ಸ್ವಾರ್ಥ ಸಾಧನೆಗಾಗಿ ದುಷ್ಟ ಕಾರ್ಯಗಳ ಮಾಡದಿರಿ: ಕೇದಾರ ಶ್ರೀ

| Published : Mar 29 2024, 12:52 AM IST / Updated: Mar 29 2024, 12:53 AM IST

ಸ್ವಾರ್ಥ ಸಾಧನೆಗಾಗಿ ದುಷ್ಟ ಕಾರ್ಯಗಳ ಮಾಡದಿರಿ: ಕೇದಾರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ವಜ್ರ ವೈಢೂರ್ಯಗಳಿಂದ ಸಿಂಗರಿಸಿಕೊಳ್ಳುವ ಶರೀರವು ಮಾನವನ ಸ್ವಂತದ್ದಲ್ಲ. ಸಾವಿನ ನಂತರ ದೇಹ ನಶಿಸುತ್ತದೆ ಆದರೆ ಆತ್ಮಕ್ಕೆ ಸಾವಿಲ್ಲ. ಜೀವನದಲ್ಲಿ ಮಾಡುವ ಪಾಪ ಪುಣ್ಯಗಳ ಫಲಗಳು ಜೀವಿತಾವಧಿವರೆಗೂ ಇರುತ್ತವೆ. ಸ್ವಾರ್ಥ ಸಾಧನೆಗಾಗಿ ದುಷ್ಟ ಕಾರ್ಯಗಳ ಮಾಡಿದವನ ದೇಹಗಳ ವಿಷ ಜಂತುಗಳು ಕೂಡ ಮುಟ್ಟಲು ಹಿಂದೇಟು ಹಾಕುತ್ತವೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಕರ್ಮವನ್ನು ತ್ಯಾಗ ಮಾಡಿ, ಧರ್ಮ ಪಾಲನೆ ಮಾಡುವುದೇ ಮುಕ್ತಿ ಪಡೆಯುವ ಮಾರ್ಗ ಎಂದು ಕೇದಾರದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಅರಕೆರೆಯಲ್ಲಿ ವಿರಕ್ತ ಮಠದ ಕಳಸಾರೋಹಣ ಹಾಗೂ ದಾಸೋಹ ಮಂದಿರ ಉದ್ಘಾಟನೆ ಅಂಗವಾಗಿ ಹಮ್ಮಿಕೊಂಡಿದ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ ವಜ್ರ ವೈಢೂರ್ಯಗಳಿಂದ ಸಿಂಗರಿಸಿಕೊಳ್ಳುವ ಶರೀರವು ಮಾನವನ ಸ್ವಂತದ್ದಲ್ಲ. ಸಾವಿನ ನಂತರ ದೇಹ ನಶಿಸುತ್ತದೆ ಆದರೆ ಆತ್ಮಕ್ಕೆ ಸಾವಿಲ್ಲ. ಜೀವನದಲ್ಲಿ ಮಾಡುವ ಪಾಪ ಪುಣ್ಯಗಳ ಫಲಗಳು ಜೀವಿತಾವಧಿವರೆಗೂ ಇರುತ್ತವೆ. ಸ್ವಾರ್ಥ ಸಾಧನೆಗಾಗಿ ದುಷ್ಟ ಕಾರ್ಯಗಳ ಮಾಡಿದವನ ದೇಹಗಳ ವಿಷ ಜಂತುಗಳು ಕೂಡ ಮುಟ್ಟಲು ಹಿಂದೇಟು ಹಾಕುತ್ತವೆ. ತಂದೆ, ತಾಯಿಯರ ಸೇವೆ ಮಾಡಿ ಗುರು ಹಿರಿಯರಿಗೆ ಗೌರವ ಕೊಡುವುದು ರೂಢಿಸಿಕೊಳ್ಳಬೇಕು. ನಾನು ನನ್ನದು ಎಂಬ ಗರ್ವ ಕೈ ಬಿಟ್ಟು ಎಲ್ಲವೂ ಭಗವಂತನ ಕೊಡುಗೆ ಎಂಬುದು ಮರೆಯಬಾರದು. ಸಮಾಜದ ಒಳಿತಿಗಾಗಿ ಶಾಂತಿ ಮಂತ್ರ ಜಪಿಸುವುದು ಮರೆಯಬಾರದು. ಧರ್ಮ ಮಾರ್ಗದಲ್ಲಿ ನಡೆದು ಬದುಕು ಕಟ್ಟಿಕೊಳ್ಳಬೇಕು. ಹುಟ್ಟು ಸಾವಿನ ಮಧ್ಯೆ ನಾವು ಮಾಡುವ ಪವಿತ್ರ ಪುಣ್ಯದ ಕೆಲಸಗಳು ಕೊನೆವರೆಗೂ ಕಾಯುತ್ತವೆ ಎಂದರು.

ಮಾನವ ಜನ್ಮ ವ್ಯರ್ಥವಾಗದಿರಲಿ:

ಅನೇಕ ಜನ್ಮಗಳಲ್ಲಿ ಮಾಡಿದ ಪುಣ್ಯದ ಫಲಗಳಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಪಾಪಾದಿ ಕಾರ್ಯಗಳಿಂದ ಮಾನವ ಜನ್ಮ ವ್ಯರ್ಥವಾಗಬಾರದು. ಆಧುನಿಕತೆ ಭರಾಟೆಗೆ ಸಿಲುಕಿ ಹೈಬ್ರಿಡ್ ಆಹಾರ ಸೇವನೆಯಿಂದ ಮನುಷ್ಯನ ಆಯುಷ್ಯ ಅಲ್ಪವಾಗುತ್ತಿದೆ. 6೦ವರ್ಷ ಆಯುಷ್ಯದಲ್ಲಿ 3೦ ವರ್ಷ ನಿದ್ದೆಯಲ್ಲಿ ಕಳೆಯುವ ವ್ಯಕ್ತಿ ನಿತ್ಯ 5 ನಿಮಿಷ ಭಗವಂತನ ನಾಮ ಸ್ಮರಣೆಗೆ ಮೀಸಲಿರಿಸಿದರೆ ಆಯುಷ್ಯ ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಎಲ್ಲಿ ಭಾವನೆ ಇರುತ್ತದೆಯೊ ಅಲ್ಲಿ ಭಗವಂತ ನೆಲೆಸಿರುತ್ತಾನೆ. ಪ್ರತಿಯೊಬ್ಬರು ಧಾರ್ಮಿಕ ಸಮಾರಂಭ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವಗಳ ಪ್ರಾಮುಖ್ಯತೆ ತಿಳಿಯಬೇಕು ಎಂದರು.

ಕಣ್ಣುಕುಪ್ಪೆ ಮಠದ ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ ಪ್ರಾರಂಭದ ಕರ್ಮವೇ ಮಾನವ ಸಕಲ ದುಖಃಗಳಿಗೂ ಕಾರಣ. ತೀರ್ಥಯಾತ್ರೆ ಮಾಡಿ 12 ಜ್ಯೋತಿರ್ಲಿಂಗ ದರ್ಶನ ಮಾಡಿದರೆ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಪಾಪ ಕರ್ಮಗಳ ವಿಮೋಚನೆಗಳಿಗೆ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿ ಧರ್ಮ ಕಾರ್ಯಗಳ ನಡೆಸಿ ಪಾಪ ಕರ್ಮಗಳ ದೂರ ಮಾಡಿಕೊಳ್ಳಬಹುದು ಎಂದರು.

ಅರಕೆರೆ ವಿರಕ್ತ ಮಠದ ಕರಿಸಿದ್ದೇಶ್ವರ ಸ್ವಾಮೀಜಿ, ಕೊಟ್ಟೂರು ಕಟ್ಟಿಮನೆ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರಿನ ಶ್ರೀಪತಿ ಪಂಡಿತರಾಧ್ಯ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಕೇದಾರ ಶಿವ ಶಾಂತವೀರ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಪ್ರಮುಖರಾದ ಹಾಲೇಂದ್ರ ಪಾಟೀಲ್, ಕೂಡ್ಲಿಗೆರೆ ಹಾಲೇಶ್, ಕಾಂತರಾಜ್, ಎಂ.ಪಾಲಾಕ್ಷಪ್ಪ, ಬೈರೇಶ್‌ ಕುಮಾರ್, ಕೆ.ಪಿ.ಕಿರಣ್ ಇತರರಿದ್ದರು.