ಮಳೆ ನೀರಿಗೆ ಸಿಕ್ಕಿಬಿದ್ದ ಡಿ.ಕೆ ಶಿವಕುಮಾರ್‌

| Published : Jun 03 2024, 01:15 AM IST / Updated: Jun 03 2024, 09:27 AM IST

DK shivakumar

ಸಾರಾಂಶ

ಬೆಂಗಳೂರಿನಲ್ಲಿ ಭಾರಿ ಮಳೆಯಾದ ಹಿನ್ನೆಲೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಕಾರಿನಲ್ಲಿ ಸಂಚರಿಸುವಾಗ 3 ಅಡಿ ನೀರು ನಿಂತಿತ್ತು ಎಂದು ಹೇಳಿದ್ದಾರೆ.

 ಬೆಂಗಳೂರು :  ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ರಸ್ತೆಯಲ್ಲಿ ನೀರು ಹರಿಯುವುದು ಸಾಮಾನ್ಯ. ನಾನು ಶಾಸಕಾಂಗ ಪಕ್ಷದ ಸಭೆಗೆ ಕಾರಿನಲ್ಲಿ ಬರುವಾಗಲೂ ಎರಡರಿಂದ ಮೂರು ಅಡಿ ನೀರು ಹರಿಯುತ್ತಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಅಲ್ಲದೆ, ನಾನು ಕಾರಿನಲ್ಲಿ ಬರುವಾಗ ವಿಧಾನಸೌಧ ಬಳಿಯ ಬಸವೇಶ್ವರ ವೃತ್ತದ ಬಳಿಯೇ ಮರ ಬಿದ್ದಿತ್ತು. ಈ ಸಮಸ್ಯೆಗಳನ್ನೆಲ್ಲಾ ಬಿಬಿಎಂಪಿ ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ನಾನೂ ಸಹ ಇಂದು ರಾತ್ರಿಯೆಲ್ಲಾ (ಭಾನುವಾರ) ನಗರದಲ್ಲಿ ಪರಿಶೀಲನೆ ನಡೆಸಲಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗುತ್ತಿದೆ. ಯಾವುದೇ ಹಾನಿಯಾಗದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಮಳೆ ನೀರಿನಿಂದ ತೊಂದರೆ ಆಗಬಾರದು ರಾಜಕಾಲುವೆಗಳ ನೀರಿನ ಹರಿವಿನ ಪ್ರಮಾಣ ಸೇರಿದಂತೆ ರಸ್ತೆಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ಕಂಟ್ರೋಲ್ ರೂಮ್ ಅವರು ಜಾಗೃತರಾಗಿದ್ದಾರೆ ಎಂದು ಹೇಳಿದರು.

ಈ ವೇಳೆ ರಸ್ತೆಯಲ್ಲಿ ನೀರು ನಿಲ್ಲುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಮಳೆ ಭಾರಿ ಪ್ರಮಾಣದಲ್ಲಿ ಸುರಿಯುತ್ತಿದೆ. ಶಾಸಕಾಂಗ ಸಭೆಗೆ ಬರುವ ಹೊತ್ತಿನಲ್ಲಿ ರಸ್ತೆಯಲ್ಲಿ ಎರಡರಿಂದ ಮೂರು ಅಡಿ ನೀರು ಹರಿಯುತ್ತಿತ್ತು. ಇಂದು ರಾತ್ರಿಯೆಲ್ಲಾ ನಾನು ಸಹ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.