ಮಹದೇಶ್ವರ ವನ್ಯಧಾಮವನ್ನು ಹುಲಿ ಧಾಮವಾಗಿ ಮಾಡಬೇಡಿ:

| Published : Oct 28 2025, 12:20 AM IST

ಮಹದೇಶ್ವರ ವನ್ಯಧಾಮವನ್ನು ಹುಲಿ ಧಾಮವಾಗಿ ಮಾಡಬೇಡಿ:
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ಬಂಡೀಪುರ ಕ್ಯಾಂಪಸ್‌ನಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ಸಭೆಗೆ ಸೋಮವಾರ ತೆರಳುತ್ತಿದ್ದ ಹಾದಿಯಲ್ಲಿ ರೈತ ಸಂಘದ ನಾಲ್ಕು ಬಣದ ಪ್ರತಿಭಟನಾ ಸ್ಥಳಕ್ಕೆ ಪ್ರತ್ಯೇಕವಾಗಿ ಭೇಟಿ ನೀಡಿ ಮನವಿ ಆಲಿಸಿದರು.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ಬಂಡೀಪುರ ಕ್ಯಾಂಪಸ್‌ನಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ಸಭೆಗೆ ಸೋಮವಾರ ತೆರಳುತ್ತಿದ್ದ ಹಾದಿಯಲ್ಲಿ ರೈತ ಸಂಘದ ನಾಲ್ಕು ಬಣದ ಪ್ರತಿಭಟನಾ ಸ್ಥಳಕ್ಕೆ ಪ್ರತ್ಯೇಕವಾಗಿ ಭೇಟಿ ನೀಡಿ ಮನವಿ ಆಲಿಸಿದರು.

ಮೈಸೂರಿಂದ ಬಂಡೀಪುರಕ್ಕೆ ಸಚಿವ ಈಶ್ವರ್‌ ಖಂಡ್ರೆ ತಾಲೂಕಿನ ಬೇಗೂರಿನ ಬಸ್‌ ನಿಲ್ದಾಣದ ಬಳಿ ರೈತ ಸಂಘದ ವಾಸುದೇವ ಮೇಟಿ ಬಣದ ರೈತ ಸಂಘ, ಗುಂಡ್ಲುಪೇಟೆ ತಾಲೂಕು ಕಚೇರಿ ಆವರಣದಲ್ಲಿ ಕಳೆದ ೧೪ ದಿನಗಳಿಂದ ಅಹೋ ರಾತ್ರಿ ಧರಣಿ ನಡೆಸುತ್ತಿರುರುವ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘ, ತಾಲೂಕು ಕಚೇರಿ ದ್ವಾರದ ಬಳಿಕ ಮತ್ತೊಂದು ಬಣದ ರೈತಸಂಘ, ಮೇಲುಕಾಮನಹಳ್ಳಿ ಬಂಡೀಪುರ ಸಫಾರಿ ಕೇಂದ್ರದ ಬಳಿಯ ಅರಣ್ಯ ಕಚೇರಿ ಆವರಣದಲ್ಲಿ ಸಾಮೂಹಿಕ ನಾಯಕತ್ವದ ರೈತ ಸಂಘದ ಕಾರ್ಯಕರ್ತರ ಪ್ರತಿಭಟನಾ ಸ್ಥಳಕ್ಕೆ ತೆರಳಿ ರೈತಸಂಘದ ಮುಖಂಡರ ಮನವಿ ಆಲಿಸಿದರು.

ರೈತರ ಬೇಡಿಕೆಗಳೇನು?:

ಕಾಡು ಪ್ರಾಣಿಗಳ ಹಾವಳಿ, ಸಾಗುವಳಿ ಚೀಟಿ ನೀಡಲು ಅರಣ್ಯ ಇಲಾಖೆ ಎನ್‌ಒಸಿ ನೀಡದಿರುವುದು, ಸಫಾರಿ ಬಂದ್‌ ಮಾಡಬೇಕು. ಗೋಪಾಲಸ್ವಾಮಿ ಬೆಟ್ಟ ಹಾಗೂ ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಮುಕ್ತ ಅವಕಾಶ ನೀಡಬೇಕು. ಕೆರೆಗಳಿಗೆ ನೀರು ತುಂಬಿಸಬೇಕು. ಪರಿಹಾರದ ಬದಲು, ಬೆಳೆ ನಷ್ಟ ತುಂಬಿಕೊಡಬೇಕು. ಮಹದೇಶ್ವರ ವನ್ಯಧಾಮವನ್ನು ಹುಲಿ ಧಾಮವಾಗಿ ಮಾಡಬಾರದು. ಜನರು ಮೃತಪಟ್ಟರೆ ಹೆಚ್ಚಿನ ಪರಿಹಾರ ನೀಡಬೇಕು ಎಂಬ ಬೇಡಿಕೆ ಈಡೇರಿಸಬೇಕು ಎಂದು ನಾಲ್ಕು ಬಣದ ರೈತ ಸಂಘದ ಮುಖಂಡರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಮನವಿ ಆಲಿಸಿದ ಸಚಿವರು, ನಿಮ್ಮ ಬೇಡಿಕೆಗೆ ಈಡೇರಿಕೆಗೆ ಸರ್ಕಾರ ಮುಂದಿನ ದಿನಗಳಲ್ಲಿ ಎಲ್ಲಾ ಕ್ರಮ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.

ಪ್ರತಿಭಟನೆಗೂ ಮುನ್ನವೇ ಬಿಜೆಪಿ ಮುಖಂಡರ ಬಂಧನ:

ಅರಣ್ಯ ಸಚಿವರು ಬಂಡೀಪುರಕ್ಕೆ ತೆರಳುವ ಮಾರ್ಗದಲ್ಲಿ ಪ್ರತಿಭಟನೆಗೆ ಮುಂದಾದ ಸ್ಥಳೀಯ ಕೆಲ ಬಿಜೆಪಿ ಮುಖಂಡರನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದ ಮುಂದೆ ಅರಣ್ಯ ಸಚಿವರಿಗೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಮಂಡಲ ಬಿಜೆಪಿ ಅಧ್ಯಕ್ಷ ಮಹದೇವಪ್ರಸಾದ್‌ ಸೇರಿದಂತೆ ಕೆಲ ಬಿಜೆಪಿ ಪ್ರಮುಖರು ಮುಂದಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನೆಗೆ ಅವಕಾಶ ನೀಡಲು ಆಗುವುದಿಲ್ಲ ಎಂದು ಹೇಳಿದರೂ ಪ್ರತಿಭಟನೆಗೆ ಮುಂದಾದ ಹಿನ್ನೆಲೆ ಮಂಡಲ ಬಿಜೆಪಿ ಅಧ್ಯಕ್ಷ ಮಹದೇವಪ್ರಸಾದ್‌, ಗ್ರಾಪಂ ಅಧ್ಯಕ್ಷ ನಂಜಪ್ಪ, ಬಿಜೆಪಿ ಮುಖಂಡರಾದ ಪ್ರಣಯ್‌, ಶಿವಪುರ ಮಂಜು, ಹಂಗಳ ರಾಜಪ್ಪ, ಗರಗನಹಳ್ಳಿ ಮಹೇಂದ್ರ, ಬೊಮ್ಮನಹಳ್ಳಿ ವಿಜಿ, ಸಂತು, ಮಡಹಳ್ಳಿ ಜಗ ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು.

ವಶಕ್ಕೆ ಪಡೆದ ಬಿಜೆಪಿ ಮುಖಂಡರು ತಾಲೂಕಿನ ತೆರಕಣಾಂಬಿ ಪೊಲೀಸ್‌ ಠಾಣೆಯಲ್ಲಿ ಇರಿಸಿದ್ದು ,ಸಚಿವರು ಬಂಡೀಪುರದಲ್ಲಿ ಸಭೆ ನಡೆಸುತ್ತಿದ್ದ ಕಾರಣ ಸಂಜೆ ತನಕ ಬಿಟ್ಟಿರಲಿಲ್ಲ. ಸಚಿವರು ಗುಂಡ್ಲುಪೇಟೆ ತೆರಳಿದ ಬಳಿಕ ಬಂಧಿತ ಪ್ರತಿಭಟನಾಕಾರರನ್ನು ಬಿಡಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.ಈ ಸಮಯದಲ್ಲಿ ಶಾಸಕರಾದ ಎಚ್.ಎಂ.ಗಣೇಶ್‌ ಪ್ರಸಾದ್‌,ಅನಿಲ್‌ ಚಿಕ್ಕಮಾದು,ಕಾಂಗ್ರೆಸ್‌ ಮುಖಂಡರಾದ ಎಚ್.ಎಸ್.ನಂಜಪ್ಪ,ಎಚ್.ಎಸ್.ನಂಜುಂಡಪ್ರಸಾದ್‌,ಕೆ.ಎಸ್.ಮಹೇಶ್‌,ಸೋಮಹಳ್ಳಿ ಶಿವನಾಗಪ್ಪ,ಪುರಸಭೆ ಅಧ್ಯಕ್ಷ ಶಶಿಧರ್‌ ಪಿ ದೀಪು,ರೈತಸಂಘದ ಜಿಲ್ಲಾಧ್ಯಕ್ಷರಾದ ಶಿವಪುರ ಮಹದೇವಪ್ಪ,ಮಾಡ್ರಹಳ್ಳಿ ಮಹದೇವಪ್ಪ,ಹೊನ್ನೂರು ಪ್ರಕಾಶ್‌,ಡಾ.ಗುರುಪ್ರಸಾದ್‌, ತಾಲೂಕು ಅಧ್ಯಕ್ಷರಾದ ಹಂಗಳ ದಿಲೀಪ್‌,ಕುಂದಕೆರೆ ಸಂಪತ್ತು ಸೇರಿದಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗು ತಾಲೂಕು ಮಟ್ಟದ ಅಧಿಕಾರಿಗಳಿದ್ದರು.