ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಮತ್ತು ಡಿಸ್ಟಲರಿ ಸ್ಥಾಪನೆಗೆ ಅನುಮತಿ ನೀಡದಂತೆ ಒತ್ತಾಯಿಸಿ ಬೆಂಗಳೂರಿನ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಭವನಕ್ಕೆ ತಾಲೂಕಿನ ವಿವಿಧ ಗ್ರಾಮಗಳ ರೈತರು, ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮತ್ತು ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮುತ್ತಿಗೆ ಹಾಕಿದರು. ಬೆಂಗಳೂರಿನ ಪರಿಸರ ಭವನ ಎದುರು ಕೋರಮಂಡಲ ಸಕ್ಕರೆ ಕಾರ್ಖಾನೆ ವಿರುದ್ಧ ಘೋಷಣೆ ಕೂಗುತ್ತಾ ಕಾರ್ಖಾನೆ ಜನ ವಿರೋಧಿ ಧೋರಣೆಯನ್ನು ಖಂಡಿಸಿದರು.
ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಯನ್ನು ಹೊರತುಪಡಿಸಿ ಎಥನಾಲ್ ಡಿಸ್ಟಿಲರಿ ಘಟಕ ಸ್ಥಾಪಿಸುವ ಏಕೈಕ ಉದ್ದೇಶದಿಂದ ಡಿ.6 ರಂದು ಕರೆದಿರುವ ಸಾರ್ವಜನಿಕ ಸಭೆಯನ್ನು ರದ್ದು ಮಾಡಬೇಕು. ಎಥನಾಲ್ ಡಿಸ್ಟಿಲರಿ ಘಟಕ ಸ್ಥಾಪನೆಯ ಪ್ರಸ್ತಾವನೆಯನ್ನು ಶಾಶ್ವತವಾಗಿ ಕೈಬಿಡುವಂತೆ ಒತ್ತಾಯಿಸಿದರು.ಕಾರ್ಖಾನೆ ಆಡಳಿತ ಮಂಡಳಿ ಆವರಣದಲ್ಲಿ ಅಪಾಯಕಾರಿ ಎಥನಾಲ್ ಮತ್ತು ಡಿಸ್ಪಲರಿ ನಿರ್ಮಾಣವಾದರೆ ಕಾರ್ಖಾನೆ ವ್ಯಾಪ್ತಿಯ ಗ್ರಾಮಗಳ ರೈತರ ಬದುಕು ನರಕವಾಗುತ್ತದೆ. ಕೂಡಲೇ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ನಿಮ್ಮ ಕೇಂದ್ರ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ ಪರಿಣಾಮವಾಗಿ ನೀವು ಕಾರ್ಖಾನೆಗೆ ಕಾಟಾಚಾರಕ್ಕೆ ಆಗಮಿಸಿ ಕಳ್ಳರಂತೆ ಕಾರ್ಖಾನೆ ಹಿಂಭಾಗಲಿನಿಂದ ಹೋಗಿದ್ದೀರಿ ಎಂದು ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷ ಶಾಂತ ತಿಮ್ಮಯ್ಯರಿಗೆ ತರಾಟೆಗೆ ತೆಗೆದುಕೊಂಡರು.ಎಥೆನಾಲ್ ಘಟಕ ಆರಂಭದಿಂದ ಕಾರ್ಖಾನೆ ಕೆಳಭಾಗದ ಹೇಮಾವತಿ ನದಿ ಮತ್ತು ಸುತ್ತಮುತ್ತಲ ಪರಿಸರದ ಮೇಲೆ ಆಗುವ ಹಾನಿಯನ್ನು ಪರಿಶೀಲನೆ ಮಾಡುವ ಬದಲು ಪರಿಸರ ಇಲಾಖೆ ಕಾರ್ಖಾನೆ ಪರನಿಂತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಮಾ. 6 ರಂದು ಕರೆದಿರುವ ಜನಾಭಿಪ್ರಾಯ ಸಂಗ್ರಹ ಸಭೆಯನ್ನು ರದ್ದು ಮಾಡಬೇಕು. ಶಾಶ್ವತವಾಗಿ ಎಥೆನಾಲ್ ಘಟಕ ಪ್ರಾರಂಭ ಮಾಡದಂತೆ ಲಿಖಿತವಾಗಿ ನಮಗೆ ನೀಡಿದರೆ ಪ್ರತಿಭಟನೆ ಹಿಂಪಡೆಯುವುದಾಗಿ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ. ಅನುಮತಿ ನೀಡಿದರೆ ಅನಿರ್ಧಿಷ್ಟಾವಧಿ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ತಾಲೂಕಿನ ಮಾಕವಳ್ಳಿ, ಕರೋಟಿ,ಕಾರಿಗನಹಳ್ಳಿ, ಹೆಗ್ಗಡಹಳ್ಳಿ, ವಡ್ಡರಹಳ್ಳಿ,ಲಿಂಗಾಪುರ, ಮಾಣಿಕನಹಳ್ಳಿ, ರಾಮನಹಳ್ಳಿ, ಕುಂದನಹಳ್ಳಿ, ಬೀಚೇನಹಳ್ಳಿ, ಚೌಡೇನಹಳ್ಳಿ, ಸೇರಿದಂತೆ ಅನೇಕ ಗ್ರಾಮಗಳ ನೂರಾರು ರೈತರು ಮತ್ತು ಮಹಿಳೆಯರು ಭಾಗವಹಿಸಿದ್ದರು.