ಡಿ.ಕೆ.ಶಿವಕುಮಾರ್ ಸ್ವಂತ ಜಾಗದಲ್ಲಿ ಕಾಂಗ್ರೆಸ್‌ ಭವನ ನಿರ್ಮಾಣ

| N/A | Published : May 10 2025, 01:11 AM IST / Updated: May 10 2025, 01:24 PM IST

Karnataka Deputy Chief Minister DK Shivakumar (Photo/ANI)
ಡಿ.ಕೆ.ಶಿವಕುಮಾರ್ ಸ್ವಂತ ಜಾಗದಲ್ಲಿ ಕಾಂಗ್ರೆಸ್‌ ಭವನ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

 ಕೆಪಿಸಿಸಿ ಅಧ್ಯಕ್ಷರು ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ತವರು ಜಿಲ್ಲೆ ರಾಮನಗರದ ಖಾಸಗಿ ಬಡಾವಣೆಯಲ್ಲಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಾಂಗ್ರೆಸ್ ಭವನ ನಿರ್ಮಾಣಗೊಳ್ಳುತ್ತಿದೆ.

ರಾಮನಗರ: ಕೆಪಿಸಿಸಿ ಅಧ್ಯಕ್ಷರು ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ತವರು ಜಿಲ್ಲೆ ರಾಮನಗರದ ಖಾಸಗಿ ಬಡಾವಣೆಯಲ್ಲಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಾಂಗ್ರೆಸ್ ಭವನ ನಿರ್ಮಾಣಗೊಳ್ಳುತ್ತಿದೆ.

ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ಬಾಡಿಗೆ ಕಟ್ಟಡಗಳಲ್ಲಿಯೇ ಪಕ್ಷ ಸಂಘಟನೆಗೆ ಸಂಬಂಧಿಸಿದ ಸಭೆ, ಸಮಾರಂಭಗಳು ನಡೆಯುತ್ತಿದ್ದವು. ಇದೀಗ ಕಾಂಗ್ರೆಸ್ ಭವನದ ಹೆಸರಿನಲ್ಲಿ ಪಕ್ಷಕ್ಕೆ ಸ್ವಂತ ಕಟ್ಟಡವೊಂದು ತಲೆ ಎತ್ತುತ್ತಿದೆ.

ಬಾಡಿಗೆ ಕಟ್ಟಡದಲ್ಲಿರುವ ಕೈ ಕಚೇರಿ :

ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ರಾಮನಗರ ಪ್ರತ್ಯೇಕ ಜಿಲ್ಲೆಯಾಗಿ 2007ರಲ್ಲಿ ರಚನೆಗೊಂಡಿತು. ಜಿಲ್ಲೆಯಲ್ಲಿ ಘಟಾನುಘಟಿ ಕಾಂಗ್ರೆಸ್ ನಾಯಕರಿದ್ದರು ಇಲ್ಲಿವರೆಗೂ ಕಾಂಗ್ರೆಸ್ ಪಕ್ಷಕ್ಕೆ ಸ್ವಂತ ಸೂರು ಇರಲಿಲ್ಲ. ನಾಲ್ಕೈದು ವರ್ಷಗಳಿಗೊಮ್ಮೆ ಕಾಂಗ್ರೆಸ್ ಕಚೇರಿ ಸ್ಥಳಾಂತರಗೊಳ್ಳುತ್ತಲೇ ಇತ್ತು.

ಈ ಮೊದಲು ಗುಂಡಪ್ಪ ಬಿಲ್ಡಿಂಗ್ , ಹಳೇ ಆರ್ ಟಿಒ ಕಚೇರಿ ಪಕ್ಕಲ್ಲಿದ್ದ ಕಾಂಗ್ರೆಸ್ ಕಚೇರಿ ಆನಂತರ ಮಿನಿವಿಧಾನಸೌಧದ ಎದುರಿನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಈಗ ಹಳೇ ಬೆಂಗಳೂರು - ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಮಾರುತಿ ನಗರ ಬಡಾವಣೆಯಲ್ಲಿರುವ ಖಾಸಗಿ ಲೇಔಟ್ ನಲ್ಲಿ ಕಚೇರಿ ನಿರ್ಮಾಣ ಕಾರ್ಯ ವೇಗವಾಗಿ ಸಾಗಿದೆ.

ಡಿಕೆಶಿಗೆ ಸೇರಿದ ನಿವೇಶನದಲ್ಲಿ ಭವನ ನಿರ್ಮಾಣ :

ಆ ಖಾಸಗಿ ಬಡಾವಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಖರೀದಿಸಿರುವ ನಿವೇಶನದಲ್ಲಿಯೇ ಕಾಂಗ್ರೆಸ್ ಭವನ ನಿರ್ಮಾಣಗೊಳ್ಳುತ್ತಿದೆ. ಇದಕ್ಕಾಗಿ ಪಕ್ಷದ ಶಾಸಕರಾಗಲಿ , ವಿಧಾನ ಪರಿಷತ್ ಸದಸ್ಯರಾಗಲಿ ಅಥವಾ ಯಾವುದೇ ನಾಯಕರಿಂದಾಗಲಿ ಆರ್ಥಿಕ ಸಹಾಯ ಪಡೆಯುತ್ತಿಲ್ಲ. ಬದಲಿಗೆ ಭವನ ನಿರ್ಮಾಣದ ಸಂಪೂರ್ಣ ಖರ್ಚನ್ನು ಡಿ.ಕೆ.ಶಿವಕುಮಾರ್ ಅವರೇ ಭರಿಸುತ್ತಿದ್ದಾರೆ.

ಈಗಾಗಲೇ ಕಾಂಗ್ರೆಸ್ ಭವನದ ನೀಲನಕ್ಷೆ ತಯಾರಾಗಿ, ಮೂರು ಅಂತಸ್ತಿನ ಭವನದ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಮಾಜಿ ಸಂಸದ ಡಿ.ಕೆ.ಸುರೇಶ್ ರವರು ಆಗಿಂದಾಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಪ್ರಾಧಿಕಾರದಿಂದ ಅನುಮೋದನೆ :

ಡಿ.ಕೆ.ಶಿವಕುಮಾರ್ ರವರು ಕಸಬಾ - 1 ಹೋಬಳಿ ವಡೇರಹಳ್ಳಿ ಗ್ರಾಮದ ಸರ್ವೆ ನಂಬರ್ 76/2ರಲ್ಲಿನ 21.12 ಗುಂಟೆ ಪೈಕಿ 12 ಗುಂಟೆ ಜಮೀನನ್ನು ವಸತಿ ವಲಯದಿಂದ ವಾಣಿಜ್ಯ ಭೂ ವಲಯ ಉದ್ದೇಶಕ್ಕೆ ಭೂ ಉಪಯೋಗ ಬದಲಾವಣೆ ಕೋರಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

ಕಳೆದ ಏಪ್ರಿಲ್ 15ರಂದು ನಡೆದ 2025 - 26ನೇ ಸಾಲಿನ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ರವರ ಅರ್ಜಿ ಕುರಿತು ಚರ್ಚಿಸಿ 12 ಗುಂಟೆ ಜಮೀನನ್ನು ವಸತಿ ವಲಯದಿಂದ ವಾಣಿಜ್ಯ ಭೂ ವಲಯ ಉದ್ದೇಶಕ್ಕೆ ಭೂ ಉಪಯೋಗ ಬದಲಾವಣೆಗೆ ಅನುಮೋದನೆ ನೀಡಲಾಗಿದೆ.

ಡಿಕೆಶಿಯಿಂದ ಕೆಪಿಸಿಸಿಗೆ ಭವನ ದಾನ :

ಈ ಮೊದಲು ಸ್ಥಳೀಯ ಶಾಸಕರು ಹಾಗೂ ಮುಖಂಡರು ಕಾಂಗ್ರೆಸ್ ಭವನ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಮೇ 11ರಂದು ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಯುವ ಜನೋತ್ಸವದಲ್ಲಿ ಭಾಗಿಯಾಗಲಿರುವ ಡಿ.ಕೆ.ಶಿವಕುಮಾರ್ ರವರು ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಪೂಜೆ ನೆರವೇರಿಸಲಿದ್ದಾರೆ.

ಸುಸಜ್ಜಿತವಾದ ಕಾಂಗ್ರೆಸ್ ಭವನ ನಿರ್ಮಾಣ ಕಾರ್ಯ ಕೆಲ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆನಂತರ ಲೋಕಾರ್ಪಣೆಗೊಂಡ ಬಳಿಕ ಕಾಂಗ್ರೆಸ್ ಭವನವನ್ನು ಡಿ.ಕೆ.ಶಿವಕುಮಾರ್ ರವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಗೆ ದಾನದ ರೂಪದಲ್ಲಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಕಾಂಗ್ರೆಸ್ ಪಕ್ಷ ಕಟ್ಟುವುದರ ಜೊತೆಗೆ ಪಕ್ಷದ ಮನೆ ಕಟ್ಟುವುದು ಕೂಡ ಅಗತ್ಯವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ರವರ ಮಾರ್ಗದರ್ಶನದಂತೆ ಜಿಲ್ಲಾ ಕೇಂದ್ರ ರಾಮನಗರದಲ್ಲಿ ವಿಶಾಲವಾದ ಕಾಂಗ್ರೆಸ್ ಭವನದ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.

- ಗಂಗಾಧರ್, ಜಿಲ್ಲಾಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ರಾಮನಗರ.

ಕಾಂಗ್ರೆಸ್ ಭವನದಲ್ಲಿ ಏನೆಲ್ಲ ಇರಲಿದೆ :

ರಾಮನಗರದ ಮಾರುತಿ ನಗರ ಬಡಾವಣೆಯ ಖಾಸಗಿ ಲೇಔಟ್ ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ 21.12 ಗುಂಟೆ ಪೈಕಿ 12 ಗುಂಟೆಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣಗೊಳ್ಳಲಿದೆ.

ಮೂರು ಅಂತಸ್ತಿನ ಕಾಂಗ್ರೆಸ್ ಭವನದ ನೆಲ ಮಹಡಿಯನ್ನು ಕಮರ್ಷಿಯಲ್ ಗಾಗಿ ನೀಡಲಾಗುತ್ತಿದೆ. ಮೊದಲ ಅಂತಸ್ತಿನಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರಿಗೆ ಪ್ರತ್ಯೇಕ ಕೊಠಡಿಗಳು ಇರಲಿವೆ. ಉಳಿದಂತೆ ಸಭೆಗಳಿಗಾಗಿ ಪ್ರತ್ಯೇಕ ಸಭಾಂಗಣ, ಹೊರ ಭಾಗಗಳಿಂದ ಆಗಮಿಸುವ ಪಕ್ಷದ ನಾಯಕರ ವಾಸ್ತವ್ಯಕ್ಕೆ ಪ್ರತ್ಯೇಕ ರೂಮ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ.