ಹತ್ತಿ ಬೀಜ ಖರೀದಿಗೆ ಗರಿಷ್ಠ ಮಿತಿ ಹಾಕದಿರಿ

| Published : Jul 06 2025, 01:48 AM IST

ಸಾರಾಂಶ

ಹತ್ತಿ ಬೀಜೋತ್ಪಾದನೆಗೆ ರೈತರನ್ನು ಪ್ರೇರೇಪಿಸಿ ಕಂಪನಿಗಳು ಪ್ರತಿ ಎಕರೆಗೆ ೨ ಕ್ವಿಂಟಲ್ ಹತ್ತಿ ಬೀಜ ಮಾತ್ರ ಖರೀದಿ ಮಾಡುತ್ತೇವೆ ಎಂದು ಹೇಳಿದ್ದರಿಂದ ರೈತರು ಆತಂಕಗೊಂಡು ಹತ್ತಿ ಬೆಳೆ ಕಿತ್ತೆಸೆಯಲು ಮುಂದಾಗಿದ್ದಾರೆ. ಅಲ್ಲದೆ ಕೆಲವೆಡೆ ರೈತರು ಕುರಿ, ಮೇಕೆ ಮೇಯಿಸುತ್ತಿದ್ದಾರೆ.

ಯಲಬುರ್ಗಾ:

ಹತ್ತಿ ಬೀಜದ ಉತ್ಪಾದನೆಯಲ್ಲಿ ಯಾವುದೇ ಗರಿಷ್ಠ ಮಿತಿ ಹಾಕದೆ, ಪೂರ್ಣ ಪ್ರಮಾಣದ ಇಳುವರಿಯನ್ನು ಸಂಬಂಧಿಸಿ ಕಂಪನಿ ಖರೀದಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ತಿಳಿಸಿದರು.

ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ನಡೆದ ಹತ್ತಿ ಬೀಜೋತ್ಪಾದನಾ ಕಂಪನಿ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹತ್ತಿ ಬೀಜೋತ್ಪಾದನೆಗೆ ರೈತರನ್ನು ಪ್ರೇರೇಪಿಸಿ ಕಂಪನಿಗಳು ಪ್ರತಿ ಎಕರೆಗೆ ೨ ಕ್ವಿಂಟಲ್ ಹತ್ತಿ ಬೀಜ ಮಾತ್ರ ಖರೀದಿ ಮಾಡುತ್ತೇವೆ ಎಂದು ಹೇಳಿದ್ದರಿಂದ ರೈತರು ಆತಂಕಗೊಂಡು ಹತ್ತಿ ಬೆಳೆ ಕಿತ್ತೆಸೆಯಲು ಮುಂದಾಗಿದ್ದಾರೆ. ಅಲ್ಲದೆ ಕೆಲವೆಡೆ ರೈತರು ಕುರಿ, ಮೇಕೆ ಮೇಯಿಸಲು ಮುಂದಾಗಿದ್ದಾರೆ. ಇದರಿಂದ ರೈತರು ಆರ್ಥಿಕವಾಗಿ ನಷ್ಟ ಅನುಭವಿಸಲಿದ್ದಾರೆ. ಈ ವರ್ಷದಿಂದ ಬೀಜ ಸಂಘಟಕರು, ಕಂಪನಿಗಳು ಹಾಗೂ ರೈತರ ನಡುವೆ ಕಡ್ಡಾಯವಾಗಿ ಕರಾರು ಒಪ್ಪಂದ ಮಾಡಿಕೊಳ್ಳಬೇಕು. ಸಂಘಟಿಕರು ತಮ್ಮ ಹೆಸರು, ಬೀಜೋತ್ಪಾದನೆ ಕೈಗೊಳ್ಳುತ್ತೀರುವ ಕಂಪನಿ ಹೆಸರು, ಉತ್ಪಾದನಾ ಕ್ಷೇತ್ರಗಳ ಪಟ್ಟಿ, ರೈತರ ಹೆಸರು, ಸವೇ ನಂಬರ್ ಎಲ್ಲ ವಿವರಗಳನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು ಎಂದರು.

ಜಿಲ್ಲಾಧಿಕಾರಿಗಳು ಬೀಜ ಉತ್ಪಾದಕ ಕಂಪನಿಗಳೊಂದಿಗೆ ಚರ್ಚಿಸಿ, ಅವರು ನೀಡಿದ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಸೂಚನೆ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಂಪನಿ ಪ್ರತಿನಿಧಿ ವಿನಾಯಕ ಪಾಟೀಲ್ ಮಾತನಾಡಿ, ಕಂಪನಿಗಳಲ್ಲಿಯೇ ಪೈಪೋಟಿ ಇದ್ದು, ಪ್ರಾರಂಭದಲ್ಲಿ ತೊಂದರೆಯಾಗಿತ್ತು. ಈಗ ಯಾವುದೇ ಸಮಸ್ಯೆ ಇಲ್ಲ. ಈ ವರ್ಷವೂ ರೈತರಿಂದ ಹತ್ತಿ ಬೀಜ ಖರೀದಿಸಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಭೆಯಲ್ಲಿ ತಿಳಿಸಿದರು.

ಸಭೆಯ ಬಳಿಕ ಬೀಜೋತ್ಪಾದನಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಚಿಕ್ಕೊಪ್ಪ ತಾಂಡಾದ ರೈತರ ಕ್ಷೇತ್ರಗಳಿಗೆ ಭೇಟಿ ಮಾಡಲಾಯಿತು. ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಅಭಯ ನೀಡಲಾಯಿತು.