ಸಾರಾಂಶ
ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ಬಿಜೆಪಿ ಜೆಡಿಎಸ್ ಹುನ್ನಾರ ಕೈಗೂಡಲು ಅಹಿಂದ ಮುಖಂಡರು ಎಂದಿಗೂ ಅವಕಾಶ ನೀಡುವುದಿಲ್ಲ. ಯಾವ ಹಂತದ ಹೋರಾಟಕ್ಕೂ ಸಿದ್ಧ ಎಂದು ಕಾಂಗ್ರೆಸ್ ಮುಖಂಡ ಕೆಂಚಮಾರಯ್ಯ ತಿಳಿಸಿದ್ದಾರೆ
ತುಮಕೂರು: ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ಬಿಜೆಪಿ ಜೆಡಿಎಸ್ ಹುನ್ನಾರ ಕೈಗೂಡಲು ಅಹಿಂದ ಮುಖಂಡರು ಎಂದಿಗೂ ಅವಕಾಶ ನೀಡುವುದಿಲ್ಲ. ಯಾವ ಹಂತದ ಹೋರಾಟಕ್ಕೂ ಸಿದ್ಧ ಎಂದು ಕಾಂಗ್ರೆಸ್ ಮುಖಂಡ ಕೆಂಚಮಾರಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ 45 ವರ್ಷಗಳ ರಾಜಕೀಯ ಜೀವನದಲ್ಲಿ ಕಳಂಕ ರಹಿತ ಅಧಿಕಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಡಾ ಹಗರಣದ ಕಪ್ಪು ಚುಕ್ಕೆ ಇಟ್ಟು ರಾಜಕೀಯ ಜೀವನಕ್ಕೆ ಇತಿಶ್ರೀ ಹಾಡಲು ಹೊರಟಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹುನ್ನಾರ ಕೈಗೂಡುವುದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ.
ಜೆಡಿಎಸ್ ಬಿಜೆಪಿ ಪದೇ ಪದೇ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿದರೆ ಸಮಸ್ತ ಅಹಿಂದ ವರ್ಗ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದರು. ಗೊಲ್ಲ ಸಮುದಾಯದ ಚಿಕ್ಕರಾಜು ಮಾತನಾಡಿ, ತಮ್ಮ ಇಡೀ ರಾಜಕೀಯ ಜೀವನದಲ್ಲಿ ಕಿಚನ್ ಕ್ಯಾಬಿನೇಟ್ ಗೆ ಅವಕಾಶ ನೀಡದೆ, ಸಾರ್ವಜನಿಕವಾಗಿ ಕುಟುಂಬಸ್ಥರು ಅಧಿಕಾರದಲ್ಲಿ ಮೂಗು ತೂರಿಸಿದಂತೆ ನೋಡಿಕೊಂಡು ಕ್ಲೀನ್ ಇಮೇಜ್ ಹೊಂದಿದ್ದ ಸಿದ್ದರಾಮಯ್ಯ ಅವರ ಮೇಲೆ ರಾಜಕೀಯ ದ್ವೇಷದಿಂದ ಮುಡಾ ಹಗರಣವನ್ನು ಮುಂದು ಮಾಡಿ, ರಾಜಕೀಯವಾಗಿ ಮುಗಿಸಲು ಬಿಜೆಪಿ, ಜೆಡಿಎಸ್ ಮುಂದಾಗಿವೆ ಎಂದರು.
ಬಡವರಿಗೆ,ದೀನ ದಲಿತರಿಗೆ, ಹಿಂದುಳಿದ ಸಮುದಾಯಗಳ ಜನರಿಗೆ ಶಕ್ತಿ ತುಂಬುವ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ ಪರಿಣಾಮ ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ಸಹಿಸದೆ ಇಂತಹ ದುಷ್ಕತ್ಯಕ್ಕೆ ಕೈ ಹಾಕಿವೆ. ಕಾನೂನು ಹೋರಾಟದ ಜೊತೆ ಜೊತೆಗೆ ಸಿದ್ದರಾಮಯ್ಯ ಅವರಿಗೆ ನೈತಿಕವಾಗಿ ಬಲ ತುಂಬುವ ಕೆಲಸವನ್ನು ನಾಡಿನ ಎಲ್ಲಾ ಶೋಷಿತ ಸಮುದಾಯಗಳು ಒಗ್ಗೂಡಿ ಮಾಡಲಿವೆ ಎಂದರು.
ದಲಿತ ಮುಖಂಡರಾದ ನರಸೀಯಪ್ಪ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿ 2013-18ರವರೆಗೆ ಮತ್ತು 2023 ರಿಂದ ಇದುವರೆಗೂ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಶೂಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ವಿದ್ಯಾನಿಧಿ ಯೋಜನೆಗಳು ಅತಿ ಹೆಚ್ಚು ಬಡವರನ್ನು ತಲುಪಿವೆ. ಇದರಿಂದ ಸಿದ್ದರಾಮಯ್ಯ ಅವರನ್ನು ಜನರು ಆರಾಧಿಸುತ್ತಿ ದ್ದಾರೆ. ಇದರಿಂದ ನಮ್ಮ ಆಟ ಇನ್ನು ಮುಂದೆ ನಡೆಯದು ಎಂಬುದನ್ನು ಅರಿತು ಈ ರೀತಿಯ ಕುತಂತ್ರ ಮಾಡಿ ಅಧಿಕಾರದಿಂದ ಕೆಳಗೆ ಇಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ನಡೆಸಿವೆ ಎಂದರು.
ಕುರುಬ ಸಂಘದ ಜಿಲ್ಲಾ ಕಾರ್ಯದರ್ಶಿ ಕುಮಾರಸ್ವಾಮಿ ಮಾತನಾಡಿ, ಎರಡು ಬಾರಿ ಮುಖ್ಯಮಂತ್ರಿಯಾಗಿ ೧೫ ಬಾರಿ ರಾಜ್ಯದ ಬಜೆಟ್ ಮಂಡಿಸಿ, ಎಲ್ಲಾ ವಲಯಗಳಲ್ಲಿಯೂ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿ ಇರುವಂತೆ ನೋಡಿಕೊಂಡರು. ಅಲ್ಲದೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಲ್ಲಾ ಸಮುದಾಯಗಳ ಮಠ ಮಾನ್ಯಗಳಿಗೆ ಅನುದಾನ ನೀಡಿ ಅವರು ಸಹ ಸಮಾಜ ಸೇವೆ ತೊಡಗಿಸಿದ ಕೀರ್ತಿ ಸಿದ್ದರಾಮಯ್ಯ ಅವರದು. ಇಂತಹ ವ್ಯಕ್ತಿಯ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ಮತ್ತು ಕೇಂದ್ರ ಸರಕಾರ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ನಿಜಕ್ಕೂ ಸಹಿಸಲಾಗದು. ಎಲ್ಲಾ ಅಹಿಂದ ವರ್ಗಗಳ ಜೊತೆ ಸೇರಿ ಬೃಹತ್ ಹೋರಾಟ ರೂಪಿಸಲಿದೆ ಎಂದರು.
ಡಾ.ಅರುಂಧತಿ ಮಾತನಾಡಿ, ಮಹಾಭಾರತದಲ್ಲಿ ಶೂದ್ರ ಶಂಭೂಕ ಮತ್ತು ಏಕಲವ್ಯನ ಕಥೆಯ ರೀತಿ ಅಹಿಂದ ವರ್ಗವನ್ನು ಅಧಿಕಾರದಿಂದ ದೂರು ಇಡುವ ಪ್ರಯತ್ನ ಇದಾಗಿದೆ. ಇಂದು ಅಹಿಂದ ವರ್ಗ ಎಚ್ಚೆತ್ತಿದೆ. ಪುರಾಣದಲ್ಲಿ ಆದ ತಪ್ಪು, ಪ್ರಜಾಪ್ರಭುತ್ವದಲ್ಲಿ ಮರುಕಳುಹಿಸಲು ಅವಕಾಶ ನೀಡುವುದಿಲ್ಲ. ಸಿದ್ದರಾಮಯ್ಯ ಪರವಾಗಿ ಎಲ್ಲಾ ಶೋಷಿತ ಸಮುದಾಯಗಳು ನಿಲ್ಲಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಕೆಂಪರಾಜು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬೂರು ಶ್ರೀನಿವಾಸಮೂರ್ತಿ, ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷರಾದ ಕುಮಾರಸ್ವಾಮಿ , ದಲಿತ ಮುಖಂಡರಾದ ನರಸೀಯಪ್ಪ, ತಿಗಳ ಸಮುದಾಯದ ಮುಖಂಡರಾದ ರೇವಣಸಿದ್ದಯ್ಯ , ಉದ್ದಿಮೆದಾರರ ಡಿ.ಕೆ. ವೆಂಕಟೇಶ್, ನಿವೃತ್ತ ಅಧಿಕಾರಿ ಡಾ.ವೈ.ಕೆ. ಬಾಲಕೃಷ್ಣಪ್ಪ, ಡ್ಯಾಗೇರಹಳ್ಳಿ ವಿರೂಪಾಕ್ಷ, ವಕೀಲರಾದ ಸುನಿಲ್, ಕೆಂಪಣ್ಣ,ಜಯಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶೋಷಿತ ಸಮುದಾಯಗಳ ಒಕ್ಕೂಟದ ತುಮಕೂರು ಜಿಲ್ಲಾ ಸಂಚಾಲಕ ಕೆಂಪರಾಜು ಮಾತನಾಡಿ, ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಸಿದ್ದರಾಮಯ್ಯ ಪರ ನಿಲ್ಲಲಿದೆ. ಇದೇ ರೀತಿಯ ಪ್ರಯತ್ನವನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಮುಖಂಡರು ಎಚ್ಚರಿಕೆ ನೀಡಿದರು.