ಆರೋಗ್ಯವಂತ ಸಸಿಗಳ ಪಾಲನೆಯೇ ತಂಬಾಕು ಇಳುವರಿಗೆ ಸಹಕಾರಿ

| Published : May 02 2025, 01:30 AM IST

ಆರೋಗ್ಯವಂತ ಸಸಿಗಳ ಪಾಲನೆಯೇ ತಂಬಾಕು ಇಳುವರಿಗೆ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಟ್ರೈ ಸಸಿಗಳನ್ನು ಸಿದ್ದಮಾಡಿಕೊಂಡು ನಾಟಿ ಮಾಡಲು ಸಜ್ಜಾ

ಮುಕುಂದ ರಾವಂದೂರು

ಕನ್ನಡಪ್ರಭ ವಾರ್ತೆ ರಾವಂದೂರು

ಪಿರಿಯಾಪಟ್ಟಣ ತಾಲೂಕಿನಾದ್ಯಂತ ಪೂರ್ವ ಮುಂಗಾರು ಉತ್ತಮವಾಗಿ ಬೀಳುತ್ತಿದ್ದು, ತಂಬಾಕು ರೈತನ ಮುಖದಲ್ಲಿ ಮಂದಹಾಸ ಮೂಡುತ್ತಿದೆ, ತಾಲೂಕಿನ ರೈತರು ಈಗಾಗಲೇ ತಂಬಾಕು ನಾಟಿ ಮಾಡಲು ಭೂಮಿಯನ್ನು ಹದ ಮಾಡಿದ್ದು, ರೋಗ ಮುಕ್ತ ಸಸಿಗಳ ಪಾಲನೆ ಮಾಡುವುದು ಸವಾಲಿನ ಕೆಲಸವಾಗಿದೆ. ಬಹುತೇಕ ರೈತರು ಟ್ರೈ ಸಸಿಗಳನ್ನು ಸಿದ್ದಮಾಡಿಕೊಂಡು ನಾಟಿ ಮಾಡಲು ಸಜ್ಜಾಗಿದ್ದಾರೆ.

ರಾಜ್ಯದಲ್ಲೇ ಹೆಚ್ಚು ತಂಬಾಕು ಉತ್ಪಾದಿಸುವ ಪಿರಿಯಾಪಟ್ಟಣ ತಾಲೂಕಿನಲ್ಲಿ ಈ ಬಾರಿ ಕಳೆದ ಸಾಲಿಗಿಂತ ಹೆಚ್ಚು ತಂಬಾಕು ಬೆಳೆ ವಿಸ್ತೀರ್ಣ ಹೆಚ್ಚಾಗುವ ನಿರೀಕ್ಷೆ ಗೋಚರಿಸುತ್ತಿದೆ. ಕಳೆದ ಎರಡು ವರ್ಷದಲ್ಲಿ ನಿರೀಕ್ಷೆಗಿಂತ ಹೆಚ್ಚು ದರ ಲಭ್ಯವಾದ ಹಿನ್ನೆಲೆ ಈ ಬಾರಿ ಬೆಳೆಯ ಪ್ರಮಾಣವು ಹೆಚ್ಚಾಗುತ್ತಿದೆ.ಇದರಿಂದಾಗಿ ರೈತನ್ನು ಗುಣಮಟ್ಟದ ಸಸಿ ನಾಟಿ ಮಾಡಲು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ಅಧಿಕಾರಿಗಳಿಂದ ಮಾಹಿತಿ ಪಡೆದು ಆರೋಗ್ಯವಂತ ಸಸಿ ನಾಟಿ ಮಾಡಲು ಹರ ಸಾಹಸ ಪಡುತ್ತಿದ್ದಾನೆ, ಈ ನಿಟ್ಟಿನಲ್ಲಿ ತಂಬಾಕು ಸಂಶೋಧನಾ ಕೇಂದ್ರದ ಅಧಿಕಾರಿಗಳು ಕೆಲವೊಂದು ಕ್ರಮಗಳನ್ನು ಅನುಸರಿಸುವಂತೆ ರೈತರಲ್ಲಿ ಮನವಿ ಮಾಡಿದ್ದಾರೆ.

ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದ್ದು, ಸಸಿಗಳು ಆರಂಭಿಕ ಹಂತದಲ್ಲಿಯೇ ಕೊಳೆಯುತ್ತಿವೆ, ಇದನ್ನು ತಡೆಗಟ್ಟುವಲ್ಲಿ ಕೆಲವೊಂದು ಔಷಧಿಯನ್ನು ಸಿಂಪಡಿಸಬೇಕು ಎನ್ನುತ್ತಾರೆ ತಜ್ಞರು.

ಕೊಳೆ ರೋಗ ನಿಯಂತ್ರಣ

ಕೊಳೆ ರೋಗ ಕಂಡು ಬಂದಲ್ಲಿ 200 ಲೀಟರ್ ನೀರಿಗೆ ರೆಡೋಮಿಲ್ 250 ಗ್ರಾಂ ಜೊತೆಗೆ 100 ಗ್ರಾಂ ಗ್ಲೋಇಟ್ಟು ಮತ್ತು ಕಲ್ಪಾಕ್ 500 ಗ್ರಾಂ ಮಿಶ್ರಣ ಮಾಡಿ ರೋಗ ಬಂದಿರುವ ಸಸಿಗಳ ಸುತ್ತ ಒಂದು ಕಾಫಿ ಕುಡಿಯುವ ಲೋಟ್ ದಷ್ಟು ಸಸಿಯ ಬುಡಕ್ಕೆ ಬಿಡಬೇಕು ಹಾಗೂ ಭೂಮಿಯನ್ನು ಉಳುಮೆ ಮಾಡುವಾಗ ರೋಗ ಬಂದಿರುವ ಸಸಿಗಳ ಸುತ್ತ ಉಳುಮೆ ಮಾಡಬಾರದು. ಇದರಿಂದ ರೋಗ ಪಕ್ಕದ ಗಿಡಗಳಿಗೆ ಹರಡದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ.

ಸುಳಿ ಗಂಟು ರೋಗ ಅಥವಾ ಚೋಟರ ರೋಗ

ಜಮೀನಿನಲ್ಲಿ ನಾಟಿ ಮಾಡಿದ ಸಸಿಗಳಲ್ಲಿ ಸುಳಿ ಗಂಟು ರೋಗ ಕಂಡು ಬಂದರೇ ಅದರ ನಿಯಂತ್ರಣ ಬಹಳ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ ಗಿಡದ ಬೆಳವಣಿಗೆಗೆ ತೊಂದರೆಯಾಗುತ್ತದೆ, ಆದ್ದರಿಂದ ಗಂಟು ಕಂಡ ಬಂದಲ್ಲಿ ಗಂಟನ್ನು ಒಂದು ಪಿನ್ನಿನಿಂದ ಚುಚ್ಚಿ ಗಾಳಿ ಆಡುವಂತೆ ಮಾಡಿದರೆ ಸಾಕು ಅದರ ಒಳಗಿರುವ ಹುಳ ಸತ್ತು ಹೋಗುತ್ತದೆ. ನಂತರ ಲಾರ್ವ (ಇಮಾಮೆಕ್ಟಿನ್ ಬೆಂಝೋಯೆಟ್) 7.5 ಗ್ರಾಂ ಅನ್ನು ಅಥವಾ ಕೊರಜಾನ್ 7.5 ಎಂಎಲ್‌ ಮತ್ತು

5 ಗ್ರಾಂನ ಒಂದು ಪ್ಯಾಕೆಟ್ ಲೆಗಾಸ್ಸಿ ಅನ್ನು 15 ಲೀಟರ್ ಕ್ಯಾನಿಗೆ ಹಾಕಿ ಸಿಂಪಡಿಸಿದರೆ ಒಳ್ಳೆಯದು.

ಬೇರು ಗಂಟು - ಟ್ರೇ ಸಸಿಗಳಲ್ಲಿ ಬೇರು ಗಂಟು ತೊಂದರೆ ಕಂಡು ಬಂದರೇ ಅವುಗಳನ್ನು ಜಮೀನಿನಲ್ಲಿ ನಾಟಿ ಮಾಡಿದಗ ತಂಬಾಕು ಸಸಿಗಳ ಬೆಳವಣಿಗೆಯಲ್ಲಿ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತದೆ, ಇದರಿಂದಾಗಿ ರೈತರಿಗೆ ನಷ್ಟವಾಗುತ್ತದೆ, ಆದ್ದರಿಂದ 0.5 ಎಂಎಲ್‌ ವೆಲಮ್ ಪ್ರೈಮ್ / 1 ಲೀಟರ್ ನೀರಿಗೆ ಹಾಕಿ ಹೂ ಕ್ಯಾನಿನಲ್ಲಿ ಟ್ರೇ ಸಸಿಗಳಿಗೆ ಹಾಕಬೇಕು. ಔಷಧಿ ಹಾಕಿದ ನಂತರ ಗಿಡಗಳಿಗೆ ಮತ್ತೊಮ್ಮೆ ಹೂ ಕ್ಯಾನಿನಲ್ಲಿ ನೀರು ಹಾಕಬೇಕು, ಇದರಿಂದ ಎಲೆಗಳ ಮೇಲೆ ಸಿಂಪಡಿಸಿದ ಔಷಧಿ ಬೇರುಗಳಿಗೆ ತಲುಪಲು ಸಾಧ್ಯವಾಗುತ್ತದೆ.

ಎಲೆ ಚುಕ್ಕಿ ರೋಗ - ಮಳೆಯ ವಾತಾವರಣ ಮತ್ತು ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಎಲೆಚುಕ್ಕಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ ಆ ಸಂದರ್ಭದಲ್ಲಿ 10 ಗ್ರಾಂ ಗ್ಲೋಇಟ್ಟು ಮತ್ತು 5 ಗ್ರಾಂ ಲೆಗೆಸ್ಸಿ ಸಿಂಪಡಿಸಬೇಕು.

ಮೊಸಾಯಿಕ್ ರೋಗ ಮತ್ತು ಎಲೆ ಸುರಳಿ ರೋಗ

ಜೋಳ, ನವಣೆ, ಸಜ್ಜೆ ಇತರೆ ಬೆಳೆಗಳನ್ನು ಬೋರ್ಡ್ ಕ್ರಾಪ್ ಆಗಿ ಬೆಳೆಯಬೇಕು ಮತ್ತು ಬದುಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಮೊವೆಂಟೋ ಏನರ್ಜಿ 1 ಎಂಎಲ್‌. / ಲೀಟರ್ ಮತ್ತು ನಿಕೋನ್ (ನಿಕೋನ್) 3 ಎಂಎಲ್‌ /ಲೀಟರ್ ಅನ್ನು ಸ್ಪ್ರೇ ಕ್ಯಾನಿಗೆ ಹಾಕಿ ಸಿಂಪಡಿಸಬೇಕು.

ಕಾಂಡಕೊರಕ : ಸಸಿಯಲ್ಲಿ ಕಾಂಡಕೋರಕ ಅಥವಾ ಎಲೆ ತಿನ್ನುವ ಉಳದ ಸಮಸ್ಯೆಯಿದ್ದಲ್ಲಿ ಒಂದು ಪ್ಯಾಕೆಟ್ (5 ಗ್ರಾಂ) ಲೆಗೆಸ್ಸಿ ಜೊತೆಗೆ ಐದು ಗ್ರಾಂ ಲಾರ್ವ ಅಥವಾ 5 ಎಂಎಲ್‌ ಕೊರಾಜಿನ್ ಸಿಂಪಡಿಸಬೇಕು ಎನ್ನುತ್ತಾರೆ.

-----------------

ರೈತರು ನಾಟಿ ಮಾಡುವಾಗ ಬೇರುಗಂಟು ರೋಗ, ಸಸಿಯ ದಿಂಡಿನಲ್ಲಿ ಗಂಟು ಹಾಗೂ ದಿಂಡಿನಲ್ಲಿ ಕಪ್ಪು ಚುಕ್ಕಿ ಇರುವ ಸಸ್ಯಗಳನ್ನು ನಾಟಿ ಮಾಡದಂತೆ ಎಚ್ಚರಿಕೆ ವಹಿಸಬೇಕು. ತಂಬಾಕು ಸಸಿ ದಿಂಡು ಮುಟ್ಟಿದರೆ ನೀರು ಬರಬಾರದು ಹಾಗೂ ಸಸ್ಯಗಳ ಸುತ್ತ ಬಿಳಿ ಬೇರು ಸುತ್ತಿಕೊಂಡಿರುವ ಸಸಿಗಳನ್ನು ಹೆಚ್ಚು ನಾಟಿ ಮಾಡುವಂತೆ ಮುಂಜಾಗ್ರತೆ ವಹಿಸಬೇಕು.

- ಎಸ್. ರಾಮಕೃಷ್ಣನ್, ಸಿಟಿಆರ್‌ ಐ, ಮುಖ್ಯಸ್ಥರು, ಹುಣಸೂರು.