ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಶ್ರೀಮಠದ ಅಭಿವೃದ್ಧಿಗೆ ಭಕ್ತರ ಸಹಕಾರ ಮತ್ತು ಹಿರಿಯ ಶ್ರೀಗಳವರ ಆಶೀರ್ವಾದ, ಅವಿರತ ಪರಿಶ್ರಮವೇ ಕಾರಣವಾಗಿದ್ದು, ನೀವು ದುಡಿದ ಸ್ವಲ್ಪ ಭಾಗವನ್ನು ಸಮಾಜದ ಏಳಿಗೆಗೆ ದುಡಿಯುತ್ತಿರುವ ಮಠಮಾನ್ಯಗಳಿಗೆ ದಾನ ಮಾಡಿ ಮನುಷ್ಯ ಜನ್ಮವನ್ನು ಸಾರ್ಥಕ ಪಡಿಸಿಕೊಂಡು ಭವಿಷ್ಯದ ಬದುಕನ್ನು ಬೆಳಕಾಗಿಸಿಕೊಳ್ಳಬೇಕೆಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಶ್ರೀಗುರು ಸಪ್ತಾಹ ಹಾಗೂ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಕ್ಷೇತ್ರದ ಶ್ರೀ ಶಂಕರೇಶ್ವರ ಸ್ವಾಮಿ ಹಾಗೂ ಶ್ರೀ ರಂಗನಾಥಸ್ವಾಮಿಯವರ ಕೃಪೆ ಹಾಗೂ ಹಿರಿಯ ಗುರುವರೇಣ್ಯರುಗಳ ತಪಸ್ಸು, ಪವಾಡಗಳ ಶಕ್ತಿಯ ಫಲವಾಗಿ ಸುಕ್ಷೇತ್ರ ನಾಡಿನಾದ್ಯಂತ ಹೆಸರುವಾಸಿಯಾಗಿ ಬಡ, ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಅನ್ನದಾಸೋಹವನ್ನು ನಿರಂತರವಾಗಿ ನಡೆಸುತ್ತಿದೆ. ಸುಕ್ಷೇತ್ರದ ಐದನೇ ಶ್ರೀಗಳವರ ದೇವಸ್ಥಾನ ಪ್ರಾರಂಭೋತ್ಸವದಿಂದಲೂ ಅವರ ನೆನಪಿಗಾಗಿ ಶ್ರೀ ಗುರುಸಪ್ತಾಹವನ್ನು ನಡೆಸಿಕೊಂಡು ಬರಲಾಗುತ್ತಿದೆ. ಯುವಪೀಳಿಗೆ ವಿದ್ಯೆ ಜೊತೆ ಶರಣರ, ದಾಸರ, ವಚನಕಾರರ ಜೀವನಾದರ್ಶಗಳನ್ನು ಅಳವಡಿಸಿಕೊಂಡು ಹೆತ್ತವರಿಗೆ, ಗುರು ಹಿರಿಯರಿಗೆ ಗೌರವಾಧಾರ ನೀಡಬೇಕು. ವಯಸ್ಸಾದ ಕಾಲದಲ್ಲಿ ತಂದೆ ತಾಯಿಗಳನ್ನು ಅನಾಥರನ್ನಾಗಿಸದೆ ಅವರ ಬೇಕು ಬೇಡಗಳನ್ನು ಅರಿತು ನಡೆಯಿರಿ. ಮುಂದಿನ ದಿನಗಳಲ್ಲಿ ಶ್ರೀಕ್ಷೇತ್ರದ ದೈವಗಳಾದ ರಂಗ ಶಂಕರರ ಕೃಪಾಶೀರ್ವಾದಿಂದ ಉತ್ತಮ ಮಳೆ ಬೆಳೆಯಾಗಲಿ, ರೈತಾಪಿ ವರ್ಗವು ಶಾಂತಿ ನೆಮ್ಮದಿಯಿಂದ ಜೀವನ ನಡೆಸಲಿದೆ ಎಂದು ಆಶಿಸಿದರು. ಗೊಲ್ಲಹಳ್ಳಿ ಸಿದ್ದಲಿಂಗೇಶ್ವರ ಮಹಾಸಂಸ್ಥಾನ ಮಠದ ಶ್ರೀ ವಿಭವ ವಿದ್ಯಾಶಂಕರದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಗುರುವಿಗೆ ಮಹತ್ವದ ಸ್ಥಾನ ನೀಡಿದ್ದು ಗುರುವಿನ ಮಾರ್ಗದರ್ಶನ ಇಲ್ಲದ್ದಿದ್ದರೆ ಉನ್ನತಿ ಸಾಧ್ಯವಿಲ್ಲ. ಆದ್ದರಿಂದ ಸಮಾಜದ ಅಭಿವೃದ್ಧಿಗೆ ಗುರುಗಳ ಮಾರ್ಗದರ್ಶನಬೇಕಿದೆ. ಸುಕ್ಷೇತ್ರ ಶಕ್ತಿ ಪೀಠವಾಗಿದ್ದು ಗುರುಗಳ ಪವಾಡದ ಶಕ್ತಿ ಮತ್ತು ಕೃಪೆ ಭಕ್ತರ ಮೇಲಿದ್ದು, ಈ ಕ್ಷೇತ್ರ ಜಾತ್ಯಾತೀತ ಮನೋಭಾವನೆ ಹೊಂದಿದೆ ಎಂದರು. ಶಾಸಕ ಕೆ. ಷಡಕ್ಷರಿ ಮಾತನಾಡಿ, ಶ್ರೀಮಠಕ್ಕೆ ಇತಿಹಾಸವಿದ್ದು ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುತ್ತಾ ಸಾವಿರಾರು ಮಕ್ಕಳಿಗೆ ವಿದ್ಯೆಯ ಜೊತೆಗೆ ಅನ್ನದಾನ ಮಾಡುತ್ತಾ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಸರ್ಕಾರ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಇಂತಹ ಮಠಮಾನ್ಯಗಳು ಸರ್ಕಾರದೊಂದಿಗೆ ಕೈಜೋಡಿಸುತ್ತಿರುವುದರಿಂದ ರಾಜ್ಯ ಧಾರ್ಮಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿದೆ. ನಗರ ಮತ್ತು ಗ್ರಾಮೀಣ ಜನರ ಅಭಿವೃದ್ಧಿಯ ದೃಷ್ಟಿಯಲ್ಲಿಟ್ಟುಕೊಂಡು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ ಎಂದರು. ನಿವೃತ್ತ ಉಪನ್ಯಾಸಕ ಪಂಡಿತ್ ತಗಡೂರು ವೀರಭದ್ರಪ್ಪ ಹಾಗೂ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಮಾಜಿ ಸಚಿವ ಬಿ.ಸಿ. ನಾಗೇಶ್, ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ, ಚಿ.ನಾ.ಹಳ್ಳಿ ಶಾಸಕ ಸಿ.ಬಿ. ಸುರೇಶ್‌ಬಾಬು,ಧಗ್ರಾಯೋದ ಸತೀಶ್‌ಸುವರ್ಣ ಮಾತನಾಡಿದರು. ವೇ. ಷಣ್ಮುಖಸ್ವಾಮಿ, ದಾನಿಗಳಾದ ಶಿವಕುಮಾರ್, ಹಳೇ ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಯು.ಕೆ. ಶಿವಪ್ಪ, ಉಂಡಿಗನಾಳು ಬಸವರಾಜು, ಆಡಳಿತಾಧಿಕಾರಿ ಲೋಕೇಶ್, ನಿವೃತ್ತ ಶಿಕ್ಷಕ ಡಿ.ಎಚ್. ಗಂಗಣ್ಣ, ನಿವೃತ್ತ ಪ್ರಾಂಶುಪಾಲ ಶಂಕರಪ್ಪ ಮತ್ತಿತರರಿದ್ದರು.