ಸಾರಾಂಶ
ಶಿರಹಟ್ಟಿ: ಪಟ್ಟಣದಲ್ಲಿ ಹೊಸದಾಗಿ ತಲೆ ಎತ್ತುತ್ತಿರುವ ಬಡಾವಣೆಗಳಲ್ಲಿ ಯಾವುದೇ ಅಭಿವೃದ್ಧಿ, ಮೂಲ ಸೌಕರ್ಯಗಳಿಲ್ಲದಿದ್ದರೂ ಮುಖ್ಯಾಧಿಕಾರಿಗಳು ಮತ್ತು ಅಭಿಯಂತರರು ಯಾವುದನ್ನು ಗಮನಿಸದೇ ರಿಯಲ್ ಎಸ್ಟೇಟ್ ದಂಧೆಕೋರರೊಂದಿಗೆ ಶಾಮಿಲಾಗಿ ಬೇಕಾಬಿಟ್ಟಿ ಉತಾರ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಬೇಕು ಎಂದು ಶಾಸಕ ಡಾ.ಚಂದ್ರು ಕೆ.ಲಮಾಣಿ ತಾಕೀತು ಮಾಡಿದರು.
ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಬುಧವಾರ ಜರುಗಿದ ಪಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಈಗ ೬೦*೪೦ ನಿಯಮ ಬದಲಾಗಿದೆ. ನೂರಕ್ಕೆ ನೂರರಷ್ಟು ಸಂಪೂರ್ಣ ಹೊಸ ಲೇಔಟ್ ಅಭಿವೃದ್ಧಿಪಡಿಸಿದ ನಂತರವೇ ಉತಾರ ನೀಡಬೇಕೆಂಬ ಸರ್ಕಾರದ ನಿಯಮವಿದೆ. ಈ ನಿಯಮ ತಪ್ಪದೇ ಪಾಲನೆಯಾಗಬೇಕು ಎಂದರು.
ಸರ್ಕಾರದ ನಿಯಮಾನುಸಾರ ಸಂಪೂರ್ಣ ತೆರಿಗೆ ಹಣ ಭರಣಾ ಮಾಡಬೇಕು. ನೂತನ ಬಡಾವಣೆಗಳಲ್ಲಿ ವಿದ್ಯುತ್, ಚರಂಡಿ, ರಸ್ತೆ, ಉದ್ಯಾನ ವನ, ನೀರಿನ ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಎಲ್ಲವನ್ನು ಒದಗಿಸಿಕೊಡಬೇಕು.ಈ ಎಲ್ಲ ಸೌಲಭ್ಯ ಕಲ್ಪಿಸಿದ ನಂತರವೇ ಅಧಿಕಾರಿಗಳು ಪರಿಶೀಲನೆ ನಡೆಸಿ ಉತಾರ ನೀಡಬೇಕು ಎಂದು ಸೂಚನೆ ನೀಡಿದರು.ಈಗಾಗಲೇ ಪಪಂ ವ್ಯಾಪ್ತಿಗೆ ಒಳಪಡುವ ವಿದ್ಯಾನಗರ, ಶಬ್ಬೀರ ನಗರ, ಶಿವಲಿಂಗಪ್ಪ ಪ್ಲಾಟ್, ಫಕ್ಕೀರೇಶ್ವರ ನಗರ ಹೊರತುಪಡಿಸಿ ಇತ್ತಿಚಿನ ವರ್ಷಗಳಲ್ಲಿ ನಿರ್ಮಾಣವಾದ ಏಳುಕೋಟಿ ನಗರ, ಸಿಸಿ ನೂರಶೆಟ್ಟೆರ ಪ್ಲಾಟ್, ಎಸ್.ಆರ್.ಸ್ವಾಮಿ ಅವರ ಪ್ಲಾಟ್, ಕಪ್ಪತ್ತನವರ ಪ್ಲಾಟ್, ಕಣವಿ ಹೊಸೂರ ರಸ್ತೆಗೆ ಹೊಂದಿಕೊಂಡಿರುವ ಪ್ಲಾಟ್, ಛಬ್ಬಿ ರಸ್ತೆ, ಸೊರಟೂರ ರಸ್ತೆ, ಖಾನಾಪೂರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಬಡಾವಣೆಗಳಲ್ಲಿ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎನ್ನುವ ದೂರುಗಳಿವೆ. ಅಲ್ಲಿ ಉತಾರ ನೀಡಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಹೆಚ್ಚು ತೆರಿಗೆ ವಸೂಲಿ ಆರೋಪ: ಸರ್ಕಾರದ ನಿಯಮಾನುಸಾರ ಪಪಂಗೆ ಸಾರ್ವಜನಿಕರು ತೆರಿಗೆ ಹಣ ಕಟ್ಟಲು ಬರುತ್ತಿದ್ದು, ಹೆಚ್ಚುವರಿ ತೆರಿಗೆ ಹಣ ವಸೂಲ ಮಾಡುತ್ತಿದ್ದಾರೆ.ಸಾರ್ವಜನಿಕರು ನಿತ್ಯ ಪಪಂಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಸರಿಯಾಗಿ ತೆರಿಗೆ ಲೆಕ್ಕ ಮಾಡದೇ ದುಪ್ಪಟ್ಟು ಹಣ ವಸೂಲ ಮಾಡುತ್ತಿದ್ದು, ಮುಖ್ಯಾಧಿಕಾರಿಗಳು ಇದನ್ನು ಗಮನಿಸಬೇಕು ಎಂದು ಪಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪರಮೇಶ ಪರಬ ಆರೋಪಿಸಿದರು.ವಾರ್ಡ್ ನಂ.೬ರಲ್ಲಿ ಆಶ್ರಯ ನಿವೇಶನದಡಿ ಫಲಾನುಭವಿಗಳಿಗೆ ಪ್ಲಾಟ್ ಹಂಚಿಕೆ ಮಾಡಿದ್ದು, ಸರಿಯಾಗಿ ಉತಾರ ನೀಡದೇ ಲೋಪವೆಸಗಿದ್ದಾರೆ. ಒಂದೇ ಪ್ಲಾಟ್ ಇಬ್ಬರ ಹೆಸರಿನಲ್ಲಿ ನಮೂದು ಮಾಡಿದ್ದಾರೆ. ಮೂಲ ದಾಖಲೆ ಕೂಡ ಪಟ್ಟಣ ಪಂಚಾತಿಯಲ್ಲಿ ಲಭ್ಯವಿಲ್ಲ. ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ನಾಮನಿರ್ದೇಶಿತ ಸದಸ್ಯ ಸೋಮನಗೌಡ ಮರಿಗೌಡ್ರ ಆರೋಪಿಸಿದರು.
ಉಳಿದಂತೆ ಎಸ್‌ಸಿಪಿ, ಟಿಎಸ್‌ಪಿ, ೧೫ನೇ ಹಣಕಾಸು ಯೋಜನೆಯಡಿ ಕ್ರಿಯಾಯೋಜನೆ ತಯಾರಿ, ೨೦೨೩-೨೪ ಹಾಗೂ ೨೦೨೪-೨೫ನೇ ಸಾಲಿನ ೧೫ನೇ ಹಣಕಾಸು ಎಸ್‌ಎಫ್‌ಸಿ ಉಳಿತಾಯ ಮೊತ್ತದ ಕ್ರಿಯಾ ಯೋಜನೆ ಕುರಿತು ಚರ್ಚೆ ನಡೆಯಿತು.ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಪಪಂ ಮುಖ್ಯಾಧಿಕಾರಿ ಸವಿತಾ ತಾಂಬ್ಳೆ, ಸದಸ್ಯರಾದ ಮಂಜುನಾಥ ಘಂಟಿ, ಹಸರತ ಢಾಲಾಯತ, ಸಂದೀಪ ಕಪ್ಪತ್ತನವರ, ಮಹಾದೇವ ಗಾಣಗೇರ, ಅಲ್ಲಾಭಕ್ಷಿ ನಗಾರಿ, ರಂಗಪ್ಪ ಗುಡಿಮನಿ ಇದ್ದರು.