ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಗಂಡು ಡಿ.ಕೆ.ಸುರೇಶ್‌: ಶಾಸಕ ನರೇಂದ್ರ ಸ್ವಾಮಿ

| Published : Feb 03 2024, 01:46 AM IST

ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಗಂಡು ಡಿ.ಕೆ.ಸುರೇಶ್‌: ಶಾಸಕ ನರೇಂದ್ರ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ತೆರಿಗೆ ಸಂಗ್ರಹವಾಗದ ರಾಜ್ಯಗಳಿಗೆ ಇನ್ನೆಷ್ಟು ವರ್ಷ ನೀವು ಹಣ ಕೊಡುತ್ತೀರಿ, ಗುಜರಾತ್ ರಾಜ್ಯದಿಂದ ಎಷ್ಟು ಆದಾಯ ಬರುತ್ತಿದೆ, ಇನ್ನೆಷ್ಟು ದಿನ ಗುಜರಾತ್ ಹಾಗೂ ಉತ್ತರ ಪ್ರದೇಶಕ್ಕೆ ಹಣ ಕೊಡಬೇಕು ಎಂದು ಪ್ರಶ್ನೆ ಮಾಡಿರುವುದು ಡಿ.ಕೆ ಸುರೇಶ್ ಮಾತ್ರ. ಯಾಕೆ ಆ ಪ್ರಶ್ನೆ ಎತ್ತಿದರು ಎಂಬುದರ ಬಗ್ಗೆ ಚರ್ಚೆಯಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಅದರ ವಿರುದ್ಧ ಧ್ವನಿ ಎತ್ತಿದ ಏಕೈಕ ಗಂಡು ಮಗ ಡಿ.ಕೆ.ಸುರೇಶ್‌ ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಬಣ್ಣಿಸಿ ಪ್ರತ್ಯೇಕ ರಾಷ್ಟ್ರದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯಕ್ಕಾದ ಅನ್ಯಾಯದ ಕುರಿತಾಗಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅದರಲ್ಲಿ ನನಗೆ ಯಾವ ತಪ್ಪು ಕಾಣುತ್ತಿಲ್ಲ. ಭಾವನಾತ್ಮಕ ಆಕ್ರೋಶ ಬಂದಾಗ ಆ ರೀತಿಯ ಪದ ಬಂದಿರುವುದು ಸಹಜ. ನರೇಂದ್ರ ಮೋದಿ, ಬಿಜೆಪಿಯಿಂದ ಈ ರಾಜ್ಯಕ್ಕೆ ಅನ್ಯಾಯವಾಗಿದೆ. ಅದನ್ನು ಯಾವ ಸಂಸದನೂ ಪ್ರಶ್ನಿಸಿಲ್ಲ ಎಂದು ಖಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದರು.ನಮ್ಮ ರಾಜ್ಯದಿಂದ ಕೇಂದ್ರಕ್ಕೆ ಎಷ್ಟು ತೆರಿಗೆ ಹಣ ಹೋಗುತ್ತದೆ, ಅದರಲ್ಲಿ ನಮಗೆ ಎಷ್ಟು ವಾಪಸ್ ಕೊಡುತ್ತಿದ್ದಾರೆ, ತೆರಿಗೆ ಸಂಗ್ರಹವಾಗದ ರಾಜ್ಯಗಳಿಗೆ ಇನ್ನೆಷ್ಟು ವರ್ಷ ನೀವು ಹಣ ಕೊಡುತ್ತೀರಿ, ಗುಜರಾತ್ ರಾಜ್ಯದಿಂದ ಎಷ್ಟು ಆದಾಯ ಬರುತ್ತಿದೆ, ಇನ್ನೆಷ್ಟು ದಿನ ಗುಜರಾತ್ ಹಾಗೂ ಉತ್ತರ ಪ್ರದೇಶಕ್ಕೆ ಹಣ ಕೊಡಬೇಕು ಎಂದು ಪ್ರಶ್ನೆ ಮಾಡಿರುವುದು ಡಿ.ಕೆ ಸುರೇಶ್ ಮಾತ್ರ. ಯಾಕೆ ಆ ಪ್ರಶ್ನೆ ಎತ್ತಿದರು ಎಂಬುದರ ಬಗ್ಗೆ ಚರ್ಚೆಯಾಗಬೇಕು ಎಂದರು.ಕೆರಗೋಡು ಧ್ವಜ ವಿವಾದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಅನುಮತಿ ಕೇಳಿದವರಿಂದಲೂ ಲೋಪವಾಗಿದೆ. ಆಡಳಿತಾತ್ಮಕವಾಗಿಯೂ ಕೆಲವು ಲೋಪಗಳಾಗಿವೆ. ಅದನ್ನು ಕೆಲವರು ಪ್ರಚೋದಕಾರಿಯಾಗಿ ಬಳಸುತ್ತಿದ್ದಾರೆ. ನಮಗೆ ರಾಷ್ಟ್ರಧ್ವಜ ಮಾತ್ರ ಮುಖ್ಯ. ಧ್ವಜ ಕಂಬದಲ್ಲಿ ಭಗವಧ್ವಜ ಯಾಕೆ ಹಾರಲು ಬಿಟ್ಟರು? ಎಲ್ಲಿ‌ ಲೋಪವಾಗಿದೆ? ಇದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದಷ್ಟೇ ಹೇಳಿದರು.

ಕೆರಗೋಡು ಗ್ರಾಮದಲ್ಲಿ ಶಾಂತಿ ಸಭೆ ನಡೆಸಬೇಕಿದೆ. ಶಾಂತಿ ಸಭೆಗೆ ಸದ್ಯಕ್ಕೆ ಕಾಲ ಪಕ್ವವಾಗಿಲ್ಲ. ಶೀಘ್ರದಲ್ಲೇ ಶಾಂತಿ ಸಭೆ ನಡೆಸುತ್ತೇವೆ. ನಮಗೂ ಹಿಂದೂ ಧರ್ಮ, ದೇವರ ಬಗ್ಗೆ ಭಕ್ತಿಯಿದೆ‌. ನಾವು ಕೂಡ ಪೂಜೆ ಮಾಡಿಯೇ ಮನೆಯಿಂದ ಹೊರಬರುವುದು ಎಂದು ಹಣೆಯಲ್ಲಿ‌ ವಿಭೂತಿ ತೋರಿಸಿ ಹೇಳಿದ ನರೇಂದ್ರಸ್ವಾಮಿ, ನಾವು ಇವರಿಂದ ಹಿಂದುತ್ವದ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.