ಬರ ಪರಿಹಾರ ಸಾಲಕ್ಕೆ ಜಮೆ ಮಾಡಬೇಡಿ

| Published : May 19 2024, 01:51 AM IST

ಸಾರಾಂಶ

ಕರ್ನಾಟಕ ಸರ್ಕಾರ ಜಿಲ್ಲೆಯ ರೈತರಿಗೆ ಬರ ಪರಿಹಾರವಾಗಿ 360.10 ಕೋಟಿ ಹಣ ಬಿಡುಗಡೆ ಮಾಡಿದೆ. ಇದು ರೈತರ ಬರ ಪರಿಹಾರ ಹಣವಾಗಿರುವುದರಿಂದ ಯಾವುದೇ ಕಾರಣಕ್ಕೂ ರೈತರ ಸಾಲಗಳಿಗೆ ಈ ಹಣವನ್ನು ಕಡಿತಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ಸರ್ಕಾರ ಜಿಲ್ಲೆಯ ರೈತರಿಗೆ ಬರ ಪರಿಹಾರವಾಗಿ 360.10 ಕೋಟಿ ಹಣ ಬಿಡುಗಡೆ ಮಾಡಿದೆ. ಇದು ರೈತರ ಬರ ಪರಿಹಾರ ಹಣವಾಗಿರುವುದರಿಂದ ಯಾವುದೇ ಕಾರಣಕ್ಕೂ ರೈತರ ಸಾಲಗಳಿಗೆ ಈ ಹಣವನ್ನು ಕಡಿತಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದ್ದಾರೆ.

ಈ ಕುರಿತು ಲಿಖಿತ ಪತ್ರ ಬರೆದು, ರಾಜ್ಯ ಸರ್ಕಾರದಿಂದ ನೇರವಾಗಿ ರೈತರ ಖಾತೆಗಳಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಿದೆ. ಇದನ್ನು ರೈತರ ಸಾಲದ ಖಾತೆಗೆ ಜಮೆ ಮಾಡಿಕೊಳ್ಳಬಾರದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ವಿಜಯಪುರ ಸಹಕಾರ ಸಂಘಗಳ ಇಲಾಖೆಯ ಉಪ ನಿಬಂಧಕರಿಗೆ ಸೂಚಿಸಿ, ವಿವಿಧ ಬ್ಯಾಂಕುಗಳಿಗೆ ನಿರ್ದೇಶನ ನೀಡುವಂತೆ ತಿಳಿಸಿದ್ದಾರೆ. ಈಗಾಗಲೇ ಮುಂಗಾರು ಆರಂಭವಾಗುತ್ತಿರುವುದರಿಂದ ಬರ ಪರಿಹಾರದ ಹಣ ರೈತರು ಬೀಜ, ರಸಗೊಬ್ಬರ, ಹೊಲದ ಉಳುಮೆ, ಬಿತ್ತನೆಗೆ ಸಿದ್ಧಮಾಡಿಕೊಳ್ಳಲು ಸಹಾಯವಾಗುತ್ತದೆ. ಹಾಗಾಗಿ ಬ್ಯಾಂಕ್‌ಗಳು ರೈತರಿಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

----ಬಾಕ್ಸ್

ಬರ ಪರಿಹಾರ ಸಾಲಕ್ಕೆ ಮರುಪಾವತಿ: ಲಿಂಗದಳ್ಳಿ ಖಂಡನೆ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಕಳೆದ ವರ್ಷ ಮುಂಗಾರು ವಿಫಲವಾಗಿ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿತ್ತು. ಮಳೆ ಬೆಳೆ ಇಲ್ಲದೇ ಬರಗಾಲದಿಂದ ರಾಜ್ಯದ ಜನತೆ ರೋಸಿ ಹೋಗಿದ್ದು, ಕರ್ನಾಟಕ ಸರ್ಕಾರದ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರುಪಾಯಿ ಬರ ಪರಿಹಾರ ಬಿಡುಗಡೆ ಮಾಡಿದೆ. ಇತ್ತ ರೈತರ ಖಾತೆಗೆ ಬರ ಪರಿಹಾರ ಬಂದರು ಅದು ರೈತರ ಕೈ ಸೇರದೆ ಸಾಲ ಮರುಪಾವತಿಗೆ ಬಳಸುತ್ತಿರುವ ಬ್ಯಾಂಕುಗಳ ನಡೆಯನ್ನು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಅವರು ತೀವ್ರವಾಗಿ ಖಂಡಿಸಿದ್ದಾರೆ.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದ ರೈತರು ತೀವ್ರ ಬರ ಮತ್ತು ಬೆಳೆ ಹಾನಿ ಎದುರಿಸುತ್ತಿದ್ದರೂ ಬ್ಯಾಂಕ್‌ಗಳು ತಮ್ಮ ಪರಿಹಾರ ಹಣವನ್ನು ಸಾಲ ಮರುಪಾವತಿಗೆ ಬಳಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಬೆಳೆಹಾನಿಯಾದ ರೈತರ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ. ಜಿಲ್ಲೆಯ 2,50,063 ರೈತರಿಗೆ ₹360.10 ಕೋಟಿ ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ಜಮೆ ಆಗಿದೆ. ಬರ ಪರಿಹಾರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕುಗಳ ವರ್ತನೆ ನಿಜಕ್ಕೂ ಖಂಡನೀಯ. ಜಿಲ್ಲಾಧಿಕಾರಿಗಳು ಲೀಡ್ ಬ್ಯಾಂಕಿಗೆ ಪತ್ರ ಬರೆದು ರೈತರ ಪರಿಹಾರ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲಕ್ಕೆ ಜಮಾ ತೆಗೆದುಕೊಳ್ಳಬಾರದು ಎಂದು ಆದೇಶ ಹೊರಡಿಸಿದ್ದರು. ರೈತರಿಗೆ ಹಣ ನೀಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಸೀರ ಅಹ್ಮದ್ ಬೇಪಾರಿ, ಬಾಳಸಾಹೇಬಗೌಡ ಪಾಟೀಲ,ಪ ಪಂ ಸದಸ್ಯರಾದ ಡಾ. ಗುರುರಾಜ ಗಡೆದ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು,ಪ.ಪಂ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.