ಬಲವಂತವಾಗಿ ಬೆಳೆಸಾಲ ವಸೂಲಿ ಮಾಡಬೇಡಿ

| Published : Nov 04 2023, 12:31 AM IST

ಸಾರಾಂಶ

ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರ ಸಾಲ ವಸೂಲಿಗೆ ಒತ್ತಡ ಹಾಕಬೇಡಿ. ಎಲ್ಲವನ್ನೂ ಕಾನೂನಿನ ಆಯಾಮದಲ್ಲಿ ನೋಡಬೇಡಿ, ರೈತರೊಂದಿಗೆ ಸೂಕ್ಷ್ಮವಾಗಿ ನಡೆದುಕೊಳ್ಳಿ, ಮಾನವೀಯ ನೆಲೆಯಲ್ಲಿ ವ್ಯವಹರಿಸಿ ಎಂದು ಬ್ಯಾಂಕರ್ಸ್‌ಗಳಿಗೆ ಹಾವೇರಿ ಜಿಪಂ ಸಿಇಒ ಅಕ್ಷಯ ಶ್ರೀಧರ ಸಲಹೆ ನೀಡಿದರು.

ಹಾವೇರಿ: ಜಿಲ್ಲೆಯಲ್ಲಿ ತೀವ್ರ ಬರಗಾಲ ಇದೆ, ಸರ್ಕಾರ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ರೈತರ ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಬ್ಯಾಂಕ್‌ಗಳು ಬಲವಂತವಾಗಿ ರೈತರ ಸಾಲ ವಸೂಲಿಯಾಗಲಿ, ಹರಾಜು ಪ್ರಕ್ರಿಯೆ ಕೈಗೊಳ್ಳದಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್ ಬ್ಯಾಂಕರ್ಸ್‌ಗಳಿಗೆ ತಾಕೀತು ಮಾಡಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲೆಯ ಬ್ಯಾಂಕುಗಳ ತ್ರೈಮಾಸಿಕ ಸಭೆ ಹಾಗೂ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪರಿಶೀಲನೆ ನಡೆಸಿದ ಅವರು, ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರ ಸಾಲ ವಸೂಲಿಗೆ ಒತ್ತಡ ಹಾಕಬೇಡಿ. ಎಲ್ಲವನ್ನೂ ಕಾನೂನಿನ ಆಯಾಮದಲ್ಲಿ ನೋಡಬೇಡಿ, ರೈತರೊಂದಿಗೆ ಸೂಕ್ಷ್ಮವಾಗಿ ನಡೆದುಕೊಳ್ಳಿ, ಮಾನವೀಯ ನೆಲೆಯಲ್ಲಿ ವ್ಯವಹರಿಸಿ ಎಂದು ಬ್ಯಾಂಕರ್ಸ್‌ಗಳಿಗೆ ಸಲಹೆ ನೀಡಿದರು.

ಸಾಲದ ಹಣಕ್ಕೆ ಜಮೆ ಬೇಡ: ಬೆಳೆ ಪರಿಹಾರ, ಬೆಳೆ ವಿಮಾ ಪರಿಹಾರ ಹಣ ರೈತರ ಖಾತೆಗೆ ಜಮೆಯಾದಾಗ ಸಾಲದ ಹಣಕ್ಕೆ ಬಲವಂತವಾಗಿ ಜಮೆ ಮಾಡಿಕೊಳ್ಳಬೇಡಿ. ಆದಾಗ್ಯೂ ಖಾತೆದಾರ ರೈತನೊಂದಿಗೆ ಚರ್ಚಿಸಿ, ಆ ರೈತ ಒಪ್ಪಿದರೆ ಭಾಗಶಃ ಹಣ ಮಾತ್ರ ಸಾಲಕ್ಕೆ ಜಮೆ ಮಾಡಿಕೊಳ್ಳಬಹುದು. ರೈತ ಒಪ್ಪದಿದ್ದರೆ ಪರಿಹಾರ ಹಣದಲ್ಲಿ ಸಾಲದ ಕಂತು ಕಟಾವು ಮಾಡಿಕೊಳ್ಳದಂತೆ, ಅಲ್ಲದೆ ಸಾಮಾಜಿಕ ಭದ್ರತಾ ಯೋಜನೆಯಡಿ ಜಮೆಯಾಗುವ ಪೆನ್‌ಶನ್ ಹಣವನ್ನು ಫಲಾನುಭವಿಗಳ ಸಾಲದ ಬಾಕಿಗೆ ಜಮೆ ಮಾಡಿಕೊಳ್ಳಬಾರದು ಎಂದು ಬ್ಯಾಂಕಿನ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಆದೇಶ, ರಿಸರ್ವ್‌ ಬ್ಯಾಂಕ್ ಆಪ್ ಇಂಡಿಯಾದ ಮಾರ್ಗಸೂಚಿಗಳಿದ್ದಾಗ್ಯೂ ಸಾಲ ವಸೂಲಾತಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಜಮೆಯಾದ ಹಣವನ್ನು ಅವರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ದೂರುಗಳು ಬರುತ್ತಿವೆ. ಬ್ಯಾಂಕುಗಳ ಈ ನಡೆ ಆಕ್ಷೇಪಾರ್ಹ. ಇಂತಹ ಪ್ರಕರಣಗಳು ಮರುಕಳಿಸಬಾರದು. ಪುನಃ ಇಂತಹ ದೂರುಗಳು ಬಂದರೆ ಬ್ಯಾಂಕುಗಳ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ. ರೈತರಿಗೆ ಕೃಷಿ ಸಾಲ, ಕೃಷಿ ಪೂರಕ ಸಾಲ ನೀಡಿಕೆ ಮತ್ತು ಸಾಲ ವಸೂಲಾತಿಯಲ್ಲಿ ಆರ್‌ಬಿಐ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ಸಾಲ ನೀಡಿ: ಬ್ಯಾಂಕುಗಳು ರೈತರಿಗೆ ಸಾಲ ನೀಡುತ್ತಿಲ್ಲ ಎಂಬ ದೂರುಗಳಿವೆ. ಜಿಲ್ಲೆಯ ಅರ್ಹ ರೈತರಿಗೆ ಕಿಸಾನ್ ಕ್ರೆಡಿಟ್ ಸಾಲ ಕಡ್ಡಾಯವಾಗಿ ನೀಡಬೇಕು. ಬರಗಾಲ ಇದ್ದರೂ ನೀರಾವರಿ ಸೌಕರ್ಯ ಇರುವವರಿಗೆ ಬೆಳೆಸಾಲ ನೀಡಲು ತೊಂದರೆ ಏನು? ಅಲ್ಲದೇ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಒಳಗೊಂಡಂತೆ ಕೃಷಿಪೂರಕ ಚಟುವಟಿಕೆಗೆ ಸಾಲ ನೀಡುವಂತೆ ಬ್ಯಾಂಕರ್ಸ್‌ಗಳಿಗೆ ಸೂಚನೆ ನೀಡಿದರು.

ಕೆಸಿಸಿ ಕಾರ್ಡ್ ನೀಡಲು ಸೂಚನೆ: ಗ್ರಾಮೀಣ ಮಟ್ಟದಲ್ಲಿ ಅಭಿಯಾನದ ಮೋಡ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಬಾಕಿ ಉಳಿದಿರುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಬೇಕು. ಖಾತೆಗೆ ಆಧಾರ್ ಜೋಡಣೆ, ಇ-ಕೆವೈಸಿಗೂ ಕ್ರಮವಹಿಸಬೇಕು. ಎಲ್ಲ ಬ್ಯಾಂಕುಗಳು ಗ್ರಾಮವಾರು ಅಭಿಯಾನವನ್ನು ಹಮ್ಮಿಕೊಂಡು ಫಲಾನುಭವಿಗಳನ್ನು ಗುರುತಿಸಿ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಕ್ರಮವಹಿಸಿ. ನ. ೩೧ರೊಳಗಾಗಿ ಎಲ್ಲ ಅರ್ಹರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಸೂಚನೆ ನೀಡಿದರು.

ಬ್ಯಾಂಕ್ ಶಾಖೆ ಆರಂಭಿಸಿ: ರಾಷ್ಟ್ರೀಕೃತ ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ ಶಾಖೆಗಳನ್ನು ಆರಂಭಿಸಬೇಕು. ಭಾರತೀಯ ಸ್ಟೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್‌ಗಳಿಗೆ ಕನಿಷ್ಠ ಹೋಬಳಿ, ತಾಲೂಕು ಕೇಂದ್ರಗಳಲ್ಲಿ ಶಾಖೆಗಳ ಆರಂಭಿಸಲು ಗುರಿ ನಿಗದಿಪಡಿಸಲಾಗಿತ್ತು. ಪ್ರಮುಖ ಬ್ಯಾಂಕುಗಳು ಈ ವರೆಗೆ ಶಾಖೆ ತೆರೆದಿಲ್ಲ. ಆದರೆ ಇತರ ಬ್ಯಾಂಕ್‌ಗಳು ೧೧ ಶಾಖೆಗಳನ್ನು ತೆರೆದಿರುವುದು ಅಭಿನಂದಿಸುವೆ. ಪ್ರಮುಖ ಬ್ಯಾಂಕ್‌ಗಳಿಗೆ ಗುರಿ ನಿಗದಿಪಡಿಸಿದರೂ ಶಾಖೆ ಆರಂಭಿಸದೇ ಇರುವ ಬಗ್ಗೆ ಇವರಿಗೆ ಪತ್ರ ಬರೆದು ವಿವರ ಕೇಳಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಬ್ಯಾಂಕ್ ಆಫ್ ಬರೋಡಾ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ರವಿ ಎಚ್.ಜಿ. ಮಾತನಾಡಿ, ಜಿಲ್ಲೆಯಲ್ಲಿ ಸೆಪ್ಟೆಂಬರ್ ಅಂತ್ಯದ ವರೆಗೆ ಅಲ್ಪಸಂಖ್ಯಾತರಿಗೆ ₹೭೦೭.೬೩ ಕೋಟಿ, ದುರ್ಬಲ ವರ್ಗದವರಿಗೆ ₹೫೬೮೪.೪೫ ಕೋಟಿ ಹಾಗೂ ಮಹಿಳೆಯರಿಗೆ ₹೨೪೦೨.೬೦ ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನಬಾರ್ಡ್‌ (ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್)ನಿಂದ ೨೪-೨೫ನೇ ಸಾಲಿನ ಸಂಭಾವ್ಯ ಸಾಲ ಯೋಜನೆಯನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್ ಬಿಡುಗಡೆ ಮಾಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ವಿಷಯಗಳನ್ನು ಮಂಡಿಸಿದರು. ಬೆಂಗಳೂರು ಆರ್‌ಬಿಐ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಇಳಾಸಾಹು, ಕೆವಿಜಿ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಟಿ.ವಿ. ಭಾಗವತ್, ನಬಾರ್ಡ್ ಬ್ಯಾಂಕ್ ಅಧಿಕಾರಿ ರಂಗನಾಥ್ ಇತರರು ಇದ್ದರು.