ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಯಾವುದೇ ಅರಣ್ಯ ಭೂಮಿ ಒತ್ತುವರಿದಾರರನ್ನು ತೆರವು ಗೊಳಿಸಬಾರದು ಮತ್ತು ನೋಟಿಸ್ ನೀಡಬಾರದೆಂದು ಸಂಸದ ಬಿ.ವೈ.ರಾಘವೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಜಿಲ್ಲೆಗೆ ಮಂಜೂರಾದ ವಿವಿಧ 13 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನದಲ್ಲಾಗುತ್ತಿರುವ ವಿಳಂಬ, ಭೂ ಸ್ವಾಧೀನ ಮತ್ತು ಅರಣ್ಯ ಭೂಮಿ ಬಿಡುಗಡೆಯ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿ ಜಿಲ್ಲೆಯಲ್ಲಿ ಸಾಗುವಳಿದಾರರ ಅರ್ಜಿಗಳು ಬಾಕಿ ಇವೆ. ಅವುಗಳು ವಿಲೇವಾರಿಯಾಗುವ ತನಕ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಸಮುದಾಯದ ಯಾವ ರೈತರಿಗೂ ತೆರವು ಮತ್ತು ನೋಟಿಸ್ ಕೊಡುವ ತೊಂದರೆ ನೀಡಬಾರದು. ವಿವಿಧ ಯೋಜನೆಗಳಲ್ಲಿ ಮುಳುಗಡೆಯಾದ ಸಂತ್ರಸ್ತರ ಭೂಮಿಯನ್ನು ಯಾವುದೇ ಕಾರಣಕ್ಕೂ ತೆರವು ಮಾಡಬಾರದು ಎಂದು ತಿಳಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರು ಸಾಗುವಳಿ ಮಾಡುತ್ತಿರುವ ಭೂಮಿಯು ಡಿನೋಟಿಫೈ ಆಗಿಲ್ಲ. ಪ್ರಕರಣ ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ಹಂತದಲ್ಲಿವೆ. ಈ ಯಾವುದೇ ರೈತರನ್ನು ಒಕ್ಕಲೆಬ್ಬಿಸ ಬಾರದು. 1978ಕ್ಕಿಂತ ಮುನ್ನ ಸಾಗುವಳಿ ಮಾಡಿಕೊಂಡಿರು ರೈತರಿಗೂ ತೊಂದರೆ ನೀಡುವಂತಿಲ್ಲ ಎಂದು ಸಂಸದರು ಸೂಚನೆ ನೀಡಿದರು.ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂ ಸ್ವಾಧೀನದಲ್ಲಾಗುತ್ತಿರುವ ಸಮಸ್ಯೆಗಳ ಹಾಗೂ ಅರಣ್ಯ ಭೂಮಿ ಬಿಡುಗಡೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಶೀಘ್ರ ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಅರಣ್ಯ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಕಾಮಗಾರಿಗಳಿಗೆ ಸಂಬಂಧಿಸಿದ ಅರಣ್ಯ ಬಿಡುಗಡೆಗೆ ಅಗತ್ಯವಿರುವ ಸಿ.ಎ ಭೂಮಿ ಬಿಡುಗಡೆಯ ಬಗ್ಗೆ ಎನ್.ಒ.ಸಿ ಪತ್ರವನ್ನು 7 ದಿನದೊಳಗೆ ನೀಡುವುದಾಗಿ ತಿಳಿಸಿದರು.ಕಾಮಗಾರಿಗೆ ಅಗತ್ಯವಿರುವ ಹೈಟೆನ್‌ಷನ್ ಟವರ್ ಮತ್ತು ವಿದ್ಯುತ್ ಕಂಬಗಳನ್ನು 15 ದಿನದೊಳಗೆ ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸಲು ಕೆ.ಪಿ.ಟಿ.ಸಿ.ಎಲ್ ಕಾರ್ಯಪಾಲಕ ಎಂಜಿನಿಯರ್ ಗೆ ಸಂಸದ ಬಿ.ವೈ.ರಾಘವೇಂದ್ರ ಸೂಚಿದರು.
ನಗರದ ಬೈಪಾಸ್ ರಸ್ತೆಯಲ್ಲಿ ಕೈಬಿಡಲಾಗಿದ್ದ 5.38 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಸೂಕ್ತ ಪಥ ನಕ್ಷೆಯನ್ನು 15 ದಿನದೊಳಗೆ ತಯಾರಿಸಿ ಮಂಜೂರಾತಿ ಪಡೆದು ಕಾಮಗಾರಿ ಪ್ರಾರಂಭಿಸಲುಕ್ರಮವಹಿಸಬೇಕು. ಶಿವಮೊಗ್ಗ ವಿಶೇಷ ಭೂಸ್ವಾಧೀನಾಧಿಕಾರಿ ಸಲ್ಲಿಸಿರುವ 20 ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸೂಚಿಸಿದರು.
ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಅರಣ್ಯ ಸಂರಕ್ಷಣಾಧಿಕಾರಿಗಳು, ವಿವಿಧ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿಗಳು ಹಾಜರಿದ್ದರು.