ವಿಕಲಚೇತನರಿಗೆ ಅನುಕಂಪ ಬೇಡ, ಅವಕಾಶ ಕೊಡಿ

| Published : Jul 20 2024, 12:48 AM IST

ವಿಕಲಚೇತನರಿಗೆ ಅನುಕಂಪ ಬೇಡ, ಅವಕಾಶ ಕೊಡಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಕಲಚೇತನರ ವಿಶೇಷ ಕುಂದು ಕೊರತೆಗಳ ಸಭೆಯಲ್ಲಿ ಸ್ವೀಕೃತವಾದ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರು ಸ್ಪಂದಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ವಿಕಲಚೇತನರು ಅಸಹಾಯಕರಲ್ಲ, ಸದೃಢರಿಗಿಂತಲೂ ವಿಶಿಷ್ಟ ಸಾಧನೆ ಮಾಡಬಲ್ಲರು. ಅವರಿಗೆ ಬೇಕಿರುವುದು ಅನುಕಂಪ ಅಲ್ಲ, ಅವಕಾಶ ಕೊಡಿ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಕಲಚೇತನರ ವಿಶೇಷ ಕುಂದು ಕೊರತೆಗಳ ಸಭೆ ನಡೆಸಿ, ಅವರಿಂದ ಸ್ವೀಕೃತವಾದ ಸಮಸ್ಯೆಗಳಿಗೆ ಸ್ಪಂದಿಸಿ ಮಾತನಾಡಿದ ಅವರು, ವಿಕಲಚೇತನರ ಅಭಿವೃದ್ಧಿಗೆ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಶೇ.5ರಷ್ಟು ಅನುದಾನವನ್ನು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮೀಸಲಿರಿಸಬೇಕು. ಮನರೇಗಾ ಯೋಜನೆಯಡಿ 18ವರ್ಷ ಪೂರೈಸಿದ ವಿಕಲಚೇತನರಿಗೆ ಜಾಬ್‌ಕಾರ್ಡ್ ವಿತರಿಸಬೇಕು ಎಂದರು.

ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ಕಾರ್ಡ್‌ಗಳಲ್ಲಿ ಸಮಸ್ಯೆಗಳು ಕಂಡುಬಂದರೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.

ವಿಕಲಚೇತನರಿಗಾಗಿಯೇ ಸರ್ಕಾರ ಅನೇಕ ಸೌಲಭ್ಯ ಒದಗಿಸುತ್ತಿದ್ದು, ಅವರು ಸದ್ಭಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.

ಸರ್ಕಾರದ ಸಾರಿಗೆ ಬಸ್‌ಗಳಲ್ಲಿ ವಿಕಲಚೇತನರಿಗೆ ಸೀಟ್ ಕಡ್ಡಾಯ ಮೀಸಲಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಹಾಗೂ ಜಿಲ್ಲಾ ಬಸ್ ನಿಲ್ದಾಣಗಳಲ್ಲಿ ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸಬೇಕು. ಕೃಷಿ ಇಲಾಖೆಯಲ್ಲಿ ವಿಕಲಚೇತನರ ರೈತರಿಗೆ ಮೊದಲು ಅಧ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಯವರಿಗೆ ವಿಕಲಚೇತನರು ಹಲವು ಬೇಡಿಕೆಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಶರಣಗೌಡ ಪಾಟೀಲ್, ಕರ್ನಾಟಕ ರಾಜ್ಯ ವಿಕಲಚೇತನರ ಹಕ್ಕುಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಸಂಗನಗೌಡ ಧನರೆಡ್ಡಿ ರಾಜಕೋಳೂರು, ಜಿಲ್ಲಾಧ್ಯಕ್ಷ ಬಸವರಾಜ ಬೈರಮಡ್ಡಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ವಿಶ್ವನಾಥರೆಡ್ಡಿ ಆರ್. ಅಬ್ಬೆತುಮಕೂರ, ನಾಗೇಂದ್ರ ದೊರಿ ಸುರಪುರ, ಬಾಬು ಜಾನೆ ಶಹಾಪುರ, ರವಿ ಐಕೂರ ವಡಗೇರಾ, ಮಾಳಪ್ಪ ಪೂಜಾರಿ, ರಮೇಶ ಕೂಡ್ಲೂರು, ನಾಗರಾಜ ಶಹಪುರ, ಭೀಮರಾಯ ಯಾದಗಿರಿ ಇತರರಿದ್ದರು.