ಸಾರಾಂಶ
ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಜಲ ಯೋಜನೆ ಬೇಡಿಕೆ ಪಟ್ಟಿ ಮಂಡಿಸಿದ್ದಾರೆ.
ನವದೆಹಲಿ : ಕೃಷ್ಣಾ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಹೊರಡಿಸಬೇಕು, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿರುವ 5000 ಕೋಟಿ ರು. ಬಿಡುಗಡೆ ಮಾಡಬೇಕು, ಮಹದಾಯಿ ಹಾಗೂ ಎತ್ತಿನಹೊಳೆ ಯೋಜನೆಗೆ ಪರಿಸರ ಅನುಮತಿ ನೀಡಬೇಕು, ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬೇಕು, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ₹11,122 ಕೋಟಿ ನೀಡಬೇಕು ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಪಟ್ಟಿ ಮಂಡಿಸಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಹಾಗೂ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಅವರನ್ನು ಈ ಕುರಿತು ಮನವಿ ಮಾಡಿದರು. ಬಳಿಕ ಕರ್ನಾಟಕದವರೇ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಈ ವಿಚಾರದಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು. ಸಿ.ಆರ್. ಪಾಟೀಲ್ ಅವರ ಜತೆಗಿನ ಸಭೆ ವೇಳೆ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಕೂಡ ಉಪಸ್ಥಿತರಿದ್ದರು.
ಡಿಕೆಶಿ ಬೇಡಿಕೆಗಳೇನು?:
1.ಕಳಸಾ ನಾಲಾ ತಿರುವು ಯೋಜನೆ: ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಮಹದಾಯಿ ನದಿ ಯೋಜನೆ ರೂಪಿಸಿದೆ. ಇದರ ಭಾಗವಾಗಿ ಕಳಸಾ ನಾಲಾ ತಿರುವಿಗೆ ಕೇಂದ್ರ ಅರಣ್ಯ ಇಲಾಖೆಯ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆಯಬೇಕಿದೆ. ಈ ಸಂಬಂಧ ರಾಜ್ಯ ಸರ್ಕಾರ ಹಲವು ಬಾರಿ ಮನವಿ ಮಾಡಿದ್ದರೂ ಈ ವರೆಗೂ ಅನುಮತಿ ಸಿಕ್ಕಿಲ್ಲ. ಹಾಗಾಗಿ ಯೋಜನೆ ಪೂರ್ಣ ಅನುಷ್ಠಾನಕ್ಕೆ ಕೇಂದ್ರವು ಅನುಮತಿ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
2.ಎತ್ತಿನಹೊಳೆ ಯೋಜನೆ: ಬರಪೀಡಿತ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮತ್ತು ಅಂತರ್ ಜಲ ಹೆಚ್ಚಿಸುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಹೆಚ್ಚುವರಿಯಾಗಿ 423 ಎಕರೆ ಅರಣ್ಯ ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡರು.
3.ಭದ್ರಾ ಮೇಲ್ದಂಡೆ ಯೋಜನೆ: ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ ₹5000 ಕೋಟಿಯನ್ನು ಮೀಸಲಿರಿಸಿದೆ. ಆದರೆ ಈವರೆಗೆ ಹಣವನ್ನು ಬಿಡುಗಡೆ ಮಾಡಿಲ್ಲ. ಈ ಹಣವನ್ನು ತಕ್ಷಣ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಡಿಸಿಎಂ ಕೋರಿದರು.
4.ಪಿಎಂಕೆಎಸ್‌ವೈ ಯೋಜನೆ: ಬರಪೀಡಿತ ಪ್ರದೇಶಗಳಲ್ಲಿ ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆ ರೂಪಿಸಲು ಮತ್ತು ಅಂತರ್ಜಲ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರಾಜ್ಯಕ್ಕೆ ಶೋಂತಿ ಏತ ನೀರಾವರಿ ಯೋಜನೆ, ಇಂಡಿ ಕಾಲುವೆ, ಮಲಪ್ರಭ ಕಾಲುವೆ, ಘಟಪ್ರಭ ಕಾಲುವೆ, ತುಂಗಭದ್ರಾ ಎಡ ದಂಡೆ ಯೋಜನೆ, ಬೆಣ್ಣೆಹಳ್ಳ ಪ್ರವಾಹ ನಿರ್ವಹಣೆಗಾಗಿ ಒಟ್ಟು 11,122 ಕೋಟಿ ರು. ಸಹಾಯ ಧನವನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದರು.
5.ಮೇಕೆದಾಟುಗೆ ಒಪ್ಪಿಗೆ ನೀಡಿ: ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲು ಯೋಜಿಸಿರುವ ಮೇಕೆದಾಟು ಅಣೆಕಟ್ಟೆ ಯೋಜನೆಗೆ ಡಿಕೆಶಿ ಅನುಮತಿ ಕೋರಿದರು. ಈ ಯೋಜನೆಗೆ ತಮಿಳುನಾಡಿನ ಒಪ್ಪಿಗೆ ಬೇಕಿಲ್ಲ. ಹಾಗಾಗಿ ತಕ್ಷಣವೇ ಒಪ್ಪಿಗೆ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಅವರು ಮನವಿ ಸಲ್ಲಿಸಿದರು.
6. ಕೃಷ್ಣಾ ಐತೀರ್ಪು ಅಧಿಸೂಚನೆ: ಕೃಷ್ಣಾ ಜಲ ನ್ಯಾಯಾಧಿಕರಣವು ಹಲವು ವರ್ಷಗಳ ಹಿಂದೆಯೇ ರಾಜ್ಯಕ್ಕೆ ನೀರು ಹಂಚಿಕೆ ಮಾಡಿ ಐತೀರ್ಪು ಪ್ರಕಟಿಸಿದ್ದರೂ, ಅದರ ಗೆಜೆಟ್ ಅಧಿಸೂಚನೆ ಹೊರಬಿದ್ದಿಲ್ಲ. ಇದರಿಂದಾಗಿ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ತೊಡಕಾಗಿದೆ. ಹೀಗಾಗಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು ಎಂದು ಡಿಕೆಶಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.