ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಕಸಿತ ಭಾರತದ ಅಡಿಯಲ್ಲಿ ನಮ್ಮ ದೇಶ 2042 ರವರೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು ಇಂದಿನ ಯುವಪೀಳಿಗೆಗೆ ಒಳ್ಳೆಯ ಶಿಕ್ಷಣ ಪಡೆದು ತಂತ್ರಜ್ಞಾನದಲ್ಲಿ ಸಾಕಷ್ಟು ಸಂಶೋಧನೆಗಳನ್ನು ಮಾಡಬೇಕು ಎಂದು ಐಸಿಎಂಆರ್ ನಿರ್ದೇಶಕ, ವಿಜ್ಞಾನಿ ಸುಬರ್ನಾ ರಾಯ್ ಹೇಳಿದರು.ನಗರದ ಕೆಎಲ್‌ಇ ಜೆಎನ್‌ಎಂಸಿಯ ಜೀರಿಗೆ ಸಭಾಭವನದಲ್ಲಿ ಗುರುವಾರ ಕೆಎಲ್‌ಇ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒರಿಯಂಟೇಷನ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಎಲ್‌ಇ ಸಂಸ್ಥೆಯು ಇತ್ತಿಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದ ಅವಶ್ಯಕತೆಗಳಿಗೆ ಅನುಸಾರವಾಗಿ ಆಧುನಿಕ ಸೌಲಭ್ಯಗಳನ್ನು ಹಾಗೂ ಅತ್ಯಂತ ಪರಿಣಿತ ಶಿಕ್ಷಕ ವೃಂದವನ್ನು ಹೊಂದಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್ ಮತ್ತು ಜೆಇಇನಲ್ಲಿ ಹೆಚ್ಚು ರ‍್ಯಾಂಕ್ ಪಡೆದು ಸಂಸ್ಥೆಯ ಜತೆಗೆ ದೇಶದ ಕೀರ್ತಿಯನ್ನು ಹೆಚ್ಚಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶಿಕ್ಷಕರ ಜೊತೆಗೆ ಪಾಲಕರ ಪಾತ್ರವು ಕೂಡ ಪ್ರಮುಖವಾದದ್ದು. ವಿಜ್ಞಾನ ವಿಭಾಗದಲ್ಲಿ ಅಷ್ಟೇ ಅಲ್ಲದೆ, ವಾಣಿಜ್ಯ ವಿಭಾಗದ ಸಂಬಂಧಿಸಿದ ಕ್ಷೇತ್ರಗಳಲ್ಲಿಯೂ ಕೂಡ ವಿಫುಲ ಅವಕಾಶಗಳಿವೆ. ಪೋಷಕರು ತಮ್ಮ ಮಕ್ಕಳನ್ನು ಇತರ ವಿದ್ಯಾರ್ಥಿಗಳಿಗೆ ಹೋಲಿಸಿ ಕಲಿಕೆಯ ಮೇಲೆ ಹೆಚ್ಚಿನ ಒತ್ತಡ ಹಾಕಬಾರದು ಎಂದು ಸಲಹೆ ನೀಡಿದರು.ಪ್ರಾಚಾರ್ಯ ವೇಣುಗೋಪಾಲ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀಧರ ಲಕ್ಕನ್ನವರ ಹಾಗೂ ರಜನಿ ಅಥಣಿಮಠ ನಿರೂಪಿಸಿದರು. ಕಲ್ಯಾಣಿ ಮುಚ್ಚಂಡಿ ವಂದಿಸಿದರು.