ಸಾರಾಂಶ
ರಾಮನಗರ: ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕಾಯಕದಲ್ಲಿ ಸಂಸದ ಡಿ.ಕೆ. ಸುರೇಶ್ ಅವರು ಯಶಸ್ವಿಯಾಗಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್. ಅಶೋಕ್ ಹೇಳಿದರು.
ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಪಂ ವ್ಯಾಪ್ತಿಯ ಕ್ಯಾಸಾಪುರದಲ್ಲಿ ಕಾವೇರಿ ನೀರಾವರಿ ನಿಗಮದ ಅನುದಾನದಡಿ 60 ಲಕ್ಷ ರು. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಕೆರೆಗಳನ್ನು ತುಂಬಿಸಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಸುವ ಮುಖೇನ ಕೃಷಿ ಚಟುವಟಿಕೆಗೆ ನೆರವಾಗುವಂತಹ ದೂರದೃಷ್ಟಿ ಇಟ್ಟುಕೊಂಡು ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸಿ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದು ಅವರ ಅಭೂತಪೂರ್ವ ಸಾಧನೆ ಎಂದರು.
ಪ್ರತಿ ಹಳ್ಳಿಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಗ್ರಾಪಂ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡು ಮಾಹಿತಿ ಸಂಗ್ರಹಿಸಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಟ್ರಾನ್ಸ್ ಫಾರ್ಮರ್ (ಟಿ.ಸಿ)ಗಳನ್ನು ಅಳವಡಿಸಲು ಅನುದಾನ ನೀಡಿದ್ದಾರೆ. ಗ್ರಾಪಂ ಮಟ್ಟದಲ್ಲಿ ಮನೆಗಳ ಹಂಚಿಕೆ, ಜನ ಸಂಪರ್ಕ ಸಭೆಗಳ ಮೂಲಕ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ತರುವಲ್ಲಿ ಸಂಸದರು ಮತ್ತು ಕ್ಷೇತ್ರದ ಶಾಸಕ ಬಾಲಕೃಷ್ಣ ಸಫಲರಾಗಿದ್ದಾರೆ. ಇಂತಹ ಕ್ರಿಯಾಶೀಲ ಸಂಸದರನ್ನು ನಾವು ಮತ್ತೊಮ್ಮೆ ಆಯ್ಕೆ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.ಕೂಟಗಲ್ ಹೋಬಳಿ 6 ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳ ರಸ್ತೆ ಮತ್ತು ಚರಂಡಿ ಅಭಿವೃದ್ದಿಗೆ 20 ಕೋಟಿ ರು. ಅನುದಾನ ಸಿಕ್ಕಿರುವುದು ಸಾಮಾನ್ಯವಾದ ಕೆಲಸವಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರಿಗೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಬದ್ಧತೆ ಇರುವುದರಿಂದಲೇ ಸಮರ್ಪಕ ಅನುದಾನ ಲಭ್ಯವಾಗಿದೆ ಎಂದರು.
ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕೆಲಸ ಮಾಡಿದವರನ್ನು ಜನರು ಗುರ್ತಿಸುತ್ತಾರೆ. ಸರಕಾರದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಇದರಿಂದ ಪ್ರೇರಣೆಯಾಗಿರುವ ಪ್ರಧಾನಿ ಮೋದಿರವರು ಕೂಡ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಆಶ್ವಾಸನೆ ನೀಡುತ್ತಿದ್ದಾರೆ. ಮುಂದಿನ ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಜನರು ಬೆಂಬಲಿಸಿ ಆಯ್ಕೆ ಮಾಡಲಿದ್ದಾರೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜು, ಕೂಟಗಲ್ ವಿಎಸ್‌ಎಸ್‌ಎನ್ ಅಧ್ಯಕ್ಷ ಅರೇಹಳ್ಳಿ ಗಂಗಾಧರಗೌಡ, ಗ್ರಾಪಂ ಅಧ್ಯಕ್ಷ ನರಸಿಂಹಮೂರ್ತಿ, ಸದಸ್ಯರಾದ ನಂದಿನಿ ನಂದೀಶ್, ಗೋವಿಂದರಾಜು, ಲಕ್ಷ್ಮಿಮುನಿರಾಜು, ಮುಖಂಡರಾದ ಶ್ರೀಧರ್, ಮಂಜುನಾಥ್, ಪ್ರೇಮ್‌ಕುಮಾರ್, ಸಿದ್ಧರಾಮೇಗೌಡ ಮತ್ತಿತರರು ಹಾಜರಿದ್ದರು.15ಕೆಆರ್ ಎಂಎನ್ 1.ಜೆಪಿಜಿ
ಕ್ಯಾಸಾಪುರ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಜಿಪಂ ಮಾಜಿ ಅಧ್ಯಕ್ಷ ಎಚ್.ಎನ್.ಅಶೋಕ್ ಭೂಮಿಪೂಜೆ ನೆರವೇರಿಸಿದರು.