ಸಾರಾಂಶ
- ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಅರಿವು ಸಪ್ತಾಹದಲ್ಲಿ ನ್ಯಾ. ರಾಜೇಶ್ವರಿ ಹೆಗಡೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಸಾರ್ವಜನಿಕ ಆಡಳಿತದ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ತೊಲಗಿಸಲು ಆಡಳಿತದಲ್ಲಿ ಪಾರದರ್ಶಕತೆ, ನಿಸ್ವಾರ್ಥ ಸೇವೆ ಸಾರ್ವಜನಿಕ ಸೇವೆಯಲ್ಲಿ ಮೂಡಿಬರಬೇಕಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ಮಂಗಳವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಾವಣಗೆರೆ ಲೋಕಾಯುಕ್ತ ವಿಭಾಗ ಆಶ್ರಯದಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಿ ನೌಕರರು, ಖಾಸಗಿ ವಲಯಗಳ ನೌಕರರು ಸೇರಿದಂತೆ ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕು. ಸ್ವಯಂ ಪ್ರೇರಿತವಾಗಿ ಭ್ರಷ್ಟಾಚಾರ ನಿರ್ಮೂಲನೆಗೆ ಅನೇಕರು ಹೋರಾಡುತ್ತಿದ್ದಾರೆ. ಅಂತಹವರಿಗೆ ಬೆಂಬಲ ನೀಡಬೇಕು ಎಂದ ಅವರು, ಸಾರ್ವಜನಿಕರು ಸಹ ತಮ್ಮ ಸೇವೆಗಳನ್ನು ಪಡೆಯಲು ಯಾವುದೇ ಲಂಚ, ಆಮಿಷಗಳನ್ನು ನೀಡದೇ ಸೂಕ್ತ ಮಾಹಿತಿ ಹಾಗೂ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದರು.
ಕೇಂದ್ರದಲ್ಲಿ ಸೆಂಟ್ರಲ್ ವಿಜಿಲೆನ್ಸ್ ಕಮಿಷನ್, ರಾಜ್ಯದಲ್ಲಿ ಲೋಕಾಯುಕ್ತ ಭ್ರಷ್ಟಾಚಾರದ ವಿರುದ್ಧ ಕಾರ್ಯನಿರ್ವಹಿಸುತ್ತಿವೆ. `ಭ್ರಷ್ಟಾಚಾರ ವಿರೋಧಿಸಿ, ರಾಷ್ಟ್ರದ ಏಳಿಗಾಗಿ ಸಮಗ್ರತೆಯ ಸಂಸ್ಕೃತಿ` ಎಂಬ ಧ್ಯೇಯ ವಾಕ್ಯದೊಂದಿಗೆ ಸರ್ದಾರ ವಲ್ಲಭಭಾಯಿ ಪಟೇಲ್ ಜನ್ಮದಿನ ಅಂಗವಾಗಿ ಪ್ರತಿ ವರ್ಷದಂತೆ ಜಿಲ್ಲೆಯಲ್ಲಿ ಭ್ರಷ್ಟಾಚಾರಮುಕ್ತ ಅರಿವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಪ್ರತಿ ಸರ್ಕಾರಿ ನೌಕರರಲ್ಲಿ ಕರ್ತವ್ಯಪ್ರಜ್ಞೆ, ಪ್ರಾಮಾಣಿಕತೆ ಮತ್ತು ಮಾನವೀಯತೆ ಇದ್ದಾಗ ಯಾವ ಸಮಸ್ಯೆಗಳು ಬರುವುದಿಲ್ಲ. ಜನನ, ಮರಣ ಪ್ರಮಾಣ ಪತ್ರ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಂಶವೃಕ್ಷ, ಇಂತಹ ಮೂಲ ಕೆಲಸಗಳನ್ನು ಯಾವುದೇ ವಿಳಂಬ ಮಾಡದೇ ತ್ವರಿತವಾಗಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ಟಾಳ್ ಮಾತನಾಡಿ, ಸರ್ಕಾರಿ ಅಧಿಕಾರಿ, ನೌಕರರು ಕಾನೂನಿನ ಚೌಕಟ್ಟು ಹಾಗೂ ಆತ್ಮಸಾಕ್ಷಿಯೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಕೆಲವೊಮ್ಮೆ ಕಾಯ್ದೆ, ಕಾನೂನಿನ ಆಚೆ ಕೆಲವು ವಿವೇಚನಾ ಅಧಿಕಾರ ಚಲಾಯಿಸುವ ಸಂದರ್ಭ ಒದಗಿಬರುತ್ತದೆ. ಅಂತಹ ಸಂದರ್ಭದಲ್ಲಿ ಪ್ರತಿ ಕೆಲಸವನ್ನು ನ್ಯಾಯಬದ್ದವಾಗಿ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕರ್ತತ್ಯನಿಷ್ಠತೆ ಸಮರ್ಪಕವಾಗಿ ಇರಬೇಕೆಂದರು.ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ಅಭಿಯಾನದ ಕುರಿತು ಜಾಗೃತಿ ಅರಿವು ಸಪ್ತಾಹ 2024ರ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
- - - -29ಕೆಡಿವಿಜಿ35ಃ:ದಾವಣಗೆರೆಯಲ್ಲಿ ನಡೆದ ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಉದ್ಘಾಟಿಸಿದರು.