ಸಂಪುಟ ವಿಸ್ತರಣೆಯಲ್ಲಿ ಉಂಟಾಗಿರುವ ಬಂಡಾಯ ಶಮನಕ್ಕೆ ಕೆಲ ದಿನಗಳಿಂದ ಹರಸಾಹಸ ನಡೆಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದುವರೆದ ಭಾಗವಾಗಿ ಭಾನುವಾರ ರಾತ್ರಿ ದೆಹಲಿಗೆ ತೆರಳಿದ್ದು, ಸೋಮವಾರ ವರಿಷ್ಠರನ್ನು ಭೇಟಿ ಮಾಡಿ ಬಂಡಾಯ ಶಮನಕ್ಕೆ ಸಂಪುಟದಲ್ಲಿ ಕೆಲ ಬದಲಾವಣೆ ಕುರಿತು ಚರ್ಚಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಪುಟ ವಿಸ್ತರಣೆಯಲ್ಲಿ ಉಂಟಾಗಿರುವ ಬಂಡಾಯ ಶಮನಕ್ಕೆ ಕೆಲ ದಿನಗಳಿಂದ ಹರಸಾಹಸ ನಡೆಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದುವರೆದ ಭಾಗವಾಗಿ ಭಾನುವಾರ ರಾತ್ರಿ ದೆಹಲಿಗೆ ತೆರಳಿದ್ದು, ಸೋಮವಾರ ವರಿಷ್ಠರನ್ನು ಭೇಟಿ ಮಾಡಿ ಬಂಡಾಯ ಶಮನಕ್ಕೆ ಸಂಪುಟದಲ್ಲಿ ಕೆಲ ಬದಲಾವಣೆ ಕುರಿತು ಚರ್ಚಿಸಲಿದ್ದಾರೆ.ಇದರ ಜೊತೆಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗೂ ಈಗಾಗಲೇ ವಿವಿಧ ಖಾತೆ ನಿರ್ವಹಿಸುತ್ತಿರುವ ಕೆಲ ಸಚಿವರ ಖಾತೆ ಬದಲಾವಣೆ ಬಗ್ಗೆಯೂ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸೇರಿದಂತೆ ಇತರೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿರುವ ಮುಖ್ಯಮಂತ್ರಿ ಅವರು, ಮೊದಲನೆಯದಾಗಿ ಬಂಡಾಯ ಶಮನಗೊಳಿಸಲು ಸಂಪುಟದಲ್ಲಿ ಕೆಲ ಬದಲಾವಣೆ ಮಾಡುವ ವಿಚಾರ ಚರ್ಚಿಸುವರು. ಜೊತೆಗೆ ನೂತನ ಸಚಿವರ ಖಾತೆ ಹಂಚಿಕೆ ಬಗ್ಗೆ ಒಪ್ಪಿಗೆ ಪಡೆಯಲಿದ್ದಾರೆ. ನಂತರ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಹಿರಿಯ ಸಚಿವರಿಗೆ ತಮ್ಮ ಖಾತೆಗಳ ಬಗ್ಗೆ ಅಸಮಾಧಾನವಿರುವುದರಿಂದ ಅವರ ಖಾತೆ ಅದಲು ಬದಲು ಮಾಡುವ ಕುರಿತೂ ಚರ್ಚೆ ನಡೆಸಲಿದ್ದಾರೆ. ಪ್ರಮುಖವಾಗಿ ಜಲಸಂಪನ್ಮೂಲ, ಲೋಕೋಪಯೋಗಿ, ಮುಜರಾಯಿ, ಆರೋಗ್ಯ, ಕ್ರೀಡೆ ಮತ್ತು ಯುವಜನ ಸೇವೆ ಸೇರಿದಂತೆ 5-6 ಖಾತೆಗಳು ಬದಲಾಗಲಿವೆ ಎನ್ನಲಾಗುತ್ತಿದೆ.ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದಿದ್ದ ಅಸಮಾಧಾನ ಇನ್ನೂ ಶಮನವಾಗಿಲ್ಲ. ಅವಕಾಶ ವಂಚಿತ ಎಂ.ಕೃಷ್ಣಪ್ಪ, ಕುರುಬ ಕೋಟಾದಡಿ ಬಸವರಾಜ ಶಿವಣ್ಣನವರ್ ಅವರಿಗೆ ಅವಕಾಶ ಕಲ್ಪಿಸುವ ಜತೆಗೆ ಒಬ್ಬ ಮಹಿಳೆಯನ್ನು ಕಡ್ಡಾಯವಾಗಿ ಪರಿಗಣಿಸಬೇಕಾಗಿದೆ. ಅಲ್ಲದೆ, ಬ್ರಾಹ್ಮಣ ಸಮುದಾಯಕ್ಕೆ ಸಂಪುಟದಲ್ಲಿ ಈ ಬಾರಿ ಅವಕಾಶವೇ ಸಿಗದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಮಸ್ಯೆ ಬಗೆಹರಿಸಲು ಕೆಲ ಆಯ್ಕೆಗಳನ್ನು ಸಿದ್ಧಪಡಿಸಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವರಿಷ್ಠರೊಂದಿಗೆ ಚರ್ಚಿಸಿ ಅನುಮತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ವರಿಷ್ಠರು ಸಂಪುಟದಲ್ಲಿನ ಬದಲಾವಣೆಗೆ ಒಪ್ಪಿದರೆ ಕುರುಬ ಕೋಟಾದಡಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಹೆಸರು ಸಂಪುಟದಲ್ಲಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ಜತೆಗೆ ಎಂ.ಕೃಷ್ಣಪ್ಪ ಅವರಿಗೆ ಅವಕಾಶ ನೀಡಲು ಒಬ್ಬ ಒಕ್ಕಲಿಗ ಸಚಿವರು ರಾಜೀನಾಮೆ ನೀಡುವ ನಿರೀಕ್ಷೆಯಿದೆ. ಈ ರೀತಿ ರಾಜೀನಾಮೆ ನೀಡಿದವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಿ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸುವ ಲೆಕ್ಕಾಚಾರ ನಡೆದಿದೆ. ಮಹಿಳಾ ಕೋಟಾ ಭರ್ತಿಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಮನೆಯ ಸದಸ್ಯೆಯರಿಂದ ಭಾರೀ ಪೈಪೋಟಿ ನಡೆದಿದೆ. ಅದರ ಬಗ್ಗೆ ವರಿಷ್ಠರ ಮಟ್ಟದಲ್ಲಿ ಚರ್ಚೆ ನಡೆದು ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.