೆಟ್ರೋ ಕಂ ಎಲಿವೆಟೆಡ್‌ ರಸ್ತೆ ರೂಪಿಸಲಾಗಿದೆ. ಮೆಟ್ರೋ 2ನೇ ಹಂತದ ಈ ಯೋಜನೆಗೆ ಸುಮಾರು ₹ 5745 ಕೋಟಿ ವೆಚ್ಚವಾಗಿದೆ. ಸಿವಿಲ್‌ ಮತ್ತು ಸಿಸ್ಟಮ್‌ ಕಾಮಗಾರಿ ಮುಗಿದಿದ್ದು, ಆರಂಭದಲ್ಲಿ 15 ನಿಮಿಷಗಳ ಅಂತರದಲ್ಲಿ ಕನಿಷ್ಠ 8 ರೈಲುಗಳ ಮೂಲಕ ವರ್ಷಾಂತ್ಯಕ್ಕೆ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಡಿಸಿಎಂನಿಂದ ಫಸ್ಟ್‌ ರೈಡ್‌

ಬಳಿಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು 3.36ಕಿಮೀ ಡಬಲ್‌ ಡೆಕ್ಕರ್‌ನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಶಾಸಕರಾದ ಸತೀಶ್ ರೆಡ್ಡಿ, ಸಿ.ಕೆ. ರಾಮಮೂರ್ತಿ ಅವರನ್ನು ಕೂರಿಸಿಕೊಂಡು ಸ್ವತಃ ಕಾರು ಚಲಾಯಿಸಿದರು.