ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದ ಸಚಿವರು, ಮುಖ್ಯಮಂತ್ರಿಗಳು ಒಂದು ಹೊಸ ಪ್ರಜಾಸೇವಾ ಇಲಾಖೆ ಎಂಬ ಸಚಿವಾಲಯ ಮಾಡಿ, ಸಾರ್ವಜನಿಕರ ಅಹವಾಲನ್ನು ತ್ವರಿತಗತಿಯಲ್ಲಿ ಬಗೆಹರಿಸುವುದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮೊದಲನೇ ಮತ್ತು ಮೂರನೇ ಶನಿವಾರ ಜಿಲ್ಲೆಯ, ತಾಲೂಕು, ಗ್ರಾಮಗಳಲ್ಲಿ ಸಭೆ ನಡೆಸಬೇಕು ಎಂದರು.
ಯಲ್ಲಾಪುರ: ನದಿ ಜೋಡಣೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಜಿಲ್ಲೆಯ ಎಲ್ಲ ಶಾಸಕರು ಬೆಂಬಲ ನೀಡುತ್ತಿದ್ದಾರೆ. ಈಗ ಯೋಜನೆಯಿಂದ ಜಿಲ್ಲೆಯ ಪರಿಸರಕ್ಕೆ, ಜನಜೀವನಕ್ಕೆ ಉಂಟಾಗುವ ಹಾನಿಯ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದರು.
ಅವರು ಶನಿವಾರ ಪಟ್ಟಣದ ಕಾರ್ಮಿಕ ಭವನದಲ್ಲಿ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.ಯೋಜನೆ ವಿರೋಧಿಸಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಯೋಜನೆಯ ಪರವಾಗಿರುವ ಹಾವೇರಿ, ಗದಗ ಭಾಗದ ಸ್ವಾಮೀಜಿಗಳು ಸ್ವರ್ಣವಲ್ಲೀ ಶ್ರೀಗಳೊಂದಿಗೆ ಸಭೆಯನ್ನೂ ನಡೆಸಿದ್ದಾರೆ. ಜಿಲ್ಲೆಯ ಜನರ ಭಾವನೆಯೊಂದಿಗೆ ನಾವು ಸದಾ ಇದ್ದೇವೆ. ರಾಜಕೀಯ ಉದ್ದೇಶದಿಂದ ಜನರ ದಿಕ್ಕು ತಪ್ಪಿಸಲು ಹಬ್ಬಿಸುವ ವದಂತಿಗಳಿಗೆ, ಊಹಾಪೋಹಗಳಿಗೆ ಜನತೆ ಕಿವಿಗೊಡಬಾರದು. ಜಿಲ್ಲೆಯ ಜನಪ್ರತಿನಿಧಿಗಳೆಲ್ಲ ಒಟ್ಟಾಗಿ ಜಿಲ್ಲೆಯ ಜನರ ಧ್ವನಿಯಾಗಿ ನಿಲ್ಲುತ್ತೇವೆ ಎಂದರು.
ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದ ಸಚಿವರು, ಮುಖ್ಯಮಂತ್ರಿಗಳು ಒಂದು ಹೊಸ ಪ್ರಜಾಸೇವಾ ಇಲಾಖೆ ಎಂಬ ಸಚಿವಾಲಯ ಮಾಡಿ, ಸಾರ್ವಜನಿಕರ ಅಹವಾಲನ್ನು ತ್ವರಿತಗತಿಯಲ್ಲಿ ಬಗೆಹರಿಸುವುದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮೊದಲನೇ ಮತ್ತು ಮೂರನೇ ಶನಿವಾರ ಜಿಲ್ಲೆಯ, ತಾಲೂಕು, ಗ್ರಾಮಗಳಲ್ಲಿ ಸಭೆ ನಡೆಸಬೇಕು.ಶಾಸಕರು ಪ್ರತಿ ಶನಿವಾರ ತಾಲೂಕು ಮತ್ತು ಗ್ರಾಪಂಗಳಲ್ಲೂ ಸಭೆ ನಡೆಸಿ ಅಹವಾಲು ಸ್ವೀಕರಿಸಬೇಕು. ಸ್ಥಳದಲ್ಲೇ ಹೆಚ್ಚಿನ ಬೇಡಿಕೆಗೆ ಪರಿಹಾರ ನೀಡಬೇಕು. ತಾಂತ್ರಿಕ ತೊಂದರೆಗಳಿದ್ದ ಅರ್ಜಿಗೆ ೧೫ ದಿನಗಳಲ್ಲಿ ಪರಿಹಾರ ನೀಡಬೇಕೆಂಬ ಉದ್ದೇಶದಿಂದ ಈ ಇಲಾಖೆಯನ್ನು ಪ್ರಾರಂಭಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ೬೦೧೪ ಅರ್ಜಿಗಳು ಈವರೆಗೆ ಬಂದಿದ್ದು, ೫೪೨೧ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಅಂದರೆ ಶೇ. ೯೦ರಷ್ಟು ಕಾರ್ಯ ಆಗಿದೆ. ಈಗಾಗಲೇ ಕ್ಷೇತ್ರದಲ್ಲಿ ಶಾಸಕ ಹೆಬ್ಬಾರ ೬ ಕಡೆ ಪ್ರಜಾಸೇವಾ ಸಭೆ ನಡೆಸಿದ್ದಾರೆ. ಯಲ್ಲಾಪುರದಲ್ಲಿ ೪೦೧೮ ಅರ್ಜಿಗಳು ಬಂದಿದ್ದು, ಈಗಾಗಲೇ ೯೯೩ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ನಾವು ಪ್ರಜಾಸೇವಾ ಆಂದೋಲನವನ್ನು ಬದ್ಧತೆಯಿಂದ ಮಾಡುತ್ತಿದ್ದೇವೆ. ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ, ಎಲ್ಲದಕ್ಕೂ ಪರಿಹಾರ ನೀಡುತ್ತೇವೆ ಎಂದರು.ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಮುಖ್ಯಮಂತ್ರಿಗಳು ಹೊಸದಾಗಿ ಜಾರಿಗೆ ತಂದಿದ್ದಾರೆ. ಸಾರ್ವಜನಿಕರಿಗೆ ಕಾಲಮಿತಿಯಲ್ಲಿ ಕೆಲಸ ಮಾಡಿಕೊಡಲಾಗುವುದು. ನ್ಯಾಯವಾದ ಬೇಡಿಕೆಗಳಿಗೆ ಸ್ಪಂದಿಸಿ ಜನಪರವಾಗಿ ಮಾಡುವ ಉದ್ದೇಶವೇ ಈ ಅಭಿಯಾನದ ಚಿಂತನೆಯಾಗಿದೆ ಎಂದರು.
ಎಂ.ಕೆ. ಭಟ್ಟ ಯಡಳ್ಳಿ, ಬೇಡ್ತಿ- ಅಘನಾಶಿನಿ ನದಿ ತಿರುವು ಯೋಜನೆ ಕುರಿತು ಸಚಿವರಿಗೆ ಮನವಿ ನೀಡಿದರು. ಅದಕ್ಕೆ ಸ್ಪಂದಿಸಿದ ಅವರು ಈ ಮೇಲಿನಂತೆ ಉತ್ತರಿಸಿದರು. ಪಟ್ಟಣದಲ್ಲಿ ಕಂಡ ಕಂಡಲ್ಲಿ ಮೀನು ಮಾರಲಾಗುತ್ತಿದೆ. ಮಾದರಿ ಶಾಲೆಯ ಸುತ್ತಲೂ ಅಂಗಡಿಗಳು ಬೆಳೆಯುತ್ತಿವೆ. ಇದರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆ ಆಗಿದೆ. ಇದನ್ನು ಖುಲ್ಲಾಪಡಿಸುವಂತೆ ವಿನಂತಿಸಿದಾಗ, ಶಾಸಕರು ಮಧ್ಯಪ್ರವೇಶಿಸಿ, ಈಗಾಗಲೇ ೨ ಬಾರಿ ಗೂಡು ಅಂಗಡಿಗಳನ್ನು ತೆರವು ಮಾಡಲಾಗಿತ್ತು. ಮತ್ತೆ ಅಂಗಡಿಗಳನ್ನು ಕಟ್ಟಿಕೊಂಡಿದ್ದಾರೆ. ಕೀಳಿಸಲು ಹೋದರೆ ರಾಜಕಾರಣ ಮಾಡುತ್ತಾರೆ. ಹಾಗಾಗಿ ಅಧಿಕಾರಿಗಳು ಚರ್ಚಿಸಿ, ನಿರ್ಣಯ ಕೈಗೊಳ್ಳಲು ಸೂಚಿಸಿದರು.ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ತಾಲೂಕಾಧ್ಯಕ್ಷ ಉಲ್ಲಾಸ ಶಾನಭಾಗ, ಜಿಲ್ಲಾಧಿಕಾರಿ ಜಿ.ಎಚ್. ನಾರಾಯಣರಾವ್, ಉಪ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಶಿರಸಿ ಸಹಾಯಕ ಆಯುಕ್ತ ಚಂದ್ರಶೇಖರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜಿಜ್ ಶೇಖ್, ಡಿವೈಎಸ್ಪಿ ಗೀತಾ ಪಾಟೀಲ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಮತ್ತಿತರ ಹಿರಿಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮೊರಾರ್ಜಿ ವಸತಿ ಶಾಲಾ ವಿದ್ಯಾರ್ಥಿಗಳು ವಂದೇ ಮಾತರಂ, ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಿದರು. ಡಿಡಿಪಿಐ ನಾಗರಾಜ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯಶ್ರೀ ಹಾನಗಲ್ ನಿರ್ವಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ವಂದಿಸಿದರು.