ಸಮತಟ್ಟು ನೆಲದಲ್ಲಿ ಪೈಪ್‌ಲೈನ್‌ಗೆ ಡಿಕೆಶಿ ಗಮನಹರಿಸಲಿ

| Published : Sep 12 2025, 01:00 AM IST

ಸಮತಟ್ಟು ನೆಲದಲ್ಲಿ ಪೈಪ್‌ಲೈನ್‌ಗೆ ಡಿಕೆಶಿ ಗಮನಹರಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ನಾಲೆಯನ್ನು ಸೀಳಿ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗೆ ನೀರು ಹರಿಸುವ ಬದಲು ಸಮತಟ್ಟು ನೆಲದಲ್ಲಿ ಪೈಪ್ ಅಳವಡಿಸುವ ಕಾಮಗಾರಿಗೆ ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮುಂದಾಗಬೇಕು ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ.ಸಿದ್ದೇಶ್ವರ ಲಕ್ಕವಳ್ಳಿ ಭದ್ರಾ ಡ್ಯಾಂ ಬಳಿ ಒತ್ತಾಯಿಸಿದ್ದಾರೆ.

- ಭದ್ರಾ ಡ್ಯಾಂನಲ್ಲಿ ಬಾಗಿನ ಅರ್ಪಿಸಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಒತ್ತಾಯ - ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಮುಖಂಡರು, 5 ಸಾವಿರ ಕಾರ್ಯಕರ್ತರು ಭಾಗಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ನಾಲೆಯನ್ನು ಸೀಳಿ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗೆ ನೀರು ಹರಿಸುವ ಬದಲು ಸಮತಟ್ಟು ನೆಲದಲ್ಲಿ ಪೈಪ್ ಅಳವಡಿಸುವ ಕಾಮಗಾರಿಗೆ ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮುಂದಾಗಬೇಕು ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ.ಸಿದ್ದೇಶ್ವರ ಒತ್ತಾಯಿಸಿದರು.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿಯ ಭದ್ರಾ ಡ್ಯಾಂಗೆ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಚ್ಚುಕಟ್ಟು ರೈತರೊಂದಿಗೆ ಪತ್ನಿ ಗಾಯತ್ರಿ ಸಿದ್ದೇಶ್ವರ ಸಮೇತರಾಗಿ ಭದ್ರೆಗೆ ಬಾಗಿನ ಅರ್ಪಿಸಿ, ಬಳಿಕ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸೆ.12ರಂದು ಭದ್ರೆಗೆ ಬಾಗಿನ ಅರ್ಪಿಸಲು ಇಲ್ಲಿಗೆ ಭೇಟಿ ನೀಡುವ ಡಿ.ಕೆ.ಶಿವಕುಮಾರ ಭದ್ರಾ ಬಲದಂಡೆಗೆ ಧಕ್ಕೆ ಆಗದಂತೆ ಸಮತಟ್ಟು ನೆಲದಲ್ಲಿ ಪೈಪ್ ಲೈನ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಬಲದಂಡೆ ನಾಲೆ ಸೀಳಿದ ಸ್ಥಳವನ್ನು ಡಿಸಿಎಂ ಶಿವಕುಮಾರ ವೀಕ್ಷಣೆ ಮಾಡಲಿ. ಈಗ ಕೈಗೊಂಡ ಕಾಮಗಾರಿ ಸ್ಥಳ ಬಿಟ್ಟು, ಸಮನಾದ ನೆಲದಲ್ಲಿ ಪೈಪ್ ಲೈನ್ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಿ. ತರೀಕೆರೆ, ಹೊಸದುರ್ಗ ಭಾಗಕ್ಕೂ ನೀರು ಕೊಡಲಿ. ತರೀಕೆರೆ ಶ್ರೀನಿವಾಸ ನಾವು ಡ್ಯಾಂಗೆ ಹಿಂದೆ ಭೇಟಿ ನೀಡಿದ್ದಾಗ ತಮ್ಮ ಕ್ಷೇತ್ರದ ನೀರಿನ ಬವಣೆ ಬಗ್ಗೆ ಹೇಳಿಕೊಂಡರು. ನಮಗೂ ಮಾನವೀಯತೆ ಇದೆ. ಆದರೆ, ಬಲದಂಡೆ ಸೀಳುವ ಬದಲು ಬೇರೆ ಮಾರ್ಗದಿಂದ ನೀರೊಯ್ಯಲು ಸಲಹೆ ನೀಡಿದ್ದೆವು ಎಂದು ಅವರು ತಿಳಿಸಿದರು.

ತರೀಕೆರೆ, ಹೊಸದುರ್ಗ ಭಾಗಕ್ಕೆ 30 ಕ್ಯುಸೆಕ್‌ ನೀರನ್ನು ಹರಿಸಲು ನಮ್ಮ ಅಭ್ಯಂತರವಿಲ್ಲ. ಭದ್ರಾ ಬಲದಂಡೆ ನಾಲೆಗೆ ಧಕ್ಕೆ ಮಾಡಿ, ಮುಂದೆ ದಾವಣಗೆರೆ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆ ಭಾಗದ ಅಚ್ಚುಕಟ್ಟು ಭಾಗದ ರೈತರಿಗೆ ತೊಂದರೆ ಆಗದಂತೆ ಸರ್ಕಾರ ನೀರು ಕೊಡಲಿ. ಭದ್ರಾದಿಂದ 30 ಕ್ಯುಸೆಕ್ ನೀರು ಬಿಟ್ಟರೆ, ಅಷ್ಟೇ ಪ್ರಮಾಣದ ನೀರನ್ನು ಭದ್ರಾಗೆ ತುಂಬಿಸುವ ಕೆಲಸವೂ ಆಗಬೇಕು. ಬಾಗಿನ ಅರ್ಪಿಸಲು ಭದ್ರಾ ಡ್ಯಾಂಗೆ ಶುಕ್ರವಾರ ಭೇಟಿ ನೀಡುವ ಡಿ.ಕೆ. ಶಿವಕುಮಾರ ಈ ಬಗ್ಗೆಯೂ ಗಮನಹರಿಸಬೇಕು ಎಂದು ಹೇಳಿದರು.

ಅಚ್ಚುಕಟ್ಟು ರೈತರಲ್ಲಿ ಯಾರೂ ಸಹ ತಪ್ಪು ಭಾವನೆ ಮೂಡಿಸಬಾರದು. ನಾವೂ ರೈತರ ಪರವಾಗಿಯೇ ಇದ್ದೇವೆ. ಅಚ್ಚುಕಟ್ಟು ಕೊನೆಯ ಭಾಗಕ್ಕೆ ಹರಸಾಹಸ ಮಾಡಿ ನೀರು ಕೊಡಿಸಲು ಶ್ರಮಿಸುತ್ತೇವೆ. ದಾವಣಗೆರೆ ಟಿವಿ ಸ್ಟೇಷನ್ ಕೆರೆ, ಕುಂದುವಾಡ ಕೆರೆ, ಸೂಳೆಕೆರೆಗೂ ನೀರು ಪಡೆಯುತ್ತಿದ್ದೇವೆ. ನೆರೆ ಜಿಲ್ಲೆಯ ತಾಲೂಕುಗಳಿಗೆ ನೀರು ನೀಡಲು ಅಭ್ಯಂತರವಿಲ್ಲ. ಆದರೆ, ಬಲದಂಡೆಯನ್ನೇ ಸೀಳಿ ನೀರು ನೀಡುವುದಕ್ಕೆ ನಮ್ಮ ವಿರೋಧವಿದೆ ಎಂದರು.

ತುಂಬಿರುವ ಭದ್ರಾ ಡ್ಯಾಂಗೆ ಬಾಗಿನ ಅರ್ಪಿಸಲು ನಾವು ಕೆಲವರು ಹೋಗೋಣ ಅಂದಾಗ ನಮ್ಮ ಪಕ್ಷದ ಮುಖಂಡರು ಸಭೆ ಮಾಡಿದ್ದು, 5 ಸಾವಿರಕ್ಕೂ ಅಧಿಕ ರೈತರು ಬಂದಿರುವುದು ಭದ್ರಾ ಡ್ಯಾಂ ಮೇಲಿನ ಪ್ರೀತಿ, ವಿಶ್ವಾಸ, ಕಾಳಜಿ, ರೈತರ ಇಚ್ಛಾಶಕ್ತಿ ತೋರಿಸುತ್ತದೆ. ಈ ಹಿಂದೆ ನಾಲೆ ಸೀಳಿದ್ದ ವಿಚಾರ ಗೊತ್ತಾದಾಗ ನಾವೂ ಭೇಟಿ ನೀಡಿ, ಚಿತ್ರದುರ್ಗದ ಸುಧಾಕರ್, ತರೀಕೆರೆ ಶ್ರೀನಿವಾಸ, ಹೊಸದುರ್ಗ ಗೋವಿಂದಪ್ಪ, ಚಳ್ಳಕೆರೆ ರಘುಮೂರ್ತಿ ಸಹ ಬಂದಿದ್ದರು. ಕುಡಿಯುವ ನೀರು ಕೊಡುವುದು ಮಾನವೀಯತೆ. ಅದೇ ರೀತಿ ಅಚ್ಚುಕಟ್ಟು ರೈತರಿಗೆ ಅನ್ಯಾಯ ಆಗಬಾರದು ಎಂಬುದನ್ನೂ ತಿಳಿಸಿ ಹೇಳಿದ್ದೇವೆ ಎಂದು ಸಿದ್ದೇಶ್ವರ ವಿವರಿಸಿದರು.

ಭದ್ರಾ ಡ್ಯಾಂ ಅನ್ನು 1943ರಿಂದ 63 ರವರೆಗೆ 20 ವರ್ಷ ಡ್ಯಾಂ ಹಿಂದಿನ ಸರ್ಕಾರಗಳು ಕಟ್ಟಿವೆ. 71.53 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಈಗ 70 ಟಿಎಂಸಿ ನೀರು ತುಂಬಿದೆ. 1,05,762 ಹೆಕ್ಟೇರ್ ಪ್ರದೇಶ ಇದಕ್ಕಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ವಿಜಯನಗರ ಜಿಲ್ಲೆ ಒಳಗೊಂಡಿದೆ. ಅತಿ ಹೆಚ್ಚು ನೀರಾವರಿ ದಾವಣಗೆರೆ ಜಿಲ್ಲೆಯದ್ದು. ಭದ್ರೆ ಯಾವಾಗಲೂ ದಾವಣಗೆರೆ ಜಿಲ್ಲೆ ರೈತರ ಪಾಲಿಗೆ ಭದ್ರವಾಗಿದ್ದಾಳೆ. ಇಲ್ಲಿಂದ 60 ಕಿಮೀ ದಾವಣಗೆರೆವರೆಗೆ ಬಲದಂಡೆ ನಾಲೆ ಇದೆ. 70 ಕಿಮೀ ಮಲೇಬೆನ್ನೂರು ನಾಲೆ ಇದೆ. ಕೊನೆ ಭಾಗಕ್ಕೆ ನೀರು ಇಲ್ಲವೆಂಬ ಕೂಗು ಇದ್ದೇ ಇದೆ ಎಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ನಾಲೆ ಆಧುನೀಕರಣಕ್ಕೆ ₹923 ಕೋಟಿ ಕೊಟ್ಟು, ಕೊನೆ ಭಾಗಕ್ಕೂ ನೀರೊದಗಿಸಲು ಕ್ರಮ ಕೈಗೊಂಡಿದ್ದರು. ಆದರೂ ಕೆಲ ಭಾಗಕ್ಕೆ ನೀರು ತಲುಪುತ್ತಿಲ್ಲ. ಈ ಸಲ ಭದ್ರೆ ತುಂಬಿ ತುಳುಕುತ್ತಿದ್ದಾಳೆ. ಈಗ ಹರಿದಿದ್ದಕ್ಕಿಂತ ಹೆಚ್ಚು ಹರಿಯುವ ಸೂಚನೆ ಇದೆ ಎಂದು ತಿಳಿಸಿದರು.

ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ, ವಿಪ ಸದಸ್ಯ ಕೆ.ಎಸ್.ನವೀನ, ಮಾಜಿ ಶಾಸಕ ಎಚ್.ಪಿ.ರಾಜೇಶ, ಗಾಯತ್ರಿ ಸಿದ್ದೇಶ್ವರ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ಎ.ವೈ.ಪ್ರಕಾಶ, ಎಸ್.ಎಂ.ವೀರೇಶ ಹನಗವಾಡಿ, ಅಣಬೇರು ಜೀವನಮೂರ್ತಿ, ಜಿ.ಎಸ್.ಅನಿತ್‌, ಬಿ.ಎಸ್.ಜಗದೀಶ, ಮಾಯಕೊಂಡ ಜಿ.ಎಸ್.ಶ್ಯಾಮ್‌, ಶ್ರೀನಿವಾಸ ಟಿ.ದಾಸಕರಿಯಪ್ಪ, ಶಾಂತರಾಜ ಪಾಟೀಲ, ಎ.ಬಿ.ಹನುಮಂತಪ್ಪ, ಚನ್ನಪ್ಪ, ಹರಿಹರ ಲಿಂಗರಾಜ, ರಮೇಶ, ಐರಣಿ ಅಣ್ಣೇಶ, ದೀಪಾ ಜಗದೀಶ, ಡಿ.ಎಸ್.ಉಮಾ ಪ್ರಕಾಶ, ಆರುಂಡಿ ನಾಗರಾಜ, ಎಸ್.ಟಿ.ಯೋಗೇಶ್ವರ, ಕೆಟಿಜೆ ನಗರ ಲೋಕೇಶ ಇತರರು ಇದ್ದರು.

- - -

-(ಫೋಟೋ ಬರಲಿವೆ):